
ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಬೇಡಿಕೆಗೆ ಸಿಎಂ ಮಾಧ್ಯಮ ಸಲಹೆಗಾರರ ಸಕರಾತ್ಮಕ ಸ್ಪಂದನೆ
ಕೆಕೆಆರ್ ಡಿಬಿ ವ್ಯಾಪ್ತಿಯ ಪತ್ರಿಕೆಗಳ ಪ್ರೋತ್ಸಾಹಕ್ಕೆ ಚರ್ಚಿಸುವೆ: ಕೆ.ವಿ.ಪ್ರಭಾಕರ್
ಕೊಪ್ಪಳ :ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮಪಟ್ಟಿಯಲ್ಲಿ ಇರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಪ್ರೋತ್ಸಾಹ ನೀಡುವ ಸಂಬಂಧ ಮಂಡಳಿಯ ಅಧ್ಯಕ್ಷರೊಂದಿಗೆ ಚರ್ಚಿಸಿ ಸೂಕ್ತ ಸಹಕಾರ ಕೊಡಿಸುವುದಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಭರವಸೆ ನೀಡಿದರು.
ಕೊಪ್ಪಳದ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರಧಾನ ಸಮಾರಂಭ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಭಾಕರ್ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಎಸ್. ಹರೀಶ್, ರಾಜ್ಯ ಸಮಿತಿ ಸದಸ್ಯ ವಿಶ್ವನಾಥ ಬೆಳಗಲ್ಮಠ, ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ಎಂ.ಜೆ ನೇತೃತ್ವದಲ್ಲಿ ಸಂಪಾದಕರ ಸಂಘದ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಪಾದಕರ ಸಂಘದ ಕೊಪ್ಪಳ ಜಿಲ್ಲಾ ಘಟಕದ ಪದಾಧಿಕಾರಿಗಳಾದ ವೆಂಕಟೇಶ ಕುಲಕರ್ಣಿ, ಬಸವರಾಜ ಗುಡ್ಲಾನೂರು, ವೀರಣ್ಣ ಕಳ್ಳಿಮನಿ, ನಿಂಗಪ್ಪ ದೊಡ್ಮನಿ, ಹನುಮಂತ ಹಳ್ಳಿಕೇರಿ, ವೈ. ನಾಗರಾಜ್ ಇತರರಿದ್ದರು.
ಸಂಘದ ಬೇಡಿಕೆಗಳೇನು…?:
ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ಮಂಡಳಿಗೆ ವಾರ್ಷಿಕ 5 ಸಾವಿರ ಕೋಟಿ ರೂಪಾಯಿ ಅನುದಾನ ಲಭಿಸುತ್ತಿದೆ. ಕಲಂ 371(ಜೆ) ಅಡಿ ಉದ್ಯೋಗ ಮತ್ತು ಶಿಕ್ಷಣಕ್ಕೆ ಮೀಸಲಾತಿ ನೀಡಲಾಗಿದೆ.ಈ ಪ್ರದೇಶದ ವ್ಯಾಪ್ತಿಯಲ್ಲಿನ 6 ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳು ಪ್ರಸಾರ ಹೊಂದಿವೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಈ ಭಾಗದ ಬಹುತೇಕ ಪತ್ರಿಕೆಗಳು ಎಸ್ಸಿ,ಎಸ್ಟಿ ಮತ್ತು ಓಬಿಸಿ ಸಮುದಾಯಕ್ಕೆ ಸೇರಿವೆ. ಈ ಪತ್ರಿಕೆಗಳ ಅಭಿವೃದ್ಧಿ ಏಳ್ಗೆ, ಉದ್ಯೋಗ ಅವಕಾಶದ ದೃಷ್ಟಿಯಿಂದ ಕೆಕೆಆರ್ ಡಿಬಿ ಯಿಂದ ಮಾಸಿಕ 2 ಪುಟಗಳ ಪ್ರೋತ್ಸಾಹ ರೂಪದ ಜಾಹೀರಾತು ಬಿಡುಗಡೆ ಮಾಡಿಸಬೇಕು.
- ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿನ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಜಾಹೀರಾತು ನೀತಿ 2013 ಅನುಷ್ಠಾನ ನಿಯಮಗಳು , 2014 ರ ಪ್ರಕಾರ ಪ್ರತಿ 2 ವರ್ಷಗಳಿಗೊಮ್ಮೆ ಅನ್ವಯವಾಗುವಂತೆ ಹಾಲಿ ಜಾಹೀರಾತು ದರಕ್ಕೆ ಶೇ.12ರಷ್ಟು ದರ ಹೆಚ್ಚಳ ಮಾಡಬೇಕು. ಈ ಜಾಹೀರಾತು ದರವನ್ನು ದಿನಾಂಕ: 01-04-2023 ರಿಂದ ಮತ್ತು ದಿನಾಂಕ: 01-04-2025 ರಿಂದ ಅನ್ವಯವಾಗುವಂತೆ ಹಾಲಿ ಜಾಹೀರಾತು ದರಕ್ಕೆ ಶೇ.12 ರಂತೆ ಒಟ್ಟಾರೆ ಶೇ.24 ರಷ್ಟು ಜಾಹೀರಾತು ದರ ಹೆಚ್ಚಳ ಮಾಡಬೇಕು.
- ಸರ್ಕಾರದ ಆದೇಶ ಇಲ್ಲದಿದ್ದರೂ ಇಲಾಖೆಯಿಂದ ಬಿಡುಗಡೆಯಾಗುವ ಜಾಹೀರಾತು ವೆಚ್ಚದ ಬಿಲ್ಲುಗಳಿಗೆ ಕಾನೂನು ಉಲ್ಲಂಘಿಸಿ ಶೇ.15ರಷ್ಟು ಕಮೀಷನ್ ಕಡಿತ ಮಾಡಲಾಗುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು. ಎಲ್ಲಾ ಜಾಹೀರಾತುಗಳನ್ನು ವಾರ್ತಾ ಇಲಾಖೆಯಿಂದಲೇ ಬಿಡುಗಡೆ ಮಾಡಬೇಕು.
- 05 ವರ್ಷದೊಳಗಿನ ಒಬಿಸಿ ಸಮುದಾಯದ ಮತ್ತು ಬ್ರಾಹ್ಮಣ ಸಮುದಾಯದ ಪತ್ರಿಕೆಗಳ ಬೆಳವಣಿಗೆಗೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆ ತಳಹದಿಯಲ್ಲಿ ಮಾಸಿಕ 01 ಪುಟದ ಪ್ರೋತ್ಸಾಹ ರೂಪದ ಜಾಹೀರಾತನ್ನು ಸರ್ಕಾರದ ವತಿಯಿಂದ ಬಿಡುಗಡೆ ಮಾಡಲು ಆದೇಶ ಹೊರಡಿಸಬೇಕು.
ಸಕರಾತ್ಮಕ ಸ್ಪಂದನೆ:
ಕಾರ್ಯಕ್ರಮದ ವೇದಿಕೆ ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಸಂಘದ ಬೇಡಿಕೆಗಳ ಬಗ್ಗೆ ಪ್ರಸ್ತಾಪ ಮಾಡಿದ ಕೆ.ವಿ. ಪ್ರಭಾಕರ್ ಅವರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಈ ಭಾಗದ 06 ಜಿಲ್ಲೆಗಳ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳಿಗೆ ಮಾಸಿಕ 02 ಪುಟಗಳ ಜಾಹೀರಾತು ಬಿಡುಗಡೆ ಮಾಡಿಸುವ ಸಂಬಂಧ ಸಂಪಾದಕರ ಸಂಘದ ಬೇಡಿಕೆ ಇರಿಸಿದೆ.ಈ ಬಗ್ಗೆ ಶೀಘ್ರ ಕೆಕೆಆರ್ ಡಿಬಿ ಅಧ್ಯಕ್ಷರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಅಲ್ಲದೇ 05 ವರ್ಷದೊಳಗಿನ ಓಬಿಸಿ ಸಮುದಾಯದ ಮಾಲೀಕತ್ವದ ಪತ್ರಕೆಗಳಿಗೆ ಮಾಸಿಕ 01 ಪುಟ ಜಾಹೀರಾತು ಸೇರಿದಂತೆ ವಿವಿಧ ಬೇಡಿಕೆಗಳನ್ನು ಪರಿಶೀಲಿಸಿ ಸೂಕ್ತವಾಗಿ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.