ಸಶಕ್ತಭಾರತ ನಿರ್ಮಾಣಕ್ಕಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಅವಶ್ಯಕ: _ಮುಖ್ಯ ಶಿಕ್ಷಕಿ ಎಂ.ವಿ.ಸವಿತ ಅಭಿಪ್ರಾಯ.

ಯರಬಳ್ಳಿ ಸರ್ಕಾರಿ ಪಿಎಂಶ್ರೀ ಶಾಲೆಯಲ್ಲಿ ಅರ್ಥಪೂಣ 79ನೇ ಸ್ವಾತಂತ್ರ್ಯೋತ್ಸವದ ಆಚರಣೆ:

ಹಿರಿಯೂರು/ಯರಬಳ್ಳಿ_ ಆಗಸ್ಟ್:16

“ಸ್ವಾತಂತ್ರ್ಯ ದಿನಾಚರಣೆ ಎಂದರೆ ಕೇವಲ ಧ್ವಜಾರೋಹಣಕ್ಕೆ ಸೀಮಿತವಾಗದೆ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದವರ ಸ್ಮರಣೆಮಾಡುವುದರ ಮೂಲಕ ನಮ್ಮ ಇಂದಿನ ಪೀಳಿಗೆಯ ಮಕ್ಕಳಿಗೆ ತಿಳಿಸಿಕೊಡಬೇಕಿದೆ. ಮಕ್ಕಳಿಗೆ ಕೇವಲ ಪುಸ್ತಕದ ಜ್ಞಾನ ಮಾತ್ರವಲ್ಲದೆ, ವ್ಯಕ್ತಿತ್ವ ವಿಕಸನಗೊಳಿಸುವ ಕೌಶಲ್ಯಪೂರ್ಣ ಮತ್ತು ನೈತಿಕ ಶಿಕ್ಷಣ ನೀಡುವುದರಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಮಾಡುವುದರಮೂಲಕ ಮಕ್ಕಳನ್ನು ದೇಶದ ಸಂಪತ್ತನ್ನಾಗಿ ರೂಪಿಸುವುದರ ಮೂಲಕ ಸಧೃಡ ಭಾರತ ನಿರ್ಮಾಣಕ್ಕೆ ನಾವು ಶ್ರಮಿಸಬೇಕಾಗಿದೆ  ಈ ಪ್ರಜೆಗಳೇ ಸದೃಢ ಮತ್ತು ಪ್ರಗತಿಪರ ಭಾರತವನ್ನು ನಿರ್ಮಿಸುವ ನಿಜವಾದ ಶಕ್ತಿ” ಎಂದು ಹಿರಿಯೂರು ತಾಲ್ಲೂಕು ಯರಬಳ್ಳಿ ಸರ್ಕಾರಿ ಪಿಎಂಶ್ರೀ ಶಾಲೆಯ ಮುಖ್ಯ ಶಿಕ್ಷಕಿ ಎಂ.ವಿ.ಸವಿತ ಅಭಿಪ್ರಾಯ ಪಟ್ಟಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಯರಬಳ್ಳಿ ಗ್ರಾಮದ ಸರ್ಕಾರಿ ಪಿ.ಎಂ.ಶ್ರೀ ಹಿರಿಯ ಮಾಧ್ಯಮಿಕ ಶಾಲೆವತಿಯಿಂದ ಶಾಲಾ ಆವರಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ “​ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಡಿಯಲ್ಲಿ ಪಿ ಎಂ ಶ್ರೀ ಆಯ್ಕೆಮಾಡಲಾಗುವ ಶಾಲೆಗಳಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿಯೇ ಉತ್ತಮ ಸರ್ಕಾರಿ ಪಿಎಂಶ್ರೀ ಶಾಲೆಯಾಗಿ ಆಯ್ಕೆಯಾಗಿರುವ ನಮ್ಮ ಯರಬಳ್ಳಿ ಗ್ರಾಮದ ಸರ್ಕಾರಿ ಶಾಲೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದು.ಯರಬಳ್ಳಿ ಸರ್ಕಾರಿ ಪಿಎಂಶ್ರೀ ಶಾಲೆ ದೇಶದ ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ಮಹತ್ವದ ಬದಲಾವಣೆಯನ್ನು ತರುವ ಗುರಿ ಹೊಂದಿದೆ. ಗುಣಮಟ್ಟದ ಸಮಗ್ರ ಮತ್ತು ಸಮಾನತೆಯ ಶಿಕ್ಷಣವನ್ನು ಒದಗಿಸುವಲ್ಲಿ ಶಾಲಾ ಮಕ್ಕಳ ಪೋಷಕರ ಮುಂದಾಳತ್ವ ಸಹ ಅಗತ್ಯವಾಗಿದೆ ಆಗಮಾತ್ರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಧೃಡ ಭಾರತ ನಿರ್ಮಾಣಕ್ಕಾಗಿ ಈ 79ನೇ ಸ್ವಾತಂತ್ರ್ಯ ದಿನದಂದು ನಾವೆಲ್ಲರೂ ಪಣತೊಟ್ಟು ಸ್ವಾತಂತ್ರ್ಯ ದಿನದ ಆಚರಣೆಗೆ ನಿಜವಾದ ಅರ್ಥವನ್ನು ಕಲ್ಪಿಸೋಣ ” ಎಂದು ಕರೆ ನೀಡಿದರು.

ಇದಕ್ಕೂ ಮೊದಲು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ತಿಪ್ಪೇಸ್ವಾಮಿ ಟಿ. ಮಾತನಾಡಿ “ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ, ಭಾರತ ಇನ್ನೂ ತನ್ನ ಸಂಪೂರ್ಣ ಸಾಮರ್ಥ್ಯವನ್ನು ತಲುಪಿಲ್ಲ. ದೇಶದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯು ಜಾಗತಿಕ ಗುಣಮಟ್ಟಕ್ಕೆ ಇನ್ನೂ ತಲುಪಿಲ್ಲ. ಸಧೃಢ ಭಾರತದ ನಿರ್ಮಾಣ ಎಂದರೆ ಕೇವಲ ಆರ್ಥಿಕ ಪ್ರಗತಿ ಸಾಧಿಸುವುದು ಮಾತ್ರವಲ್ಲ. ಸಧೃಢ ಭಾರತ ಎಂದರೆ ಸಾಮಾಜಿಕವಾಗಿ ನ್ಯಾಯಯುತ ಮತ್ತು ಮಾನವೀಯ ಮೌಲ್ಯಗಳನ್ನು ಹೊಂದಿರುವ ಸಮಾಜವನ್ನು ನಿರ್ಮಿಸುವುದು.

ನಮ್ಮ ದೇಶದಲ್ಲಿ ಮಕ್ಕಳು ಪ್ರಪಂಚದ ಭವಿಷ್ಯದ ಕನಸು. ಮಕ್ಕಳನ್ನು ದೇಶದ ಸುಂದರ ಕನಸು ಎಂದೂ ಕರೆಯಬಹುದು. ಪ್ರತಿಯೊಬ್ಬ ಮಗುವೂ ದೇಶದ ಸಂಪತ್ತು. ದೇಶದ ಭವಿಷ್ಯವು ಮಕ್ಕಳ ಕೈಯಲ್ಲಿದೆ. ಆರೋಗ್ಯವಂತ ಮತ್ತು ಸಧೃಢ ಭಾರತದ ನಿರ್ಮಾಣದಲ್ಲಿ ಮಕ್ಕಳ ಪಾತ್ರ ಬಹಳ ಮುಖ್ಯ.

ಅದಕ್ಕಾಗಿಯೇ, ಮಕ್ಕಳನ್ನು ಸರಿಯಾಗಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದು ಕೇವಲ ಓದುವುದು ಮತ್ತು ಬರೆಯುವುದು ಮಾತ್ರವಲ್ಲ, ವಿಜ್ಞಾನ, ಗಣಿತ ಮತ್ತು ಇತರ ವಿಷಯಗಳ ಬಗ್ಗೆ ಸಂಪೂರ್ಣ ಜ್ಞಾನವನ್ನು ಪಡೆಯುವುದು. ಮಕ್ಕಳು ಚಿಕ್ಕವರಿದ್ದಾಗ ಉತ್ತಮವಾದ ಶಿಕ್ಷಣವನ್ನು ಪಡೆದರೆ, ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುತ್ತಾರೆ. ಇದರಿಂದ ದೇಶವು ಆರ್ಥಿಕವಾಗಿ ಬೆಳೆಯಲು ಸಹಾಯವಾಗುತ್ತದೆ.

  ಮಕ್ಕಳಿಗೆ ಉತ್ತಮ ಸಂಸ್ಕೃತಿಯ ಬಗ್ಗೆ ಕಲಿಸುವುದು ಬಹಳ ಮುಖ್ಯ. ಇದರಿಂದ ಮಕ್ಕಳು ಕೇವಲ ಉತ್ತಮ ವೃತ್ತಿಜೀವನವನ್ನು ಹೊಂದಿರುವುದು ಮಾತ್ರವಲ್ಲದೆ, ದೇಶದ ಸಂಸ್ಕೃತಿಯನ್ನೂ ಅರ್ಥಮಾಡಿಕೊಂಡು ಅದರ ಬಗ್ಗೆ ಗೌರವವನ್ನು ಬೆಳೆಸಿಕೊಳ್ಳುತ್ತಾರೆ. ಇದರಿಂದ ಒಂದು ಸಮತೋಲಿತ ಸಮಾಜವನ್ನು ನಿರ್ಮಿಸಬಹುದು.

ಮಕ್ಕಳಿಗೆ ಆರೋಗ್ಯಕರವಾದ ಜೀವನಶೈಲಿಯನ್ನು ನೀಡುವುದು ಬಹಳ ಮುಖ್ಯ. ಪೋಷಕರು ಮಕ್ಕಳಿಗೆ ಉತ್ತಮ ಆಹಾರ, ವ್ಯಾಯಾಮ ಮತ್ತು ಆಟವಾಡಲು ಪ್ರೋತ್ಸಾಹಿಸಬೇಕು. ಹಾಗೆಯೇ, ಅವರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸಬೇಕು, ಇದರಿಂದ ಅವರು ಯಾವುದೇ ಭಯವಿಲ್ಲದೆ ಬೆಳೆಯಬಹುದು.

ಇವೆಲ್ಲವೂ ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಪೋಷಕರು, ಶಾಲೆಗಳು, ಶಿಕ್ಷಕರು ಮತ್ತು ಸಮಾಜದ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಸರ್ಕಾರವು ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಬೇಕು. ಶಾಲೆಗಳು ಗುಣಮಟ್ಟದ ಶಿಕ್ಷಣ ಮತ್ತು ಮಕ್ಕಳ ಸಾಮರ್ಥ್ಯವನ್ನು ಬೆಳೆಸುವ ವಾತಾವರಣವನ್ನು ಒದಗಿಸಬೇಕು. ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಬೆಂಬಲವನ್ನು ನೀಡಬೇಕು.

ಭಾರತವು ಮುಂದಿನ ದಿನಗಳಲ್ಲಿ ಶಕ್ತಿಯುತ ರಾಷ್ಟ್ರವಾಗಬೇಕಾದರೆ, ಮಕ್ಕಳ ಭವಿಷ್ಯವು ಉಜ್ವಲವಾಗಿರಬೇಕು. ಶಿಕ್ಷಣ, ಆರೋಗ್ಯ, ನೈತಿಕತೆ, ಸಂಸ್ಕೃತಿ ಮತ್ತು ಸೃಜನಶೀಲತೆಯಂತಹ ವಿಷಯಗಳಿಗೆ ಹೆಚ್ಚು ಒತ್ತು ನೀಡಿದಾಗ ಮಾತ್ರ ಅದು ಸಾಧ್ಯ. ಅಂತಹ ಉತ್ತಮ ಶಿಕ್ಷಣ ನೀಡುವಲ್ಲಿ ಯರಬಳ್ಳಿ ಸರ್ಕಾರಿ ಪಿಎಂಶ್ರೀ ಶಾಲೆ ಶ್ರಮಿಸುತ್ತಿರುವುದು ಅಂಬಿನಂದನಾರ್ಹವಾಗಿದೆ” ಎಂದು ಶ್ಲಾಘಿಸಿದರು. 

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಗಿನ 6:30ರ ವೇಳೆಗೆ ಸುರಿಯುತ್ತಿದ್ದ ತುಂತುರು ಮಳೆಯನ್ನು ಲೆಕ್ಕಿಸದೆ ಶಾಲಾ ಮಕ್ಕಳು ಶಿಕ್ಷಕ ವರ್ಗ ಶಾಲೆಯ ಸುತ್ತಮುತ್ತ ಸ್ವಚ್ಛತೆಯನ್ನು ಮಾಡಿ ಶಿಸ್ತಿನಿಂದ ಯರಬಳ್ಳಿ ಗ್ರಾಮದ ಬೀದಿಗಳಲ್ಲಿ ಪ್ರಭಾತ್ ಪೇರಿ ನಡಿಸಿ ರಸ್ತೆಯ ಉದ್ದಕ್ಕೂ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹಾ ನಾಯಕರಿಗೆ ಭಾರತಾಂಬೆಗೆ ಜಯ ಘೋಷವನ್ನು ಕೂಗುತ್ತಾ ಗ್ರಾಮದ ಜನರಿಗೆ ಸ್ವಾತಂತ್ರ್ಯ ದಿನದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು.

ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನದ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು ಸಂಜೆ ಸುಮಾರು 5:00 ಗಂಟೆ ವರೆಗೂ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗ್ರಾಮಸ್ಥರ ಮೆಚ್ಚುಗೆಗಳಿಸಿತು. ಎಲ್ಲಾ ಮಕ್ಕಳು ಹಾಗೂ ಪೋಷಕರಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಲಿಂಗರಾಜು ಪಿ ರಾಜಪ್ಪ ನೀಲಕಂಠ್ ಸಿಎಂ ಮಾರುತಿ ಟಿವಿ ಮಂಜುನಾಥ್ ಸಿಬಿ ಶಾರದಮ್ಮ ಎಲ್ ಸಂತೋಷ್ ಕುಮಾರ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.

ಸಶಕ್ತಭಾರತ ನಿರ್ಮಾಣಕ್ಕಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಅವಶ್ಯಕ: _ಮುಖ್ಯ ಶಿಕ್ಷಕಿ ಎಂ.ವಿ.ಸವಿತ ಅಭಿಪ್ರಾಯ.