ರಾಜ್ಯ ಹಾತ್‍ಕರ್ಗಾ ವಿಶೇಷ ಕೈಮಗ್ಗ ಮೇಳಕ್ಕೆ ಶಾಸಕ ಕೆ.ಎಸ್.ನವೀನ್ ಚಾಲನೆ

ಕೈಮಗ್ಗ ಉತ್ಪನ್ನಗಳಿಗೂ ಸಿಗಲಿ “ಎಂಎಸ್‍ಪಿ”

ಕೈಮಗ್ಗ ನೇಕಾರರಿಂದ ತಯಾರಿಸಲ್ಪಟ್ಟ ಕೈಮಗ್ಗ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಸಿಗುವಂತಾಗಬೇಕು ಎಂದು ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಅಭಿಪ್ರಾಯಪಟ್ಟರು.

ನಗರದ ವಿ.ಪಿ.ಬಡಾವಣೆಯ ಉಮಾಪತಿ ಕಲ್ಯಾಣ ಮಂಟಪದಲ್ಲಿ ಬುಧವಾರ ಸಂಜೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಕೇಂದ್ರ ಪುರಸ್ಕøತ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ಕಾರ್ಯಕ್ರಮ ಯೋಜನೆಯಡಿ ಗಾಂಧಿಜಯಂತಿ, ದಸರಾ ಹಬ್ಬದ ಪ್ರಯುಕ್ತ ಏರ್ಪಡಿಸಲಾದ ರಾಜ್ಯ ಹಾತ್‍ಕರ್ಗಾ ವಿಶೇಷ ಕೈಮಗ್ಗ ಮೇಳ-ವಸ್ತ್ರಾಂಜಲಿ- ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನೂತನ ಜವಳಿ ನೀತಿ ಜಾರಿಗೆ ರಾಜ್ಯ ಸರ್ಕಾರ ಕ್ರಮವಹಿಸಿದ್ದು, ಅದರಲ್ಲಿ ಕೈಮಗ್ಗ ನೇಕಾರರಿಗೆ ವಿಶೇಷ ಆದ್ಯತೆ ನೀಡಬೇಕಿದೆ. ರೈತರು ಬೆಳೆದ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗಧಿಪಡಿಸಿದಂತೆ, ಕೈಮಗ್ಗ ಉತ್ಪನ್ನಗಳಿಗೂ ರಾಜ್ಯ ಸರ್ಕಾರ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡಬೇಕು. ಕೈಮಗ್ಗ ನೇಕಾರರ ಶ್ರಮದ ಲಾಭವನ್ನು ಟ್ರೇಡರ್ಸ್‍ರವರು ಹಾಗೂ ದೊಡ್ಡ ಮಳಿಗೆಯವರು ಪಡೆಯುವುದಕ್ಕಿಂತ, ಕೈಮಗ್ಗ ಉತ್ಪನ್ನ ತಯಾರಿಸಿದ ನೇಕಾರರಿಗೆ ಇದರ ಪ್ರತಿಫಲ ಸಿಗುವಂತಾಗಬೇಕು ಎಂದು ಹೇಳಿದರು.

ಕೈಮಗ್ಗ ನೇಕಾರರಿಗೆ ಇ-ಕಾಮರ್ಸ್ ಪ್ಲಾಟ್‍ಫಾರಂನಲ್ಲಿ ವಿಶೇಷ ಸ್ಥಾನ ಕೊಡುವ ಅಗತ್ಯವಿದೆ. ಇದರ ಜೊತೆಗೆ ಬ್ರ್ಯಾಂಡಿಂಗ್, ಮಾರುಕಟ್ಟೆ ವ್ಯವಸ್ಥೆಗಳು ದೊರೆಯಬೇಕು. ಈ ಕುರಿತು ಜವಳಿ ಸಚಿವ ಶಿವಾನಂದ ಎಸ್ ಪಾಟೀಲ್ ಅವರಿಗೆ ಮನವಿ ಮಾಡಲಾಗಿದ್ದು, ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಮೊಳಕಾಲ್ಮುರು ರೇಷ್ಮೆ ಸೀರೆಗೆ ಜಿಐ ಟ್ಯಾಗ್ ದೊರೆತಿರುವುದು ಸಂತೋಷದ ಸಂಗತಿ. ಮೊಳಕಾಲ್ಮುರಿನಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೂ ಸಹ ಮನವಿ ಮಾಡಲಾಗಿದ್ದು, ಜವಳಿ ಪಾರ್ಕ್ ನಿರ್ಮಾಣ ಸಂಬಂಧ ಜವಳಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಆಯುಕ್ತರು ಮೊಳಕಾಲ್ಮುರಿಗೆ ಆಗಮಿಸಿ, ಶೀಘ್ರದಲ್ಲಿಯೇ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳ ಅಧ್ಯಕ್ಷ ಬಿ.ಜೆ.ಗಣೇಶ್ ಮಾತನಾಡಿ, ಕೈಮಗ್ಗ ಕ್ಷೇತ್ರವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುತ್ತಿದೆ. ನಶಿಸಿಹೋಗುತ್ತಿರುವ ಉದ್ಯಮವನ್ನು ಉಳಿಸುವ ಸಲುವಾಗಿ ರಾಜ್ಯ ಸರ್ಕಾರ ನೂತನ ಜವಳಿ ನೀತಿಯನ್ನು ರೂಪಿಸುತ್ತಿದೆ ಎಂದು ಹೇಳಿದರು.

ಬೇರೆ ಬೇರೆ ರಾಜ್ಯಗಳು ಹಾಗೂ ತಮಿಳುನಾಡಿನ ಮಾದರಿಯನ್ನು ಅನುಸರಿಸಿ, ವಿನ್ಯಾಸ, ತಂತ್ರಜ್ಞಾನ, ಉದ್ಯೋಗ ಸೃಷ್ಠಿ ಹಾಗೂ ಯುವ ಜನತೆಯನ್ನು ಕೈಮಗ್ಗ ಕ್ಷೇತ್ರಕ್ಕೆ ಸೆಳೆಯಲು ಚರ್ಚೆಯೂ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರಿನಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿ, ಕೈಮಗ್ಗ ನೇಕಾರರು ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಹಾಗೂ ನೇಕಾರರಿಗೆ ನಿರಂತರ ಉದ್ಯೋಗ ಕಲ್ಪಿಸಲು ಈ ಮೇಳ ಸಹಕಾರಿಯಾಗಿದೆ. ಗ್ರಾಹಕರು ಹೆಚ್ಚು ಹೆಚ್ಚು ಖಾದಿ ವಸ್ತ್ರಗಳನ್ನು ಬಳಕೆ ಮಾಡುವ ಮೂಲಕ ಸ್ವದೇಶಿ ವಸ್ತ್ರನೀತಿ ಸಂಹಿತೆಗೆ ಹಾಗೂ ಆರೋಗ್ಯದ ಹಿತದೃಷ್ಠಿಯಿಂದಲೂ ಖಾದಿ ಬಳಕೆ ಉತ್ತಮ ಎಂದು ತಿಳಿಸಿದ ಅವರು, ಚಿತ್ರದುರ್ಗದಲ್ಲಿ ಆಯೋಜಿಸುವ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಲಕ್ಷ್ಮಣ್ ತಳವಾರ್ ಮಾತನಾಡಿ, ಕೇಂದ್ರ ಪುರಸ್ಕøತ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ಕಾರ್ಯಕ್ರಮ ಯೋಜನೆಯಡಿ ಗಾಂಧಿ ಜಯಂತಿ, ದಸರಾ ಹಬ್ಬದ ಪ್ರಯುಕ್ತ ಸೆ.17 ರಿಂದ 30 ರವರೆಗೆ ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ “ವಸ್ತ್ರಾಂಜಲಿ-2025 ಹೆಸರಿನಲ್ಲಿ ರಾಜ್ಯ ಹಾತ್‍ಕರ್ಗಾ ವಿಶೇಷ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯ, ಹೊರ ಜಿಲ್ಲೆಯ ಹಾಗೂ ಹೊರ ರಾಜ್ಯಗಳ ಕೈಮಗ್ಗ ನೇಕಾರ ಸಹಕಾರ ಸಂಘಗಳ ನೇಕಾರರಿಂದ ಉತ್ಪಾದಿಸಲ್ಪಟ್ಟ ಕೈಮಗ್ಗ ಉತ್ಪನ್ನಗಳ ಮಾರಾಟವನ್ನು ಉತ್ತೇಜಿಸುವ ಸಲುವಾಗಿ ಮೇಳ ಆಯೋಜಿಸಿದ್ದು, ಈ ಮೇಳದ ಅವಧಿಯಲ್ಲಿ ರಾಜ್ಯ ಸರ್ಕಾರದಿಂದ ಶೇ.20ರಷ್ಟು ರಿಯಾಯಿತಿ ದರಲ್ಲಿ ಕೈಮಗ್ಗ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿದೆ. ಮೇಳದಲ್ಲಿ ಜಿಲ್ಲೆಯ ಪ್ರಖ್ಯಾತ ಮೊಳಕಾಲ್ಮುರು ಅಪ್ಪಟ ರೇಷ್ಮೆ ಸೀರೆಗಳು, ಚಳ್ಳಕೆರೆಯ ವಿವಿಧ ನಮೂನೆಯ ಉಣ್ಣೆ ಕಂಬಳಿಗಳು ಹಾಗೂ ವಿವಿಧ ಜಿಲ್ಲೆಗಳಲ್ಲಿ ಉತ್ಪಾದಿಸುತ್ತಿರುವ ಹತ್ತಿ ಕೈಮಗ್ಗದ ಉತ್ಪನ್ನಗಳು ನೇಕಾರ ಸಹಕಾರ ಸಂಘಗಳಿಂದ ನೇರವಾಗಿ ಗ್ರಾಹಕರಿಗೆ ಮಾರಾಟಕ್ಕೆ ಲಭ್ಯವಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಎಂ.ಪಿ.ಅನಿತಾ ರಮೇಶ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ತುಮಕೂರು ಪೂರ್ವವಲಯ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀಧರ ನಾಯಕ, ಬೆಂಗಳೂರು ನೇಕಾರರ ಸೇವಾ ಕೇಂದ್ರದ ಸಿ.ಪ್ರಭಾಕರನ್, ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ತಿಪ್ಪೇಸ್ವಾಮಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ ನಾಗಸಮುದ್ರ ಸೇರಿದಂತೆ ಮತ್ತಿತರರು ಇದ್ದರು.

ರಾಜ್ಯ ಹಾತ್‍ಕರ್ಗಾ ವಿಶೇಷ ಕೈಮಗ್ಗ ಮೇಳಕ್ಕೆ ಶಾಸಕ ಕೆ.ಎಸ್.ನವೀನ್ ಚಾಲನೆ