ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ ಜಾಗೃತಿ ಜಾಥಾಕ್ಕೆ ನ್ಯಾಯಾಧೀಶ ಡಿ.ಜೆ.ಸುದೀನ್ ಕುಮಾರ್ ಚಾಲನೆ ಬಾಲಕಾರ್ಮಿಕ ಪದ್ಧತಿಯನ್ನು ಕೇವಲ ವಿರೋಧಿಸುವುದಲ್ಲ, ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್12:
ಬಾಲಕಾರ್ಮಿಕ ಮತ್ತು ಬಾಲ ಕಿಶೋರ ಕಾರ್ಮಿಕ ಪದ್ಧತಿಯನ್ನು ಕೇವಲ ವಿರೋಧಿಸುವುದಲ್ಲ, ಅದನ್ನು ಸಮಾಜದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಿ.ಜೆ.ಸುದೀನ್ ಕುಮಾರ್ ಅವರು ಕರೆ ನೀಡಿದರು.
ನಗರದ ಹೊಳಲ್ಕೆರೆ ರಸ್ತೆಯ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲಾ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ವಕೀಲರ ಸಂಘ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಅಶ್ರಿತ ಸಂಸ್ಥೆ ಹಾಗೂ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ’ದ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳು ನಮ್ಮ ದೇಶದ ಆಸ್ತಿ ಮತ್ತು ನಮ್ಮ ಭವಿಷ್ಯ ಅವರು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ, ಜ್ಞಾನವಂತರಾಗಿ, ಬುದ್ಧಿವಂತರಾಗಿ ಬೆಳೆಯಬೇಕು. ತಮ್ಮ ಕುಟುಂಬ, ಸಮಾಜ ಹಾಗೂ ದೇಶದ ಪ್ರಗತಿಗೆ ಕೊಡುಗೆ ನೀಡುವ ಮೂಲಕ ಸದೃಢ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಇಂತಹ ಆರೋಗ್ಯವಂತ ಸ್ಪರ್ಧೆಯನ್ನು ನೀಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕರು ಹಾಗೂ ಪಾಲಕರು ಮಕ್ಕಳನ್ನು ಬೆಳೆಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಮಕ್ಕಳ ಹಿತರಕ್ಷಣೆ ಮಾಡುವುದು ಮತ್ತು ಅವರ ಹಕ್ಕುಗಳನ್ನು ನಾವು ತಿಳಿದುಕೊಂಡು ಅವರಿಗೆ ತಲುಪಿಸುವುದು ನಮ್ಮ ಕರ್ತವ್ಯವಾಗಿದೆ. ಯಾವುದೇ ಕಾರಣಕ್ಕೂ ಮಕ್ಕಳ ಹಕ್ಕುಗಳನ್ನು ಹತ್ತಿಕ್ಕಬಾರದು. ಪೋಷಕರು, ಹಿರಿಯರು, ಪಾಲಕರು, ಅಧಿಕಾರಿ ವರ್ಗ ಹಾಗೂ ಸ್ವಯಂಸೇವಾ ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬರಿಗೂ ಈ ಜವಾಬ್ದಾರಿ ಇದೆ ಎಂದು ತಿಳಿಸಿದ ಅವರು, ನಿಮ್ಮ ಕಣ್ಣಿಗೆ ಎಲ್ಲಾದರೂ ಬಾಲಕಾರ್ಮಿಕ ಪದ್ಧತಿ ಕಂಡುಬಂದಲ್ಲಿ ಅಥವಾ ನಿಮ್ಮ ಗಮನಕ್ಕೆ ಬಂದಲ್ಲಿ ತಕ್ಷಣವೇ ಮಕ್ಕಳ ರಕ್ಷಣೆಗೆ ಧಾವಿಸಬೇಕು. ‘ನಮಗೇಕೆ ಬೇಕು, ಯಾರು ಮಾಡುವರು’ ಎನ್ನುವ ಅಸಡ್ಡೆ ಹಾಗೂ ಬೇಜವಾಬ್ದಾರಿತನದ ವರ್ತನೆಯನ್ನು ಸಮಾಜ ಕೈಬಿಡಬೇಕು. ನಮ್ಮ ಮನೋಭಾವನೆ ಬದಲಾಯಿಸಿಕೊಂಡು ದೇಶ ನಿರ್ಮಾಣದ ಇಂತಹ ಪ್ರಮುಖ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಬಾಲಕಾರ್ಮಿಕ ಪದ್ಧತಿ ಕೇವಲ ಮಕ್ಕಳ ಸಮಸ್ಯೆಯಲ್ಲ, ಇದು ಇಡೀ ದೇಶದ ಸಮಸ್ಯೆ ಎಂದು ತಿಳಿಸಿದರು.
ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಗಾಯತ್ರಿ ಸರ್ಕಲ್ ಬಳಿಯ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲಾ ಆವರಣದಲ್ಲಿ  ಆರಂಭವಾದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಜಾಗೃತಿ ಜಾಥಾವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.  
ಜಾಥಾದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳು “ಮಕ್ಕಳನ್ನು ಶಾಲೆಗೆ ಕಳುಹಿಸಿ-ಕೆಲಸಕ್ಕಲ್ಲ”, ಮಕ್ಕಳ ದುಡಿಮೆ ಜೀವನವಿಡಿ ಬವಣೆ, ಶಿಕ್ಷಣವಿಲ್ಲದ ಬಾಳು ಅಂಧಕಾರದ ಗೋಳು, ಮಕ್ಕಳಿಗೆ ವಿದ್ಯೆ-ದೊಡ್ಡವರಿಗೆ ಕೆಲಸ, ಮಕ್ಕಳ ದುಡಿಮೆ ಸಾಕು ಶಿಕ್ಷಣ ಬೇಕು, ಕೂಲಿ ಬಿಡಿಸಿ ಶಾಲೆಗೆ ಕಳುಹಿಸಿ, ಎಳೆಯ ವಯಸ್ಸು ಕಲಿಯುವ ವಯಸ್ಸು, ಬಾಲ್ಯದಲ್ಲಿ ಕಮರಿದ ಜೀವ ಮತ್ತೆಂದೂ ಅರಳದು, ಬೆಳೆಯುವ ವಯಸ್ಸಿನಲ್ಲಿ ದುಡಿಯಲು ದೂಡಬೇಡಿ, ಬಾಲಕಾರ್ಮಿಕ ಪದ್ದತಿ ನಿವಾರಣೆ ದೇಶದ ಸರ್ವತೋಮುಖ ಸುಧಾರಣೆ, ಮಕ್ಕಳಿಗೆ ಬೇಕು ಆಟ-ಪಾಠ, ಬೇಡ ಕಾರ್ಖನೆಗಳ ಕೆಲಸಗಳ ಕಾಟ, ನಟ್ಟು ಬೋಲ್ಟ್ ಕೊಡಿಸದಿರಿ ಸ್ಲೇಟು ಬಳಪ ಕೊಡಿಸಿ, ಕುಂಟು ನೆಪಗಳನ್ನು ನಿಲ್ಲಿಸಿ, ಮಕ್ಕಳನ್ನು ಶಾಲೆಗೆ ಸೇರಿಸಿ, ಮಕ್ಕಳ ಹಕ್ಕುಗಳನ್ನು ಅರಿಯಿರಿ, ಅರಿತು ಅವರ ಬೆಳೆಸಿರಿ, ಮಕ್ಕಳನ್ನು ಹಕ್ಕುಗಳನ್ನು ಅರಿಯಿರಿ, ಬನ್ನಿ, ಬನ್ನಿ, ಬಾಲಕಾರ್ಮಿಕ ಪದ್ಧತಿಯನ್ನು ತಡೆಯೋಣ, ಸತ್ಪ್ರಜೆಗಳನ್ನಾಗಿಸಲು ಹುರಿದುಂಬಿಸೋಣ, ಶಿಕ್ಷಣ ಕಲಿಯೋಣ ಉತ್ತಮವಾಗಿ ಬಾಳೋಣ, ಬೇಡ, ಬೇಡ ಮಾಲೀಕ “ಬಾಲಕಾರ್ಮಿಕ” ಎಂಬಿತ್ಯಾದಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ವಿರೋಧಿ ಘೋಷಣೆ ಕೂಗಿ, ಜಾಗೃತಿ ಮೂಡಿಸಿದರು.  ಜಾಥಾವು ನಗರದ ಜಿಲ್ಲಾಧಿಕಾರಿಗಳ ಕಚೇರಿ ಹತ್ತಿರದ ಒನಕೆ ಒಬವ್ವ ವೃತ್ತದ ಬಳಿ ಆಗಮಿಸಿದಾಗ  ಮಾನವ ಸರಪಳಿ ನಿರ್ಮಿಸಿ, ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ-2026ರ ಕುರಿತು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಿ.ಜೆ.ಸುದೀನ್ ಕುಮಾರ್ ಪ್ರಮಾಣ ವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜು, ವಕೀಲರ ಸಂಘದ ಅಧ್ಯಕ್ಷ ಹೆಚ್.ಎಸ್.ಮಹೇಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಜಗದೀಶ್ ಗುಂಡೇರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಮಲ್ಲಿಕಾರ್ಜುನ, ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಉಪನಿರ್ದೇಶಕ ಈ.ಗುರುಮೂರ್ತಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಿದಾನಂದಸ್ವಾಮಿ, ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರೇಖಾ, ಕಾರ್ಮಿಕ ಅಧಿಕಾರಿ ಅನಿಲ್ ಬಿ ಬಗಟಿ, ಕಾರ್ಮಿಕ ನಿರೀಕ್ಷಕ ಪಿ.ಭೀಮೇಶ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಪಿ.ಸತೀಶ್ ಕುಮಾರ್, ಅಶ್ರಿತ ಸಂಸ್ಥೆಯ ಡಿ.ಓ.ಮುರಾರ್ಜಿ ಸೇರಿದಂತೆ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದ್ದರು.

ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ ಜಾಗೃತಿ ಜಾಥಾಕ್ಕೆ ನ್ಯಾಯಾಧೀಶ ಡಿ.ಜೆ.ಸುದೀನ್ ಕುಮಾರ್ ಚಾಲನೆ ಬಾಲಕಾರ್ಮಿಕ ಪದ್ಧತಿಯನ್ನು ಕೇವಲ ವಿರೋಧಿಸುವುದಲ್ಲ, ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು