ಶೀಘ್ರದಲ್ಲಿ ನುಡಿನಮನ ಕಾರ್ಯಕ್ರಮ > ಜಿಲ್ಲಾ ನೀರಾವರಿ ಹೋರಾಟ ಸಮಿತಿ ಹೇಳಿಕೆ
ಚಿತ್ರದುರ್ಗ, ಜೂ.20: ಹಿರಿಯ ಪತ್ರಕರ್ತ, ಕತೆಗಾರ, ಪ್ರಗತಿಪರ ಕೃಷಿಕ, ನೀರಾವರಿ
ಹೋರಾಟಗಾರ ಜಿ.ಎಸ್.ಉಜ್ಜಿನಪ್ಪ ಅವರ ನಿಧನ ಜಿಲ್ಲೆಗೆ ಅತ್ಯಂತ ನಷ್ಟವನ್ನುಂಟು ಮಾಡಿದೆ
ಎಂದು ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ, ಪ್ರಧಾನ ಸಂಚಾಲಕ
ಡಾ. ಬಂಜಗೆರೆ ಜಯಪ್ರಕಾಶ್ ಸಂತಾಪ ಸೂಚಿಸಿದ್ದಾರೆ.
ಪತ್ರಿಕೆ ವಿತರಣೆ ಮೂಲಕ ಪತ್ರಿಕಾ ಕ್ಷೇತ್ರ ಪ್ರವೇಶಿಸಿ ಬಳಿಕ ವರದಿಗಾರರಾಗಿದ್ದ
ಉಜ್ಜನಪ್ಪ ಕೇವಲ ವೃತ್ತಿಗೆ ಸೀಮಿತಗೊಳ್ಳದೆ ಜಿಲ್ಲೆಯ ಪ್ರಗತಿಗೆ ಶ್ರಮಿಸಿದ್ದಾರೆ.
ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿ ನಿಂತಿದ್ದರು. ಬಳಿಕ
ಎರಡೂವರೆ ದಶಕಗಳ ನಡೆದ ಹೋರಾಟದೊಂದಿಗೆ ಹೆಜ್ಜೆ ಹಾಕಿ, ಇಳಿ ವಯಸ್ಸಿನಲ್ಲಿಯೂ
ಚಳವಳಿಯಲ್ಲಿ ಪಾಲ್ಗೊಳ್ಳುತ್ತಿದ್ದರು.
ವಿಧಾನಸೌಧದಲ್ಲಿ ಸಚಿವರು, ಮುಖ್ಯಮಂತ್ರಿಗಳೊAದಿಗೆ ಸಭೆ, ಚಿಕ್ಕಮಗಳೂರು
ವ್ಯಾಪ್ತಿಯಲ್ಲಿ ಭದ್ರಾ ಕಾಮಗಾರಿ ವೀಕ್ಷಣೆ, ಜಿಲ್ಲೆಯಲ್ಲಿ ಅನೇಕ ಜನಪ್ರತಿನಿಧಿಗಳಿಗೆ
ಮನವಿ ಸಲ್ಲಿಕೆ, ಸಮಿತಿ ಹೋರಾಟದ ವೇಳೆ ಸದಾ ಸಕ್ರಿಯರಾಗುತ್ತಿದ್ದರು.
ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಂಚಾಲಕರಾಗಿ ಭದ್ರಾ ಮೇಲ್ದಂಡೆ ಯೋಜನೆಗಾಗಿ
ಅವಿರತವಾಗಿ ಶ್ರಮಿಸುತ್ತಿದ್ದರು. ಜನಪ್ರತಿನಿಧಿಗಳನ್ನು ಭೇಟಿ ಮಾಡುವುದು ಸೇರಿ ವಿವಿಧ
ಚಟುವಟಿಕೆಗಳಳ್ಲಿ ಪಾಲ್ಗೊಳ್ಳುವ ಕಾರ್ಯ ಮಾಡುತ್ತಿದ್ದರು.
ಕತೆ, ಕವನ, ಲೇಖನ, ಬರವಣಿಗೆ ಮೂಲಕ ಜಿಲ್ಲೆಯ ಸಮಸ್ಯೆಗಳನ್ನು ಜನ-ಜನಪ್ರತಿನಿಧಿಗಳ
ಮನಮುಟ್ಟುವಂತೆ ಮಾಡುವಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದರು. ಜಿಲ್ಲೆಗೆ ಸಚಿವರು,
ಮುಖ್ಯಮಂತ್ರಿಗಳು ಭೇಟಿ ನೀಡಿದ ವೇಳೆ ಭದ್ರಾ ಮೇಲ್ದಂಡೆ ಯೋಜನೆ ಕುರಿತು ಗಮನಸೆಳೆಯುವ
ಕೆಲಸ ಮಾಡುತ್ತಿದ್ದು ಸ್ಮರಣೀಯ.
ನಾಡಿನ ಹಿರಿಯ ಸಾಹಿತಿಗಳು, ಹೋರಾಟಗಾರರೊಂದಿಗೆ ಒಡನಾಟ ಹೊಂದಿದ್ದರು. ಅನೇಕ
ಕೃತಿಗಳನ್ನು ರಚಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಶೀಘ್ರದಲ್ಲಿ ಹೋರಾಟ ಸಮಿತಿ ನೇತೃತ್ವದಲ್ಲಿ ನುಡಿನಮನ ಕಾರ್ಯಕ್ರಮದ ಮೂಲಕ ಉಜ್ಜನಪ್ಪ
ಅವರು ನಡೆದುಬಂದ ಹಾದಿ, ಜಿಲ್ಲೆಗೆ ನೀಡಿದ ಕೊಡುಗೆ ಸ್ಮರಿಸುವ ಕೆಲಸ ಮಾಡಲಾಗುವುದು
ಎಂದು ಕೋದಂಡರಾಮಯ್ಯ, ಬಂಜಗೆರೆ ಜಯಪ್ರಕಾಶ್ ತಿಳಿಸಿದ್ದಾರೆ.










