ಬೆಂಗಳೂರು, ಜೂನ್ 20: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಟೀಸರ್ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಚಿತ್ರದ ಟೀಸರ್‌ನಲ್ಲಿ ಕ್ರೈಸ್ತ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ದೃಶ್ಯಗಳಿವೆ ಎಂದು ಆರೋಪಿಸಿ ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ (National Christian Federation – NCF) ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಅಧಿಕೃತ ದೂರು ಸಲ್ಲಿಸಿದೆ.
ಸಂಘಟನೆಯ ಆರೋಪದ ಪ್ರಕಾರ, ಟೀಸರ್‌ನಲ್ಲಿ ಸಮಾಧಿ ಪ್ರದೇಶ ಮತ್ತು ಕ್ರೈಸ್ತ ಧಾರ್ಮಿಕ ಸಂಕೇತಗಳನ್ನು ಬಳಸಿರುವ ರೀತಿ ಸಮುದಾಯದ ಭಾವನೆಗಳಿಗೆ ನೋವುಂಟುಮಾಡುವಂತಿದೆ. ವಿಶೇಷವಾಗಿ ಕ್ರೈಸ್ತ ಧರ್ಮದಲ್ಲಿ ಗೌರವಾನ್ವಿತ ಸ್ಥಾನ ಹೊಂದಿರುವ ಆರ್ಚ್ ಏಂಜಲ್ ಮೈಕೇಲ್ ಅವರ ಪ್ರತಿಮೆಯನ್ನು ತೋರಿಸಿರುವ ವಿಧಾನವು ಅವಮಾನಕರವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಾಷ್ಟ್ರೀಯ ಕ್ರೈಸ್ತರ ಒಕ್ಕೂಟದ ಪ್ರತಿನಿಧಿಗಳು, ಧಾರ್ಮಿಕ ಸಂಕೇತಗಳು ಮತ್ತು ಪವಿತ್ರ ಸ್ಥಳಗಳನ್ನು ಹಿಂಸಾತ್ಮಕ ಹಾಗೂ ವಿವಾದಾತ್ಮಕ ದೃಶ್ಯಗಳೊಂದಿಗೆ ಜೋಡಿಸುವುದು ಸಮುದಾಯದ ನಂಬಿಕೆಗಳಿಗೆ ಧಕ್ಕೆ ಉಂಟುಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಟೀಸರ್‌ನಲ್ಲಿರುವ ವಿವಾದಾತ್ಮಕ ದೃಶ್ಯಗಳನ್ನು ತೆಗೆದುಹಾಕಬೇಕು ಹಾಗೂ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ದೂರು ಪ್ರತಿಯನ್ನು CBFC, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕಳುಹಿಸಲಾಗಿದೆ. ಟೀಸರ್ ಅನ್ನು ಯೂಟ್ಯೂಬ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಿಂದ ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳುವಂತೆ ಸಹ ಮನವಿ ಮಾಡಲಾಗಿದೆ.
ಇತ್ತ ಚಿತ್ರತಂಡದಿಂದ ಈ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ. ಚಿತ್ರದ ಅಭಿಮಾನಿಗಳು ಹಾಗೂ ಚಿತ್ರರಂಗದ ವಲಯದಲ್ಲಿ ಈ ಬೆಳವಣಿಗೆ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ CBFC ಅಥವಾ ಚಿತ್ರತಂಡ ಯಾವ ಕ್ರಮ ಕೈಗೊಳ್ಳಲಿದೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.
ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರವನ್ನು ಖ್ಯಾತ ನಿರ್ದೇಶಕಿ ಗೀತು ಮೋಹನದಾಸ್ ನಿರ್ದೇಶಿಸುತ್ತಿದ್ದು, ಚಿತ್ರವು ದೇಶಾದ್ಯಂತ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಆದರೆ ಬಿಡುಗಡೆಯ ಮುನ್ನವೇ ವಿವಿಧ ವಿವಾದಗಳು ಚಿತ್ರವನ್ನು ಸುತ್ತುವರಿದಿರುವುದು ಗಮನಾರ್ಹವಾಗಿದೆ.










