ಹವ್ಯಾಸಿ ಬರಹಗಾರ: ರೇವಣಸಿದ್ದ ಬಗಲಿ (ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ)
ಸ್ಯಾಂಡಲ್ ವುಡ್ ನಲ್ಲಿ ವರ್ಷವಿಡೀ ಒಂದರ ಮೇಲೊಂದು ಅದ್ಬುತ ಕಥೆ ಹಾಗೂ ಒಳ್ಳೆಯ ಮನರಂಜನೆ ಹೊತ್ತು ಸ್ಟಾರ್ ನಟರ ಅಭಿನಯ ಮೂಲಕ ಬೆಳ್ಳಿತೆರೆಗೆ ಸಿನಿಮಾಗಳು ಬರುತ್ತಿವೆ. ಇದರ ಜತೆಗೆ ಹೊಸ ಕಥೆ ಹಾಗೂ ಹೊಸ ನಟ-ನಟಿಯರ ಪ್ರಯತ್ನದ ಮೂವಿಗಳು ಸಹ ಕನ್ನಡ ಸಿನಿ ರಸಿಕರ ಹೃದಯದ ಬಾಗಿಲು ತಟ್ಟಿ ಮನಗೆಲ್ಲುತ್ತಿವೆ.
ಸಿನಿಮಾಗಳು ತೆರೆ ಕಾಣುವ ಮೊದಲು ಬಿಡುಗಡೆಯಾಗುವ ಟ್ರೈಲರ್ ಗಳು ಬಹಳಷ್ಟು ಸಿನಿಮಾ ಪ್ರಿಯರಲ್ಲಿ ಕಥೆಯ ಸುವಾಸನೆ ಮೂಗಿಗೆ ಸೊಕಿ, ಕಥಾ ಹೂರಣ ಸವಿಲೇಬೇಕು ಅನ್ನುವಷ್ಟು ಕೌತುಕ ಹುಟ್ಟಿಸುತ್ತಿವೆ ಎನ್ನಬಹುದು.
ಇದರ ಸಾಲಿಗೆ ಮಾರ್ಚ್ 01 ರ (ಭಾನುವಾರ) ಸಂಜೆ ಬಿಡುಗಡೆಯಾದ “ಅಂತರ್ಯಾಮಿ” ಕನ್ನಡ ಚಲನಚಿತ್ರವು ಸೇರುತ್ತೆ ಅಂದರೆ ತಪ್ಪಾಗದು, ಈ “ಅಂತರ್ಯಾಮಿ” ಚಿತ್ರದ ಟ್ರೈಲರ್ ನಲ್ಲಿ ಕಥಾ ಸಾರದ ಬಹಳಷ್ಟು ಕೌತುಕಗಳು ತನ್ನ ಮೂವಿಯಲ್ಲಿ ಅಡಗಿಸಿಕೊಂಡಿರುವುದು ಗೋಚರಿಸುತ್ತದೆ.
ಇದು ಕನ್ನಡ ಚಲನಚಿತ್ರ ರಂಗಕ್ಕೆ ಹೊಸ ಪರಿಚಯದ ಪ್ರಣವ್ ಎನ್.ಜಿ ರವರ ನಿರ್ಮಾಣ ಹಾಗೂ ನಟನೆಯ ಗುರು ರೇಣುಕಾ ಪ್ರೊಡಕ್ಷನ್ಸ್ ನಲ್ಲಿ ವಿಭಿನ್ನ ಕಥಾ ಹಂದರದ ಮೂಲಕ ಚೊಚ್ಚಲ ಪ್ರಯತ್ನದ “ಅಂತರ್ಯಾಮಿ” ಚಿತ್ರವು ಇದೇ ಶುಕ್ರವಾರ (ಮಾರ್ಚ್ 06) ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬೆಳ್ಳಿ ಪರದೆಯಲ್ಲಿ ಪ್ರದರ್ಶನ ಕಾಣಲಿದೆ.
ಹೊಸ ಪರಿಚಯ ನಾಯಕ ನಟ ಪ್ರಣವ್ ಎನ್.ಜಿ, ನಾಯಕ ನಟಿಯಾಗಿ ಖ್ಯಾತ ಧಾರಾವಾಹಿ ‘ಕನ್ನಡತಿ’ ಸೀರಿಯಲ್ ನಲ್ಲಿ ನಟಿಸಿರುವ ಮೋಹಿರ್ ಆಚಾರ್, ಮಂಡ್ಯದ ಕೆ.ಧನಂಜಯ ಅವರ ಚೊಚ್ಚಲ ಚಿತ್ರಕಥೆ-ನಿರ್ದೇಶನ, ಹಂಸಲೇಖ ಅವರ ಶಿಷ್ಯ ದೇಸಿ ಮೋಹನ್ ಸಂಗೀತ (ಮ್ಯೂಸಿಕ್) ಹಾಗೂ ವಿನಯ್ ಕಾವ್ಯಕಾಂತಿ ಸಾಹಿತ್ಯದಲ್ಲಿ ಮೂಡಿಬಂದ “ಗೀಚಿದ್ದೇ ಗೀಚೋ ಬ್ರಹ್ಮ” ಮತ್ತು “ನಾನು ಹಕ್ಕಿ ಹಗಲಿನಲ್ಲಿ” ಸೇರಿ ನಾಲ್ಕು ಇಂಪಾದ ಹಾಡುಗಳು ಚಿತ್ರದಲ್ಲಿ ಕೇಳಲಿದ್ದಿರಿ.
ಚಿತ್ರವು ಇಂದಿನ ಯುವ ಮನಸ್ಸುಗಳು ಮೊಬೈಲ್ ಬಲೆಗೆ ಸಿಲುಕಿ ಬಳಲುತ್ತಿರುವ ಕುರಿತು ಸಾಮಾಜಿಕ ಸಂದೇಶ ಸಾರುವ ಜತೆಗೆ ಹಿರಿಯ ಹಾಸ್ಯ ನಟ ಸಿದ್ದು ಮಂಡ್ಯ ಅವರ ಹಾಸ್ಯದ ರಸದೌತಣದೊಂದಿಗೆ ಉದಯ ಅಂಕರವಳ್ಳಿ, ಬೇಬಿ ಹನ್ಸಿ, ತುಮಕೂರು ಕಿಟ್ಟಿ, ಡಾ. ಬಿ.ಟಿ. ಮುದ್ದೇಶ್ ಸೇರಿ ದೊಡ್ಡ ತಾರಾಗಣದ ಅಭಿನಯಿಸಿದ ಒಂದೊಳ್ಳೆ ಕೌಟುಂಬಿಕ ಪ್ಯಾಕೇಜ್ ಹೊಂದಿರುವ “ಅಂತರ್ಯಾಮಿ” ಕಥೆಯ ಹೂರಣ ಸವಿಯಬಹುದು.








