ಖಾಸಗಿ ಹೂಡಿಕೆದಾರರಿಗೆ ಸಂಪೂರ್ಣ ಬೆಂಬಲ; ‘ಬ್ರಾಂಡ್ ಕರ್ನಾಟಕ’ಕ್ಕೆ ಮತ್ತಷ್ಟು ಬಲ: ಸಚಿವ ಕೆ.ಜೆ. ಜಾರ್ಜ್
ಬೆಂಗಳೂರು, ಜು.23:
Thank you for reading this post, don't forget to subscribe!ರಾಜ್ಯವನ್ನು ದೇಶದ ಅತ್ಯಂತ ಹೂಡಿಕೆಸ್ನೇಹಿ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ ಪ್ರವಾಸೋದ್ಯಮ ನೀತಿಗಳನ್ನು ಇನ್ನಷ್ಟು ಸರಳೀಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಆರಂಭವಾದ 26ನೇ ಇಂಡಿಯನ್ ಇಂಟರ್ನ್ಯಾಷನಲ್ ಟ್ರಾವೆಲ್ ಮಾರ್ಟ್-2026 (IITM) ಉದ್ಘಾಟಿಸಿ ಮಾತನಾಡಿದ ಅವರು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡುವ ಖಾಸಗಿ ಹೂಡಿಕೆದಾರರಿಗೆ ಸರ್ಕಾರದಿಂದ ಸಂಪೂರ್ಣ ಸಹಕಾರ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಘೋಷಿಸಿದರು.
ಈ ಬಾರಿಯ ಐಐಟಿಎಂ ಸಮ್ಮೇಳನದಲ್ಲಿ 850ಕ್ಕೂ ಹೆಚ್ಚು ಪ್ರವಾಸೋದ್ಯಮ ವಲಯದ ಪ್ರತಿನಿಧಿಗಳು ಹಾಗೂ 26ಕ್ಕೂ ಹೆಚ್ಚು ವಿದೇಶಿ ಪ್ರವಾಸೋದ್ಯಮ ಸಂಸ್ಥೆಗಳು ಭಾಗವಹಿಸಿರುವುದು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ರಾಜ್ಯದ ಪ್ರವಾಸಿ ತಾಣಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ‘ಬ್ರಾಂಡ್ ಕರ್ನಾಟಕ’ ಹಾಗೂ ‘ಒಂದು ರಾಜ್ಯ, ಹಲವು ವಿಶ್ವ’ ಪರಿಕಲ್ಪನೆಗಳಿಗೆ ಇನ್ನಷ್ಟು ಬಲ ತುಂಬುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಐತಿಹಾಸಿಕ, ಧಾರ್ಮಿಕ, ಪರಿಸರ, ಸಾಹಸ ಹಾಗೂ ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆ ಹೆಚ್ಚಾದರೆ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ ಸ್ಥಳೀಯ ಆರ್ಥಿಕತೆಗೂ ಹೊಸ ಚೈತನ್ಯ ದೊರೆಯಲಿದೆ. ಈ ನಿಟ್ಟಿನಲ್ಲಿ ಹೂಡಿಕೆದಾರ ಸ್ನೇಹಿ ವಾತಾವರಣ ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದರು.










