ಚಿತ್ರದುರ್ಗ, ಜುಲೈ 4:
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision–2026) ಅಂಗವಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಮನೆ-ಮನೆ ಭೇಟಿ ಕಾರ್ಯವು ಜೂನ್ 30ರಿಂದ ಜುಲೈ 29, 2026ರವರೆಗೆ ನಡೆಯುತ್ತಿದ್ದು, ಜಿಲ್ಲೆಯ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಮತದಾರರ ಮನೆಗಳಿಗೆ ಭೇಟಿ ನೀಡಿ ಗಣತಿ ನಮೂನೆಗಳ ವಿತರಣಾ ಕಾರ್ಯವನ್ನು ಆರಂಭಿಸಿದ್ದಾರೆ.
ಜುಲೈ 4ರ ವೇಳೆಗೆ ಜಿಲ್ಲೆಯ 1,661 ಮತಗಟ್ಟೆಗಳಲ್ಲಿ ಒಟ್ಟು 14,40,534 ಮತದಾರರ ಪೈಕಿ 11,10,708 ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, 1,27,382 ನಮೂನೆಗಳ ಪರಿಶೀಲನಾ ಕಾರ್ಯ ಪೂರ್ಣಗೊಂಡಿದೆ.
ಇದರೊಂದಿಗೆ,
- 476 ಮರಣ ಹೊಂದಿದ ಮತದಾರರ ಮಾಹಿತಿ,
- 336 ಶಾಶ್ವತವಾಗಿ ಸ್ಥಳಾಂತರಗೊಂಡಿರುವ ಮತದಾರರ ವಿವರ,
- 96 ಡಬಲ್ ಎಂಟ್ರಿಗಳ ಪ್ರಕರಣಗಳು ಹಾಗೂ
- 12 ಗೈರು ಹಾಜರಾತಿ (Absent) ಪ್ರಕರಣಗಳು ಪತ್ತೆಯಾಗಿವೆ.
ಕ್ಷೇತ್ರವಾರು ಪ್ರಗತಿ
- 97-ಮೊಳಕಾಲ್ಮೂರು: 285 ಮತಗಟ್ಟೆಗಳು, 2,51,685 ಮತದಾರರು, 2,32,377 ಮನೆಗಳಿಗೆ ಭೇಟಿ.
- 98-ಚಳ್ಳಕೆರೆ: 260 ಮತಗಟ್ಟೆಗಳು, 2,25,619 ಮತದಾರರು, 1,89,405 ಮನೆಗಳಿಗೆ ಭೇಟಿ.
- 99-ಚಿತ್ರದುರ್ಗ: 288 ಮತಗಟ್ಟೆಗಳು, 2,69,332 ಮತದಾರರು, 1,81,516 ಮನೆಗಳಿಗೆ ಭೇಟಿ.
- 100-ಹೊಳಲ್ಕೆರೆ: 287 ಮತಗಟ್ಟೆಗಳು, 2,51,482 ಮತದಾರರು, 1,96,222 ಮನೆಗಳಿಗೆ ಭೇಟಿ.
- 101-ಹೊಸದುರ್ಗ: 242 ಮತಗಟ್ಟೆಗಳು, 2,03,481 ಮತದಾರರು, 1,48,972 ಮನೆಗಳಿಗೆ ಭೇಟಿ.
- 102-ಹಿರಿಯೂರು: 299 ಮತಗಟ್ಟೆಗಳು, 2,38,935 ಮತದಾರರು, 1,62,216 ಮನೆಗಳಿಗೆ ಭೇಟಿ.
ಜಿಲ್ಲೆಯ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026ರ ಪ್ರಗತಿಯನ್ನು ಪರಿಶೀಲಿಸಲು ಮತದಾರರ ಪಟ್ಟಿ ವೀಕ್ಷಕರು ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಜುಲೈ 4ರಂದು ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಿ, ಮತದಾರರ ನೋಂದಣಿ ಅಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಮನೆ-ಮನೆ ಭೇಟಿ ಕಾರ್ಯದ ಪ್ರಗತಿಯನ್ನು ಪರಿಶೀಲಿಸಿದ ಅವರು, ಯಾವುದೇ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈ ತಪ್ಪದಂತೆ ಹಾಗೂ ಅನರ್ಹ ವ್ಯಕ್ತಿಗಳ ಹೆಸರು ಸೇರ್ಪಡೆಯಾಗದಂತೆ ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲೆಯ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ-ಮನೆ ಭೇಟಿ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ಮತದಾರರ ಪಟ್ಟಿಯನ್ನು ದೋಷರಹಿತವಾಗಿ ಸಿದ್ಧಪಡಿಸಲು ಕ್ರಮವಹಿಸುವಂತೆ ನಿರ್ದೇಶನ ನೀಡಿದರು.












