“ಮೈಸೂರು ದಸರಾಗೆ 17 ಉಪಸಮಿತಿಗಳ ರಚನೆ; ಕಂಬಳ, ವಿನೂತನ ಡ್ರೋನ್ ಶೋ, ಏರ್ ಶೋಗೆ ಸಿದ್ಧತೆ: ಡಾ. ಯತೀಂದ್ರ ಸಿದ್ಧರಾಮಯ್ಯ”

ದಸರಾ ಸಿದ್ಧತೆಗೆ ವೇಗ; ಕಾಮಗಾರಿಗಳನ್ನು ದಸರಾಗೂ ಮುನ್ನ ಪೂರ್ಣಗೊಳಿಸಲು ಸೂಚನೆ – ಮುಖ್ಯಮಂತ್ರಿಗಳ ಅಂತಿಮ ನಿರ್ಧಾರದ ಬಳಿಕ ಕಂಬಳ ಆಯೋಜನೆ

ಮೈಸೂರು, ಜು. 27:

Thank you for reading this post, don't forget to subscribe!

ಮೈಸೂರು ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸುವ ಉದ್ದೇಶದಿಂದ 17 ಉಪಸಮಿತಿಗಳನ್ನು ರಚಿಸಲಾಗಿದ್ದು, ಪ್ರತಿಯೊಂದು ಸಮಿತಿಯ ಕಾರ್ಯಾಧ್ಯಕ್ಷರಿಗೆ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಡಾ. ಯತೀಂದ್ರ ಸಿದ್ಧರಾಮಯ್ಯ ತಿಳಿಸಿದ್ದಾರೆ.

ದಸರಾ ಕಾರ್ಯಕಾರಿ ಸಮಿತಿಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ದಸರಾ ಮಹೋತ್ಸವವನ್ನು ಇನ್ನಷ್ಟು ವೈಭವಯುತ ಹಾಗೂ ಜನಾಕರ್ಷಕವಾಗಿ ನಡೆಸಲು ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಈ ಬಾರಿ ದಸರಾ ಅಂಗವಾಗಿ ಕಂಬಳ ಸ್ಪರ್ಧೆ ಆಯೋಜಿಸುವ ಬಗ್ಗೆ ಚರ್ಚೆ ನಡೆದಿದ್ದು, ಕಂಬಳ ಆಯೋಜನೆ ಅಂತಿಮಗೊಂಡರೆ 18ನೇ ಉಪಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದರು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸೈಕ್ಲಿಂಗ್ ವೆಲೋಡ್ರೋಮ್ ಪ್ರದೇಶವನ್ನು ಕಂಬಳ ಆಯೋಜನೆಗೆ ಪರಿಶೀಲಿಸಲಾಗಿದ್ದು, ಮುಖ್ಯಮಂತ್ರಿ ಅವರ ಅಂತಿಮ ಸೂಚನೆಯ ಬಳಿಕ ಈ ಕುರಿತು ಅಧಿಕೃತ ನಿರ್ಧಾರ ಪ್ರಕಟವಾಗಲಿದೆ ಎಂದು ಹೇಳಿದರು.

ನಗರದಲ್ಲಿ ನಡೆಯುತ್ತಿರುವ ಫ್ಲೈಓವರ್, ವೈಟ್ ಟಾಪಿಂಗ್ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪೈಕಿ ದಸರಾಗೂ ಮುನ್ನ ಪೂರ್ಣಗೊಳ್ಳಬಹುದಾದ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ, ಈ ಬಾರಿಯ ದಸರಾದಲ್ಲಿ ಡ್ರೋನ್ ಶೋವನ್ನು ಮತ್ತಷ್ಟು ವಿನೂತನವಾಗಿ ಆಯೋಜಿಸಲು ಯೋಜನೆ ರೂಪಿಸಲಾಗಿದೆ. ಅಲ್ಲದೆ, ಕೇಂದ್ರ ಸರ್ಕಾರದ ಅನುಮತಿ ದೊರೆತಲ್ಲಿ ಏರ್ ಶೋವನ್ನೂ ಆಯೋಜಿಸುವ ಉದ್ದೇಶವಿದ್ದು, ಪ್ರವಾಸಿಗರಿಗೆ ಹೊಸ ಅನುಭವ ನೀಡಲು ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಸಚಿವರು ಹೇಳಿದರು.

“ಮೈಸೂರು ದಸರಾಗೆ 17 ಉಪಸಮಿತಿಗಳ ರಚನೆ; ಕಂಬಳ, ವಿನೂತನ ಡ್ರೋನ್ ಶೋ, ಏರ್ ಶೋಗೆ ಸಿದ್ಧತೆ: ಡಾ. ಯತೀಂದ್ರ ಸಿದ್ಧರಾಮಯ್ಯ”