ರಂಗಭೂಮಿ ಸಮಾಜಕ್ಕೆ ಮೌಲ್ಯಾಧಾರಿತ ಬದುಕಿನ ದಾರಿ ತೋರಿಸುತ್ತದೆ: ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ

ಚಿತ್ರದುರ್ಗ, ಜುಲೈ 17: ಸಾಹಿತ್ಯ, ರಂಗಕಲೆ, ನಾಟಕ, ಕಾವ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ ನೀನಾಸಂ ಸಂಸ್ಥಾಪಕ ಕೆ.ವಿ. ಸುಬ್ಬಣ್ಣ ಅವರ ಬದುಕು ಮತ್ತು ಸಾಧನೆ ಇಂದಿನ ಪೀಳಿಗೆಗೆ ಆದರ್ಶವಾಗಿದೆ ಎಂದು ಶಿಕ್ಷಣ ತಜ್ಞ ಹಾಗೂ ನಾಟಕಕಾರ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ಹೇಳಿದರು.

Thank you for reading this post, don't forget to subscribe!

ನಗರದ ಶ್ರೀ ಸಿದ್ಧರಾಮೇಶ್ವರ ವಸತಿ ಪ್ರೌಢಶಾಲೆ ಆವರಣದಲ್ಲಿ ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ನೀನಾಸಂ ಸಂಸ್ಥಾಪಕ ಸದಸ್ಯ, ಹಿರಿಯ ರಂಗಕರ್ಮಿ ಕೆ.ವಿ. ಸುಬ್ಬಣ್ಣ ಸ್ಮರಣೋತ್ಸವ ಅಂಗವಾಗಿ ನಡೆದ ಕನ್ನಡ ಗೀತಗಾಯನ ತರಬೇತಿ ಕಾರ್ಯಾಗಾರ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೆ.ವಿ. ಸುಬ್ಬಣ್ಣ ಅವರು ರಂಗಭೂಮಿಯನ್ನು ಸಮಾಜ ಪರಿವರ್ತನೆಯ ಪ್ರಬಲ ಮಾಧ್ಯಮವನ್ನಾಗಿ ರೂಪಿಸಿದರು. ರಂಗಕಲೆ, ಸಾಹಿತ್ಯ ಹಾಗೂ ವಿಜ್ಞಾನವನ್ನು ಸಮನ್ವಯಗೊಳಿಸಿ ಮೌಲ್ಯಾಧಾರಿತ ಬದುಕಿನ ಸಂದೇಶವನ್ನು ಜನರಿಗೆ ತಲುಪಿಸಿದರು. ಅವರ ಆದರ್ಶಗಳನ್ನು ಮಕ್ಕಳಲ್ಲಿ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಎಂ.ಎನ್. ಯೋಗೀಶ್ ಉಪನ್ಯಾಸ ನೀಡಿ, ನೀನಾಸಂ ನಾಟಕಗಳು ಸಮಾಜದ ಪ್ರತಿಬಿಂಬವಾಗಿದ್ದು, ಬದುಕಿನ ವಿವಿಧ ಆಯಾಮಗಳನ್ನು ಪರಿಚಯಿಸುತ್ತವೆ. ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನಲ್ಲಿ ಆರಂಭವಾದ ನೀನಾಸಂ ಇಂದು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ರಂಗಶಿಕ್ಷಣ, ಸಂಸ್ಕೃತಿ, ಪ್ರಕಟಣೆ, ಚಲನಚಿತ್ರ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ನೀನಾಸಂ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.

1949ರಲ್ಲಿ ಆರಂಭವಾದ ನೀನಾಸಂ ಅನೇಕ ಪ್ರತಿಭಾವಂತ ರಂಗಕರ್ಮಿಗಳನ್ನು ರೂಪಿಸಿದ್ದು, ದೇಶದಾದ್ಯಂತ ರಂಗಭೂಮಿಯ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡಿದೆ. ರಂಗಭೂಮಿ ಒಂದು ವಿಶ್ವವಿದ್ಯಾಲಯದಂತಿದ್ದು, ಜೀವನ ಮೌಲ್ಯಗಳನ್ನು ಕಲಿಸುವ ಶಕ್ತಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆನಂದ ತಳವಾರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೌನಹಳ್ಳಿ ಗೋವಿಂದಪ್ಪ, ಹಿರಿಯ ವರದಿಗಾರ ಎಂ. ಮಹೇಶ್‌ಬಾಬು, ನಿವೃತ್ತ ವಿಜ್ಞಾನ ಶಿಕ್ಷಕ ಹೆಚ್.ಎಸ್.ಟಿ. ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದಿವಿಜಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಶ. ಮಂಜುನಾಥ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಪತ್ರಕರ್ತ ಕೆ.ಪಿ. ನಾಗಾರಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ನೀನಾಸಂ ಪದವೀಧರ ಹಾಗೂ ರಂಗನಿರ್ದೇಶಕ ಕೆಪಿಎಂ. ಗಣೇಶಯ್ಯ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ನಾಡಗೀತೆ, ರೈತಗೀತೆ, ರಾಷ್ಟ್ರಗೀತೆ, ವಂದೇಮಾತರಂ ಹಾಗೂ ಧ್ವಜಗೀತೆಗಳ ವಿಶೇಷ ಗೀತಗಾಯನ ತರಬೇತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ರಂಗಕಲಾವಿದರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ವಿವಿಧ ಶಾಲೆಗಳ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ರಂಗಭೂಮಿ ಸಮಾಜಕ್ಕೆ ಮೌಲ್ಯಾಧಾರಿತ ಬದುಕಿನ ದಾರಿ ತೋರಿಸುತ್ತದೆ: ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ