ಸಾಂಖ್ಯಿಕ ದಿನಾಚರಣೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಎಂ. ಬಾಬು ಅಭಿಮತಅಂಕಿ-ಅಂಶಗಳಿಲ್ಲದ ಜೀವನ ಊಹಿಸಲು ಸಾಧ್ಯವಿಲ್ಲ

ಅಂಕಿ-ಅಂಶಗಳು ಪ್ರತಿಯೊಂದು ಕ್ಷೇತ್ರದಲ್ಲೂ ಹಾಸುಹೊಕ್ಕಾಗಿವೆ. ಅಂಕಿ-ಅಂಶಗಳಿಲ್ಲದಿದ್ದರೆ ನಾವು ಯಾವುದೇ ಪ್ರಗತಿ ಸಾಧಿಸಲು, ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇರುತ್ತಿರಲಿಲ್ಲ ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಂ. ಬಾಬು ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಂಖ್ಯಿಕ ತಜ್ಞ ಪ್ರೊ.ಪಿ.ಸಿ.ಮಹಾಲನೋಬಿಸ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ನಮ್ಮ ಜೀವನದಲ್ಲಿ ಅಂಕಿಗಳ ಮಹತ್ವ ಅಪಾರ. ಮನುಷ್ಯನ ಜನ್ಮದಿನಾಂಕವೇ ಸಂಖ್ಯೆಗಳಿಂದ ಆರಂಭವಾಗುತ್ತದೆ. ನಮ್ಮ ದಿನನಿತ್ಯದ ಬದುಕಿನಲ್ಲಿ ನಾವು ಬಳಸುವ ಬ್ಯಾಂಕಿಂಗ್ ಕ್ಷೇತ್ರದಿಂದ ಹಿಡಿದು ಕಂದಾಯ ಇಲಾಖೆಯವರೆಗೆ ಸಾಂಖ್ಯಿಕತೆ ಇಲ್ಲದೆ ಯಾವುದೇ ಕೆಲಸಗಳು ನಡೆಯುವುದಿಲ್ಲ. ಬ್ಯಾಂಕ್ ಖಾತೆ ಸಂಖ್ಯೆ ಕೂಡ ಒಂದು ಪ್ರಮುಖ ಸಾಂಖ್ಯಿಕ ಅಂಶವಾಗಿದೆ. ಹಾಗಾಗಿ ಸಾಂಖ್ಯಿಕ ಇಲಾಖೆಯ ಸಿಬ್ಬಂದಿ ಯಾವುದೇ ಇಲಾಖೆಯಲ್ಲಾದರೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಹುದಾದ ವಿಶಾಲ ಅವಕಾಶ ಹೊಂದಿದ್ದಾರೆ ಎಂದರು.
ಭಾರತೀಯ ಅಂಕಿ-ಅಂಶಗಳ ಪಿತಾಮಹ ಪ್ರೊ. ಪಿ.ಸಿ. ಮಹಾಲನೋಬಿಸ್ ಅವರ ಜನ್ಮ ದಿನವನ್ನು ಸಾಂಖ್ಯಿಕ ದಿನವನ್ನಾಗಿ ಆಚರಿಸಲಾಗುತ್ತಿದೆ. ಬಂಗಾಳದಲ್ಲಿ 1893ರಲ್ಲಿ ಜನಿಸಿದ ಮಹಲನೋಬಿಸ್ ಅವರು ಭಾರತದ ಪ್ರಥಮ ಯೋಜನಾ ಆಯೋಗದ ಪ್ರಮುಖ ಸದಸ್ಯರಾಗಿದ್ದರು. ಅವರ ಕೊಡುಗೆಯನ್ನು ಸ್ಮರಿಸಿ ಅವರನ್ನು ಭಾರತದ ಸಾಂಖ್ಯಿಕ ಪಿತಾಮಹ ಎಂದು ಕರೆಯಲಾಗುತ್ತದೆ ಎಂದು ನೆನೆದರು.
  ಸಾಂಖ್ಯಿಕ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಮೊಹಮದ್ ಯೂಸುಫ್ ಮಾತನಾಡಿ,  ಯಾವುದೇ ಒಂದು ಸುಂದರ ಭವ್ಯ ಕಟ್ಟಡ ನಿರ್ಮಾಣವಾಗಬೇಕಾದರೆ ಕಣ್ಣಿಗೆ ಕಾಣದ ಅಡಿಪಾಯವೇ ಹೇಗೆ ಮುಖ್ಯವೋ, ಹಾಗೆಯೇ ದೇಶದ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಯೋಜನೆಗಳ ಯಶಸ್ಸಿಗೆ ಸಾಂಖ್ಯಿಕ ದತ್ತಾಂಶವೇ ಮೂಲ ಅಡಿಪಾಯವಾಗಿದೆ ಎಂದು ಹೇಳಿದರು.
ನಮಗೆ ದೇಶದಲ್ಲಿ ನಿರ್ಮಾಣವಾಗುವ ಬೃಹತ್ ಅಣೆಕಟ್ಟುಗಳು, ರಸ್ತೆಗಳು, ಕಟ್ಟಡಗಳು ಕಣ್ಣಿಗೆ ಕಾಣಿಸುತ್ತವೆ. ಆದರೆ, ಆ ಯೋಜನೆಗಳ ಹಿಂದಿರುವ ಕಣ್ಣಿಗೆ ಕಾಣದ ಸಾಂಖ್ಯಿಕ ಮಾಹಿತಿ ಯಾರಿಗೂ ಗೋಚರಿಸುವುದಿಲ್ಲ. ಅಂಕಿ-ಅಂಶಗಳ ನಿಖರವಾದ ಆಧಾರವಿಲ್ಲದೆ ಯಾವುದೇ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತರಲು ಸಾಧ್ಯವಿಲ್ಲ. 0-9 ರವರೆಗಿನ ಅಂಕಿಗಳ ಆಟವೇ ಇಡೀ ಜಗತ್ತಿನ ಆರ್ಥಿಕತೆ ಮತ್ತು ಅಭಿವೃದ್ಧಿಗೆ ದಾರಿದೀಪವಾಗಿದೆ ಎಂದರು.
ಭಾರತೀಯ ಸಾಂಖ್ಯಿಕ ವಿಜ್ಞಾನದ ಪಿತಾಮಹ ಪ್ರೊ. ಪಿ. ಸಿ. ಮಹಲನೋಬಿಸ್ ಅವರ ಜನ್ಮದಿನವಾದ ಜೂನ್ 29 ಅನ್ನು ದೇಶದಾದ್ಯಂತ ರಾಷ್ಟ್ರೀಯ ಸಾಂಖ್ಯಿಕ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಹಲನೋಬಿಸ್ ಅವರು 1931 ರಲ್ಲಿ ಕೋಲ್ಕತ್ತಾದಲ್ಲಿ ಭಾರತೀಯ ಸಾಂಖ್ಯಿಕ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಭಾರತದಲ್ಲಿ ಸಾಂಖ್ಯಿಕ ಕ್ಷೇತ್ರಕ್ಕೆ ಬಲವಾದ ಅಡಿಪಾಯ ಹಾಕಿದರು. ದೇಶದ ಎರಡನೇ ಪಂಚವಾರ್ಷಿಕ ಯೋಜನೆಯ ಯಶಸ್ಸಿನ ಹಿಂದೆ ಅವರ ‘ಮಹಲನೋಬಿಸ್ ಮಾದರಿ’ಯ ಕೊಡುಗೆ ಅಪಾರವಾದುದು ಎಂದು ಸ್ಮರಿಸಿದರು. ಅವರ ಈ ಮಹೋನ್ನತ ಕೊಡುಗೆಯನ್ನು ಗೌರವಿಸಲು ಭಾರತ ಸರ್ಕಾರವು 2007 ರಿಂದ ಪ್ರತಿ ವರ್ಷ ಜೂನ್ 29 ರಂದು ಸಾಂಖ್ಯಿಕ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಚಿತ್ರದುರ್ಗ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಚನ್ನಬಸಪ್ಪ ಅವರು ಪ್ರೊ. ಪಿ. ಸಿ. ಮಹಲನೋಬಿಸ್ ಅವರು ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಸಾಂಖ್ಯಿಕ ದಿನಾಚರಣೆ ಅಂಗವಾಗಿ Unlocking the potential of Administrative  Data   ಆಚಿಣಚಿ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಸಾಂಖ್ಯಿಕ ಇಲಾಖೆಯ ನಿವೃತ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರವಿಕುಮಾರ್, ಸಾಂಖ್ಯಿಕ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸಾಂಖ್ಯಿಕ ದಿನಾಚರಣೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಎಂ. ಬಾಬು ಅಭಿಮತಅಂಕಿ-ಅಂಶಗಳಿಲ್ಲದ ಜೀವನ ಊಹಿಸಲು ಸಾಧ್ಯವಿಲ್ಲ