ಹಗರಿಯಲ್ಲಿ ಬೆಳೆ ವಿಮೆ ಹಾಗೂ ಬರ ನಿರ್ವಹಣೆ ಅರಿವು ಕಾರ್ಯಕ್ರಮ

ರೈತರು ತಪ್ಪದೇ ಬೆಳೆ ವಿಮೆ ಮಾಡಿಸಿಕೊಳ್ಳಿ: ಎಸ್.ಎನ್.ಮಂಜುನಾಥ್ ಸಲಹೆ

ಬಳ್ಳಾರಿ,ಜು.23(ಕರ್ನಾಟಕ ವಾರ್ತೆ):

ಪ್ರಸ್ತುತ ಬೆಳೆ ವಿಮೆಯನ್ನು ಗ್ರಾಮ ಪಂಚಾಯತಿ ಮಟ್ಟದಲ್ಲೇ ಜಾರಿಗೊಳಿಸಲಾಗಿದ್ದು, ಪಹಣಿ ಹೊಂದಿರುವ ಪ್ರತಿಯೊಬ್ಬ ರೈತರೂ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಪ ಕೃಷಿ ನಿರ್ದೇಶಕ ಎಸ್.ಎನ್. ಮಂಜುನಾಥ್ ಅವರು ಹೇಳಿದರು.

Thank you for reading this post, don't forget to subscribe!

ತಾಲ್ಲೂಕು ಆಡಳಿತ, ಕೃಷಿ ಇಲಾಖೆ ಬಳ್ಳಾರಿ ಹಾಗೂ ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಹಗರಿಯ ಕೆವಿಕೆಯಲ್ಲಿ ‘ಪಿಎಂಎಫ್‌ಬಿವೈ ಬೆಳೆ ವಿಮೆ, ಪರ್ಯಾಯ ಬೆಳೆ ಪದ್ಧತಿಗಳು ಹಾಗೂ ಬರಗಾಲ ನಿರ್ವಹಣಾ ಕ್ರಮಗಳು’ ಕುರಿತು ಬುಧವಾರ ಆಯೋಜಿಸಿದ್ದ ರೈತರಿಗೆ ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬ್ಯಾಂಕ್‌ಗಳಲ್ಲಿ ಸಾಲ ಪಡೆದವರಿಗೆ ವಿಮೆ ಕಡ್ಡಾಯವಾಗಿದ್ದು, ರೈತರು ಬಿತ್ತನೆಗೆ ಮುಂಚಿತವಾಗಿಯೇ ವಿಮೆ ಮಾಡಿಸುವುದು ಸೂಕ್ತ. ಹತ್ತಿರದ ‘ಗ್ರಾಮ ಒನ್’ ಅಥವಾ ‘ಗ್ರಾಹಕ ಸೇವಾ ಕೇಂದ್ರ’ಗಳಿಗೆ ಭೇಟಿ ನೀಡಿ ಕಂತಿನ ಮೊತ್ತ ಪಾವತಿಸಬೇಕು, ಎಂದು ತಿಳಿಸಿದರು.

ಬಳ್ಳಾರಿ ಭಾಗದ ರೈತರು ಹತ್ತಿ, ಮೆಕ್ಕೆಜೋಳ, ಸಜ್ಜೆ ಹಾಗೂ ಬರ ನಿರೋಧಕ ಬೆಳೆಯಾದ ನವಣೆ ಮತ್ತು ಸಾಮೆಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕೆಂದು ಕರೆ ನೀಡಿದರು.

ಬಳ್ಳಾರಿ ಸಹಾಯಕ ಕೃಷಿ ನಿರ್ದೇಶಕ ಗರ್ಜಪ್ಪ ಅವರು ಮಾತನಾಡಿ, ಜುಲೈ 31ರ ಒಳಗಾಗಿ ಮಳೆಯಾಶ್ರಿತ ಮತ್ತು ನೀರಾವರಿ ವ್ಯಾಪ್ತಿಯ ಸೂರ್ಯಕಾಂತಿ, ಹತ್ತಿ, ಮುಸುಕಿನ ಜೋಳ ಹಾಗೂ ಜೋಳದ ಬೆಳೆಗೆ ವಿಮೆ ಮಾಡಿಸಲು ಕೊನೆಯ ದಿನವಾಗಿದೆ. ರೈತರು ಈ ತಕ್ಷಣವೇ ವಿಮೆ ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು.

ಇನ್ನೂ ಬಿತ್ತನೆಯಾಗದ ಪ್ರದೇಶಗಳಲ್ಲಿ ‘ವಿಬಿಜಿ-ರಾಮ್-ಜಿ’ ಮತ್ತು ‘ಕೃಷಿ ಭಾಗ್ಯ’ ಯೋಜನೆಯಡಿ ಕಂದಕ ಬದು ಹಾಗೂ ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಬೇಕು. ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿರುವುದರಿಂದ ಪರ್ಯಾಯ ಬೆಳೆ ಬೆಳೆದು ರೈತರು ಲಾಭ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಮಣ್ಣು ವಿಜ್ಞಾನಿಗಳಾದ ಡಾ. ರವಿ ಎಸ್. ಅವರು ಮಾತನಾಡಿ, ರೈತರು ಜಮೀನನ್ನು ಸಮತಟ್ಟು ಮಾಡದೆ ಉಳುಮೆ ಮಾಡಿ ಹಾಗೆಯೇ ಬಿಡುವುದರಿಂದ ಮಳೆಯಾದಾಗ ನೀರು ಮಣ್ಣಿನಲ್ಲಿ ಇಂಗಲು ನೆರವಾಗುತ್ತದೆ. ಆಗಸ್ಟ್ ಕೊನೆಯಲ್ಲಿ ಮಳೆಯಾದರೂ ಗೋಧಿ, ನವಣೆ, ರಾಗಿಯನ್ನು ಬೆಳೆಯಬಹುದು. ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಸಿರೆಲೆ ಗೊಬ್ಬರಗಳನ್ನು ಬೆಳೆಸಬೇಕು ಎಂದು ಮಾಹಿತಿ ನೀಡಿದರು.

ಹವಮಾನ ಮುನ್ಸೂಚನೆ ಕುರಿತು ಮಾತನಾಡಿದ ಬೇಸಾಯ ತಜ್ಞರಾದ ಡಾ. ಕೃಷ್ಣಮೂರ್ತಿ ಅವರು, ಈ ಬಾರಿ ದೇಶದ ಶೇ.70 ರಷ್ಟು ಪ್ರದೇಶದಲ್ಲಿ ಮಳೆ ಅಭಾವವಾಗುವ ಸಾಧ್ಯತೆಯಿದ್ದು, ಕಡಿಮೆ ನೀರು ಬೇಡುವ ಕುಸುಬೆ, ಸಜ್ಜೆ, ಹುರುಳಿ, ಹಾಗೂ ಹಲಸಂದಿ ಬೆಳೆಗಳಿಗೆ ಆದ್ಯತೆ ನೀಡಬೇಕು ಎಂದು ರೈತರಿಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಪ್ರಗತಿಪರ ರೈತರು ಭಾಗವಹಿಸಿ ಸಲಹೆ-ಸೂಚನೆಗಳ ಸದುಪಯೋಗ ಪಡೆದುಕೊಂಡರು.

ಈ ಸಂದರ್ಭದಲ್ಲಿ ಕೆವಿಕೆ ವಿಜ್ಞಾನಿ ಡಾ. ಪಾಲಯ್ಯ, ಡಾ. ನವೀನ್, ಸಹಾಯಕ ತೋಟಗಾರಿಕೆ ಅಧಿಕಾರಿ ಸುನಿಲ್, ತಾಲ್ಲೂಕು ಕೃಷಿಕ ಸಮಾಜದ ಸದಸ್ಯರಾದ ಗೋಪಾಲರೆಡ್ಡಿ, ರಾಮಣ್ಣ, ದೊಡ್ಡಬಸವರಾಜ, ಹೋಬಳಿ ಕೃಷಿ ಅಧಿಕಾರಿಗಳು, ‘ಆತ್ಮ’ ಯೋಜನೆಯ ಉಪಯೋಜನಾ ನಿರ್ದೇಶಕಿ ಕವಿತಾ ಕುಮಾರಿ ಹಾಗೂ ‘ಕೃಷಿ ಸಂಜೀವಿನಿ’ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಹಗರಿಯಲ್ಲಿ ಬೆಳೆ ವಿಮೆ ಹಾಗೂ ಬರ ನಿರ್ವಹಣೆ ಅರಿವು ಕಾರ್ಯಕ್ರಮ