ಕರ್ನಾಟಕ ವಾರ್ತೆ(ಚಿತ್ರದುರ್ಗ). ಜು.25:
Thank you for reading this post, don't forget to subscribe!ಹಿರಿಯೂರು ಕ್ಷೇತ್ರ ವ್ಯಾಪ್ತಿಯ ವಿವಿಧ ನೀರಾವರಿ, ಕುಡಿಯುವ ನೀರು, ಶಿಕ್ಷಣ ಮತ್ತು ಮೂಲಸೌಕರ್ಯ ಯೋಜನೆಗಳ ಕುರಿತು ವಿಧಾನ ಪರಿಷತ್ ಸದಸ್ಯ ಟಿ.ಡಿ. ಶ್ರೀನಿವಾಸ್ ಮುಖ್ಯಮಂತ್ರಿಗಳ ಗಮನ ಸೆಳೆದರು.
ಬೆಂಗಳೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜೋಗಿಹಳ್ಳಿ ಭಾಗದ 17 ಕೆರೆಗಳಿಗೆ ನೀರು: ಹಿರಿಯೂರು ಕ್ಷೇತ್ರದ ಅತಿ ಬರಪೀಡಿತ ಪ್ರದೇಶವಾದ ಜೋಗಿಹಳ್ಳಿ ಭಾಗದ 17 ಕೆರೆಗಳಿಗೆ ನೀರು ತುಂಬಿಸುವ ರೂ.164 ಕೋಟಿ ವೆಚ್ಚದ ಯೋಜನೆಗೆ ಸಂಪುಟ ಅನುಮೋದನೆ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಯೋಜನೆ ಅನುಷ್ಠಾನದಲ್ಲಿ ಸಣ್ಣ ಬದಲಾವಣೆ ಸೂಚಿಸಿದ ಅವರು, ಗೊನ್ನಿಕೇರೆ ಬಿಡಬ್ಲ್ಯೂಡಿ ರಸ್ತೆಯನ್ನು ಎತ್ತರಿಸಿ ಪಿಕ್-ಅಪ್ ಬ್ಯಾರೇಜ್ ನಿರ್ಮಿಸುವುದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.
ಐಮಂಗಲ ಭಾಗದ 24 ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ತುಂಬಿಸುವ ಕಾಮಗಾರಿ ಅಂತಿಮ ಹಂತದಲ್ಲಿದ್ದು, ತಾಂತ್ರಿಕ ತೊಡಕುಗಳನ್ನು ಶೀಘ್ರ ಬಗೆಹರಿಸಿ ನೀರು ಹರಿಸಬೇಕು. ಅಲ್ಲದೆ, ವಿವಿ ಸಾಗರ ಜಲಾಶಯದ ಬಳಿಯಿರುವ ಬರಮಗಿರಿ ಕೆರೆಗೆ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದ್ದರೂ ಬೆಸ್ಕಾಂ (KEB) ಬಾಕಿ ಬಿಲ್ ಸಮಸ್ಯೆಯಿಂದ ನೆಂಜಿಕೊಂಡಿದ್ದು, ಇದನ್ನು ತಕ್ಷಣವೇ ಬಗೆಹರಿಸಬೇಕೆಂದು ಮನವಿ ಮಾಡಿದರು.
ಹಿರಿಯೂರು ಕ್ಷೇತ್ರದಲ್ಲಿ 332 ಶಾಲೆಗಳಿದ್ದು, 512 ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಇವುಗಳನ್ನು ಸಿಎಸ್‌ಆರ್ (CSR) ಹಾಗೂ ಡಿಎಮ್‌ಎಫ್ (DMF) ಅನುದಾನ ಬಳಸಿಕೊಂಡು ತ್ವರಿತವಾಗಿ ಬ್ಲ್ಯಾಕ್‌ಔಟ್ ಮಾಡಿ ಸ್ಮಾರ್ಟ್ ಕ್ಲಾಸ್‌ರೂಮ್‌ಗಳಾಗಿ ಮೇಲ್ದರ್ಜೆಗೇರಿಸಬೇಕು ಎಂದರು.
‘ಅನುಗ್ರಹ’ ಯೋಜನೆಯಡಿ ಜಾನುವಾರು ಮೃತಪಟ್ಟರೆ ನೀಡುವ ಪರಿಹಾರ ಧನವನ್ನು ರೈತರಿಗೆ ತಕ್ಷಣವೇ ಬಿಡುಗಡೆ ಮಾಡಬೇಕು.ಜೆಜೆಎಂ (JJM) ಕಾಮಗಾರಿ ವೇಳೆ ಅಗೆದು ಹಾಳಾಗಿರುವ ಸಿಸಿ ಹಾಗೂ ತಾರೂ ರಸ್ತೆಗಳನ್ನು ಗುತ್ತಿಗೆದಾರರೇ ಕಡ್ಡಾಯವಾಗಿ ಪುನರ್ನಿರ್ಮಾಣ (Restoration) ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ಬೆಂಗಳೂರು ವಿಭಾಗದಲ್ಲಿ 300ಕ್ಕೂ ಹೆಚ್ಚು ಮಳೆ ಮಾಪನ ಕೇಂದ್ರಗಳು ಕೆಟ್ಟು ಹೋಗಿದ್ದು, ಇದರಿಂದ ನಿಖರ ಮಳೆಯ ಮಾಹಿತಿ ಸಿಗುತ್ತಿಲ್ಲ. ಇವುಗಳನ್ನು ತಕ್ಷಣವೇ ಸರಿಪಡಿಸಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಸಭೆಯಲ್ಲಿ ಕೋರಿದರು.








