ವರದಿ:- ಅರುಣ್ ಕುಮಾರ್. ಎಸ್ ( ದೊಡ್ಡ ಉಳ್ಳಾರ್ತಿ)
ಚಳ್ಳಕೆರೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ದೊಡ್ಡ ಉಳ್ಳಾರ್ತಿ ಗ್ರಾಮದ ಸರ್ಕಾರಿ ಕನ್ನಡ ಮತ್ತು ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಹಮ್ಮಿಕೊಂಡಿದ್ದ ಹಸರೀಕರಣ ಹಾಗೂ ಗಿಡ ನೆಡುವ ಮೂಲಕ ಸಸಿಗೆ ನೀರೆರೆದು ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನವನೀತ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪಿಡಿಒ ನವನೀತ ರವರು, ಪರಿಸರ ಸಂರಕ್ಷಣೆ ಇಂದಿನ ಅತ್ಯಂತ ಪ್ರಮುಖ ಅಗತ್ಯವಾಗಿದ್ದು, ಹಸಿರೀಕರಣದ ಜೊತೆಗೆ ಪ್ಲಾಸ್ಟಿಕ್ ನಿರ್ಮೂಲನೆಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ಕರೆ ನೀಡಿದರು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರ, ಜಲಮೂಲಗಳು ಹಾಗೂ ಪ್ರಾಣಿ-ಪಕ್ಷಿಗಳ ಜೀವಕ್ಕೆ ಅಪಾಯ ಉಂಟಾಗುತ್ತಿದ್ದು, ಪ್ಲಾಸ್ಟಿಕ್ ಮುಕ್ತ ಗ್ರಾಮ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಮರಗಳು ಮಾನವನ ಜೀವನಾಡಿಯಾಗಿದ್ದು, ಶುದ್ಧ ಗಾಳಿ, ಮಳೆ ಹಾಗೂ ಪರಿಸರ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಅದರ ಆರೈಕೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ತಿಳಿಸಿದರು.
ಪರಿಸರ ದಿನಾಚರಣೆಯ ಈ ವರ್ಷದ ಧ್ಯೇಯವಾದ “ಪ್ಲಾಸ್ಟಿಕ್ ಮಾಲಿನ್ಯ ನಿರ್ಮೂಲನೆ” ಕುರಿತು ಅರಿವು ಮೂಡಿಸಿದ ಅವರು, ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿ, ಬಟ್ಟೆ ಮತ್ತು ಪರಿಸರ ಸ್ನೇಹಿ ಚೀಲಗಳ ಬಳಕೆಗೆ ಉತ್ತೇಜನ ನೀಡಬೇಕು ಎಂದರು. ಪರಿಸರ ಸಂರಕ್ಷಣೆ ಕೇವಲ ಒಂದು ದಿನದ ಆಚರಣೆಯಾಗದೆ, ಜೀವನದ ಭಾಗವಾಗಬೇಕು .ಪರಿಸರವು ನಮ್ಮ ಬದುಕಿನ ಆಧಾರ. ಶುದ್ಧ ಗಾಳಿ, ನೀರು, ಮಣ್ಣು ಮತ್ತು ಜೀವ ವೈವಿಧ್ಯತೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯ, ಅರಣ್ಯ ನಾಶ, ಹವಾಮಾನ ವೈಪರೀತ್ಯ ಹಾಗೂ ನೀರಿನ ಕೊರತೆ ಮುಂತಾದ ಸಮಸ್ಯೆಗಳು ವಿಶ್ವದಾದ್ಯಂತ ಆತಂಕ ಸೃಷ್ಟಿಸಿವೆ. ಇಂತಹ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಕೆಲಸವಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಗಿಡ ನೆಡುವುದು ಒಂದು ದಿನದ ಕಾರ್ಯಕ್ರಮವಾಗಿರದೆ, ಮುಂದಿನ ಪೀಳಿಗೆಗೆ ನೀಡುವ ಅಮೂಲ್ಯ ಕೊಡುಗೆಯಾಗಿದೆ. ಒಂದು ಗಿಡ ನೂರಾರು ಜನರಿಗೆ ನೆರಳು, ಆಮ್ಲಜನಕ ಹಾಗೂ ಪರಿಸರ ಸಮತೋಲನವನ್ನು ನೀಡುತ್ತದೆ ಎಂದರು
ಈ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ವಿವಿಧ ಜಾತಿಯ ನೆರಳು ಹಾಗೂ ಫಲವೃಕ್ಷಗಳ ಸಸಿಗಳನ್ನು ನೆಡಲಾಯಿತು. ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣ ಹಾಗೂ ಸ್ವಚ್ಛತೆಯ ಮಹತ್ವದ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಈರಣ್ಣ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಎಚ್. ಎಂ. ಸುನಿಲ್ ಕುಮಾರ್ , ಶಿಕ್ಷಕ ಸಿಬ್ಬಂದಿಗಳಾದ ನಾಗರಾಜ್ ದೈಹಿಕ ಶಿಕ್ಷಕರು, ಸವಿತಾ, ಮಂಜುಳಾ, ಚಂದ್ರಮ್ಮ ಮಂಜುವಾಣಿ ,ಹಾಗೂ ವಿದ್ಯಾರ್ಥಿಗಳು ಮತ್ತು ಪಂಚಾಯಿತಿ ಸಿಬ್ಬಂದಿಗಳಾದ ಮಹಾಲಿಂಗಪ್ಪ (ಕಾರ್ಯದರ್ಶಿ ) ಜೈ ರಾಮ್ (ಬಿಲ್ ಕಲೆಕ್ಟರ್) ನಿರ್ಮಲ, ಅಕ್ಷಯ,ಉಮಾದೇವಿ, ತಿಪ್ಪಕ್ಕ,ಗೌರೀಶ್ ಕೃಷ್ಣಮೂರ್ತಿ,ಗ್ರಾಮಸ್ಥರು ಭಾಗವಹಿಸಿ ಪರಿಸರ ಸಂರಕ್ಷಣೆಯ ಸಂಕಲ್ಪ ಕೈಗೊಂಡರು.
“ಗಿಡ ಬೆಳೆಸೋಣ – ಪರಿಸರ ಉಳಿಸೋಣ, ಪ್ಲಾಸ್ಟಿಕ್ ತೊರೆದು ಪ್ರಕೃತಿಯನ್ನು ಕಾಪಾಡೋಣ” ಸತ್ಯ ಮೇವ ಜಯತೆ ಎಂಬ ಘೋಷಣೆಗಳೊಂದಿಗೆ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.












