ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕಿ              -ಜಿಲ್ಲಾ ನ್ಯಾಯಾಧೀಶ ಜಿ.ಡಿ.ಮಹಾವರ್ಕರ್

ಚಿತ್ರದುರ್ಗ(ಕರ್ನಾಟಕ ವಾರ್ತೆ).ಜೂ.05:
ಆಧುನಿಕ ಜೀವನಶೈಲಿಗೆ ಒಗ್ಗಿಕೊಂಡಿರುವ ನಾವು ಸ್ವಚ್ಛಂದ ಜೀವನ ನಡೆಸಲು ಪ್ರಯತ್ನಿಸುತ್ತಿದ್ದೇವೆಯೇ ಹೊರತು, ಅದರಿಂದ ಪರಿಸರದ ಮೇಲಾಗುತ್ತಿರುವ ಹಾನಿಯ ಬಗ್ಗೆ ಯೋಚಿಸುತ್ತಿಲ್ಲ. ನಮ್ಮ ಸ್ವಾರ್ಥಕ್ಕಾಗಿ ಪರಿಸರ ಹಾಳುಗೆಡವುತ್ತಿರುವುದು ಆತಂಕಕಾರಿ ಸಂಗತಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಡಿ. ಮಹಾವರ್ಕರ್ ಕಳವಳ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ‘ವಿಶ್ವ ಪರಿಸರ ದಿನಾಚರಣೆ’ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕುಡಿಯುವ ನೀರಿನ ಬಾಟಲಿಗಳನ್ನು ಬಳಸಿ ಎಲ್ಲೆಂದರಲ್ಲಿ ಬಿಸಾಡುವ ಮೂಲಕ ಸ್ವಚ್ಛತೆ ನಿರ್ಲಕ್ಷಿಸುತ್ತಿದ್ದೇವೆ. ಪ್ಲಾಸ್ಟಿಕ್ ಬಳಸಿ ಎಲ್ಲೆಂದರಲ್ಲಿ ಬಿಸಾಡುವುದರಿಂದ, ಮೂಕ ಪ್ರಾಣಿಗಳಾದ ಹಸುಗಳು ಅದನ್ನು ತಿಂದು ಜೀವ ಕಳೆದುಕೊಳ್ಳುತ್ತಿವೆ. ಇಂತಹ ಅಮಾನವೀಯ ವರ್ತನೆಯಿಂದ ನಾವೆಲ್ಲ ಹೊರಬರಬೇಕಾಗಿದೆ. ಮನೆಯ ಅಂಗಳದ ಕಸವನ್ನು ಎಲ್ಲೆಂದರಲ್ಲಿ ಸುಡುವುದು, ಹಸಿ ಕಸ ಮತ್ತು ಒಣ ಕಸ ವಿಂಗಡಿಸದೆ ಬಿಸಾಡುವುದರಿಂದ ಪರಿಸರ ಹಾಳಾಗುತ್ತಿದೆ ಎಂದರು.
ಕಸದ ವೈಜ್ಞಾನಿಕ ವಿಲೇವಾರಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ತಂದಿದೆ. ನಗರಸಭೆ ಸಿಬ್ಬಂದಿ ಕಸ ಸಂಗ್ರಹಣೆಗೆ ಬಂದಾಗ ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸಿ ಕೊಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ನಾವೆಲ್ಲರೂ ಪರಿಸರ ಸಂರಕ್ಷಣೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ ಎಂದು ತಿಳಿಸಿದರು.
ಆರೋಗ್ಯವಂತ ದೇಹದಲ್ಲಿ ಮಾತ್ರ ಆರೋಗ್ಯವಂತ ಮನಸ್ಸಿರಲು ಸಾಧ್ಯ. ಆದರೆ ವಾಯು ಮಾಲಿನ್ಯದಿಂದಾಗಿ ನಮ್ಮ ಆರೋಗ್ಯ ಕ್ಷೀಣಿಸುತ್ತಿದೆ. ಹಾಗಾಗಿ ಪರಿಸರ ಮಾಲಿನ್ಯ ತಡೆಗೆ ಗಿಡಗಳನ್ನು ಬೆಳೆಸಿ ಆಮ್ಲಜನಕದ ಪ್ರಮಾಣ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು  ಹೇಳಿದರು.
1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೀರಣ್ಣ ಸೋಮಶೇಖರ್ ಮಾತನಾಡಿ, ಪರಿಸರ ಹಾಳು ಮಾಡುವುದರಿಂದ ವಾಯು ಮಾಲಿನ್ಯ, ನೀರಿನ ಸಮಸ್ಯೆ ಮತ್ತು ಮಳೆಯ ಕೊರತೆಯಂತಹ ಅನೇಕ ಗಂಭೀರ ಸಮಸ್ಯೆಗಳು ಎದುರಾಗುತ್ತಿವೆ. ಇವುಗಳನ್ನು ಹೋಗಲಾಡಿಸಿ, ಪ್ರಕೃತಿಯನ್ನು ಕಾಪಾಡುವ ಉದ್ದೇಶದಿಂದ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆ, ಸರ್ಕಾರಿ ಅಧಿಕಾರಿಗಳ ಜವಾಬ್ದಾರಿಯಲ್ಲ, ಅದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಪ್ರತಿಯೊಂದು ಹುಟ್ಟುಹಬ್ಬ ಅಥವಾ ವಿಶೇಷ ಕಾರ್ಯಕ್ರಮದ ನೆನಪಿಗೆ ಒಂದು ಸಸಿ ನೆಡುವ ಮೂಲಕ ಅದನ್ನು ಪೋಷಿಸಿ ಬೆಳೆಸಿದರೆ ಪರಿಸರ ಕಾಪಾಡಲು ತುಂಬಾ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಆಲೋಚಿಸಬೇಕಾಗಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಿ.ಜೆ.ಸುದೀನ್ ಕುಮಾರ್ ಮಾತನಾಡಿ, ಪರಿಸರ ಸಂರಕ್ಷಣೆ ಕೇವಲ ಒಂದು ದಿನದ ಆಚರಣೆಯಾಗಬಾರದು. ಜಿಲ್ಲೆಯಾದ್ಯಂತ ಗಿಡ-ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯ ನಿರಂತರವಾಗಿ ಸಾಗಬೇಕು ಕರೆ ನೀಡಿದರು.
ಜಿಲ್ಲೆಯ ವಿವಿಧೆಡೆ ಇರುವ ಖಾಲಿ ಜಾಗಗಳು, ಇಲಾಖೆಗಳ ಆವರಣಗಳು, ಲಭ್ಯವಿರುವ ಸರ್ಕಾರಿ ಜಮೀನುಗಳು ಹಾಗೂ ಕೃಷಿಯೇತರ ಭೂಮಿಯಲ್ಲಿ ಸಾಧ್ಯವಾದಷ್ಟು ಹೆಚ್ಚು ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿರುವ ಜಲಮೂಲಗಳ ರಕ್ಷಣೆಗೆ ವಿಶೇಷ ಒತ್ತು ನೀಡಬೇಕು. ಕೆರೆಗಳ ಪುನರುಜ್ಜೀವನ ಮತ್ತು ಸಂರಕ್ಷಣೆಗಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯನಾಯಕ್ ಮಾತನಾಡಿ, ನಾವು ಪರಿಸರಕ್ಕೆ ಯಾವ ರೀತಿ ಹೊಂದಿಕೊಂಡಿದ್ದೇವೆ ಮತ್ತು ಪರಿಸರದಲ್ಲಿ ನಮ್ಮ ಪಾತ್ರ ಏನು ಎಂಬುದನ್ನೇ ಇಂದು ಮರೆತುಬಿಟ್ಟಿದ್ದೇವೆ ವಿಷಾದ ವ್ಯಕ್ತಪಡಿಸಿದರು.
ಪರಿಸರ ಎಂದರೆ ಗಾಳಿ, ನೀರು, ಆಕಾಶ, ಭೂಮಿ ಮತ್ತು ಅಗ್ನಿ ಎಂಬ ಪಂಚಭೂತಗಳಿಂದ ಕೂಡಿರತಕ್ಕಂತದ್ದು. ನಮ್ಮ ದೇಹ ಕೂಡ ಇದೇ ಪಂಚಭೂತಗಳಿಂದ ರಚನೆಯಾಗಿದೆ. ಆದರೆ ನಾವು ಪರಿಸರದ ಒಂದು ಭಾಗ ಎಂಬುದನ್ನು ಮರೆತು, ಸ್ವಾರ್ಥ, ದುರಾಶೆ ಹಾಗೂ ಶೀಘ್ರವಾಗಿ ಶ್ರೀಮಂತರಾಗಬೇಕೆಂಬ ಹಪಾಹಪಿಯಿಂದ ಪ್ರಕೃತಿಯನ್ನು ನಾಶ ಮಾಡುತ್ತಿದ್ದೇವೆ. ದೇಶದಲ್ಲಿ ನೂರಾರು ಕೋಟಿ ಜನಸಂಖ್ಯೆಯಿದ್ದರೂ, ಪರಿಸರ ರಕ್ಷಣೆಗೆ ಕಾನೂನುಗಳಿದ್ದರೂ ಸಹ ಜನರು ಅದರ ಕಡೆಗೆ ಗಮನ ಹರಿಸುತ್ತಿಲ್ಲ. ಇದಕ್ಕೆ ಪರಿಸರದ ಬಗ್ಗೆ ನಮಗಿರುವ ಅಜ್ಞಾನ, ಅಲಕ್ಷ್ಯವೇ ಮುಖ್ಯ ಕಾರಣ ಎಂದು ಕಳವಳ ವ್ಯಕ್ತಪಡಿಸಿದರು.
ಪರಿಸರದಲ್ಲಿ ಶೇ. 33 ರಷ್ಟು ಅರಣ್ಯವಿದ್ದರೆ ಮಾತ್ರ ಪ್ರಕೃತಿಯಲ್ಲಿ ಮಾನವನೂ ಸೇರಿದಂತೆ ಎಲ್ಲಾ ಪ್ರಾಣಿ-ಪಕ್ಷಿಗಳು ಆರೋಗ್ಯವಾಗಿರಲು ಸಾಧ್ಯ. ಆರೋಗ್ಯವಂತ ಜೀವನ ಎಂದರೆ ಕೇವಲ ಭೌತಿಕ ಆರೋಗ್ಯ ಮಾತ್ರವಲ್ಲ, ಮಾನಸಿಕವಾಗಿಯೂ ಯಾವುದೇ ಜಗಳಗಳಿಲ್ಲದೆ, ಯಾರಿಗೂ ಕೆಟ್ಟದ್ದನ್ನು ಬಯಸದೆ ನೆಮ್ಮದಿಯಿಂದ ಬದುಕಲು ಪ್ರಕೃತಿ ಪೂರಕ ವಾತಾವರಣ ನಿರ್ಮಿಸುತ್ತದೆ. ಆದ್ದರಿಂದ, ಪ್ರತಿಯೊಬ್ಬ ನಾಗರಿಕನೂ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು, ಅದನ್ನು ಹೆಮ್ಮರವಾಗುವವರೆಗೆ ಪೋಷಿಸಿ ಬೆಳೆಸಿದರೆ ಮಾತ್ರ ಪ್ರಕೃತಿಗೆ ನಾವು ಸಲ್ಲಿಸುವ ನಿಜವಾದ ಕೊಡುಗೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಹೆಚ್.ಎಸ್.ಮಹೇಶ್ವರಪ್ಪ ಮಾತನಾಡಿ, ಜಿಲ್ಲೆಯ ಪ್ರತಿ ಹಳ್ಳಿಯಲ್ಲೂ ಗಿಡಗಳನ್ನು ಬೆಳೆಸಿದರೆ ಇಡೀ ಜಿಲ್ಲೆಯು ಕಾಡಿನಂತೆ ಕಂಗೊಳಿಸಲಿದೆ. ಮನೆಗೊಂದು ಗಿಡ, ಊರಿಗೊಂದು ವನ ಎಂಬ ತತ್ವವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.
ನಾವು ಮನೆ ಕಟ್ಟುವಾಗ ಪೂಜಾ ಕೋಣೆ, ಬೆಡ್ ರೂಮ್, ಹಾಲ್ ಇವುಗಳಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತೇವೆಯೋ, ಅದೇ ರೀತಿ ಕಾಂಪೌಂಡ್ ಒಳಗಡೆ ಸಸಿಗಳನ್ನು ನೆಡಲು ಜಾಗ ಬಿಡಬೇಕು. ಒಂದು ಮನೆಯಲ್ಲಿ ನಾಲ್ಕು ಜನರಿದ್ದರೆ, ತಲಾ ಒಂದರಂತೆ ನಾಲ್ಕು ಗಿಡಗಳನ್ನು ನೆಟ್ಟು ಪೋಷಿಸಿದರೆ ಆಸ್ಪತ್ರೆಗೆ ಹೋಗುವ ಅಗತ್ಯವೇ ಬರುವುದಿಲ್ಲ. ಗಿಡಗಳಿಂದ ಸಿಗುವ ಶುದ್ಧ ಗಾಳಿಯು ನಮ್ಮ ಆರೋಗ್ಯ ಕಾಪಾಡುತ್ತದೆ ಎಂದು ಹೇಳಿದರು.
ಜನರು ತಮ್ಮ ಮನೆಯ ಕಸವನ್ನು ಪಕ್ಕದ ಖಾಲಿ ನಿವೇಶನಗಳಿಗೆ ಎಸೆದು ತಾವೇ ಪರಿಸರ ಹಾಳುಮಾಡುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ತನಕ್ಕೆ ಕಡಿವಾಣ ಹಾಕಲು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಥವಾ ಮುನ್ಸಿಪಾಲಿಟಿ ಅಧಿಕಾರಿಗಳು ಕಸ ಹಾಕುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ದಂಡ ವಿಧಿಸಬೇಕು. ಅಂದಾಗ ಮಾತ್ರ ಜನರು ಜಾಗೃತರಾಗಿ ನಮ್ಮ ಪರಿಸರವನ್ನು ನಾವೇ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗಂಗಾಧರ್ ಚನ್ನಬಸಪ್ಪ ಹಡಪದ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಡಿ.ಮಮತ, 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‍ಸಿ ಎಸ್.ಶಕುಂತಲಾ, 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‍ಸಿ ಆರ್.ನಟೇಶ್, 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‍ಸಿ ಕೆ.ಜಿ.ಸತೀಶ್, 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‍ಸಿ ಪೂಜಾ ಬೆಳಕೆರಿ, 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‍ಸಿ ನಿಖಿತಾ ಎಸ್ ಅಕ್ಕಿ, ವಲಯ ಅರಣ್ಯಾಧಿಕಾರಿ ಆರ್.ವಸಂತ ಕುಮಾರ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಬಿ.ದೇವರಾಜ್, ವಕೀಲರ ಸಂಘದ ಕಾರ್ಯದರ್ಶಿ ಜಗದೀಶ್ ಗುಂಡೇರಿ ಇದ್ದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕಿ              -ಜಿಲ್ಲಾ ನ್ಯಾಯಾಧೀಶ ಜಿ.ಡಿ.ಮಹಾವರ್ಕರ್