ಅಪಾರ್ಟ್ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ಸಂವಾದ; ಇ-ಖಾತಾ ಕ್ರಾಂತಿ, ಭೂ ಗ್ಯಾರಂಟಿ, ಬೆಂಗಳೂರಿನ ಅಭಿವೃದ್ಧಿ ಕುರಿತು ಮಹತ್ವದ ಘೋಷಣೆಗಳು
ಬೆಂಗಳೂರು, ಜು.15 (ಕರ್ನಾಟಕ ವಾರ್ತೆ):
ಅಪಾರ್ಟ್ಮೆಂಟ್ ಮಾಲೀಕರ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಅವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. “ಆಸ್ತಿಯ ಸಂಪೂರ್ಣ ಹಕ್ಕು ಮಾಲೀಕರಿಗೇ ಸೇರಬೇಕು. ಜನರ ಧ್ವನಿಯೇ ಸರ್ಕಾರದ ಧ್ವನಿಯಾಗಬೇಕು” ಎಂದು ಅವರು ಸ್ಪಷ್ಟಪಡಿಸಿದರು.
ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ)–2026 ಕರಡು ವಿಧೇಯಕ ಕುರಿತು ಅಪಾರ್ಟ್ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಮನೆ ಖರೀದಿಸಿದ ನಂತರ ಮಾಲೀಕರು ಎದುರಿಸುವ ಕಾನೂನು, ನೋಂದಣಿ, ನಿರ್ವಹಣೆ ಹಾಗೂ ದಾಖಲೆಗಳ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಅರಿವಿದೆ ಎಂದು ಹೇಳಿದರು. ಈ ಎಲ್ಲ ಸಮಸ್ಯೆಗಳಿಗೆ ಕಾನೂನುಬದ್ಧ ಹಾಗೂ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದರು.
ಬೆಂಗಳೂರು ಭಾರತದ ಹೃದಯವಾಗಬೇಕು
ಬೆಂಗಳೂರು ಇಂದು ವಿಶ್ವದ ಗಮನ ಸೆಳೆದ ನಗರವಾಗಿದ್ದು, ಹೂಡಿಕೆ, ಉದ್ಯೋಗ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿದೆ. “ಬೆಂಗಳೂರು ಭಾರತದ ಹೃದಯವಾಗಬೇಕು” ಎಂಬುದು ಸರ್ಕಾರದ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಜನರು ಜೀವನಪೂರ್ತಿ ದುಡಿದು ಮನೆ ಕಟ್ಟಿಕೊಂಡಿದ್ದಾರೆ. ಅವರ ಕನಸಿನ ಮನೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಬಗೆಹರಿಸುವುದು ಸರ್ಕಾರದ ಜವಾಬ್ದಾರಿ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಇ-ಖಾತಾ ಕ್ರಾಂತಿ
ರಾಜ್ಯದಲ್ಲಿ ಇ-ಖಾತಾ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಆಡಳಿತದಲ್ಲಿ ಕ್ರಾಂತಿಯನ್ನೇ ತರಲಾಗಿದೆ ಎಂದು ತಿಳಿಸಿದ ಮುಖ್ಯಮಂತ್ರಿ, ಬೆಂಗಳೂರಿನ 40 ಲಕ್ಷ ಆಸ್ತಿಗಳ ಪೈಕಿ ಈಗಾಗಲೇ 26 ಲಕ್ಷ ಆಸ್ತಿಗಳಿಗೆ ಇ-ಖಾತಾ ನೀಡಲಾಗಿದೆ ಎಂದರು. ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸುವ ವ್ಯವಸ್ಥೆ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಯಾಗಿದೆ ಎಂದು ಅವರು ಹೇಳಿದರು.
ಆಸ್ತಿ ದಾಖಲೆ ವರ್ಗಾವಣೆ ಸುಲಭವಾಗಲಿದೆ
ಅಪಾರ್ಟ್ಮೆಂಟ್ಗಳಲ್ಲಿ ಕುಡಿಯುವ ನೀರು, ಎಸ್ಟಿಪಿ, ಅಂತರ್ಜಲ ಸಂರಕ್ಷಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಹಲವು ಸುಧಾರಣೆಗಳನ್ನು ಕೈಗೊಂಡಿದೆ. ಕೆಲವು ಡೆವಲಪರ್ಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಸರ್ಕಾರ ಗಂಭೀರವಾಗಿ ಗಮನಹರಿಸಿದ್ದು, ದಾಖಲೆಗಳ ವರ್ಗಾವಣೆ ಯಾವುದೇ ತೊಂದರೆಯಿಲ್ಲದೆ ನಡೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಆಗಸ್ಟ್ 6ರವರೆಗೆ ಸಲಹೆಗಳಿಗೆ ಅವಕಾಶ
ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ)–2026 ಕರಡು ವಿಧೇಯಕ ಕುರಿತು ಸಾರ್ವಜನಿಕರು ಹಾಗೂ ಅಪಾರ್ಟ್ಮೆಂಟ್ ಸಂಘಗಳು ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ಆಗಸ್ಟ್ 6ರವರೆಗೆ ಸಲ್ಲಿಸಬಹುದು ಎಂದು ಮುಖ್ಯಮಂತ್ರಿ ತಿಳಿಸಿದರು. ಕಾನೂನಿನ ವ್ಯಾಪ್ತಿಯಲ್ಲಿರುವ ಎಲ್ಲಾ ಸೂಕ್ತ ಸಲಹೆಗಳನ್ನು ಸರ್ಕಾರ ಪರಿಗಣಿಸಲಿದೆ ಎಂದರು.
ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು
ನಗರದ ಆಡಳಿತವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಐದು ನಗರ ಕಾರ್ಪೊರೇಷನ್ಗಳನ್ನು ರಚಿಸಲಾಗಿದ್ದು, ವಿಮಾನ ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ವಿವಿಧ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಹೇಳಿದರು. ಜನರ ಸಮಸ್ಯೆಗಳನ್ನು ನ್ಯಾಯಾಲಯದ ವ್ಯಾಜ್ಯಗಳಿಗೆ ಹೋಗದೆ ಸಂವಾದದ ಮೂಲಕ ಬಗೆಹರಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.
ಬೆಂಗಳೂರು ಅಭಿವೃದ್ಧಿಗೆ ಭಾರಿ ಯೋಜನೆಗಳು
ನಗರದಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುತ್ತಿದೆ. ನಗರದ ರಸ್ತೆಗಳ ಅಭಿವೃದ್ಧಿ ಹಾಗೂ ಗುಂಡಿ ಮುಚ್ಚುವ ಕಾಮಗಾರಿಗಳಿಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಜೊತೆಗೆ 132 ಕಿಲೋಮೀಟರ್ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ) ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ನಗರದ ಸಂಚಾರ ವ್ಯವಸ್ಥೆಗೆ ಹೊಸ ರೂಪ ಸಿಗಲಿದೆ ಎಂದು ಹೇಳಿದರು.
ಹೈರೈಸ್ ಕಟ್ಟಡಗಳು, ಮಳೆನೀರು ಕೊಯ್ಲು ಮತ್ತು ಎರಡನೇ ವಿಮಾನ ನಿಲ್ದಾಣ
ಭವಿಷ್ಯದ ಬೆಂಗಳೂರನ್ನು ಗಮನದಲ್ಲಿಟ್ಟುಕೊಂಡು ಹೈರೈಸ್ ಕಟ್ಟಡಗಳ ನಿರ್ಮಾಣಕ್ಕೆ ಉತ್ತೇಜನ ನೀಡಲಾಗುತ್ತಿದೆ. ಅಪಾರ್ಟ್ಮೆಂಟ್ಗಳಲ್ಲಿ ಮಳೆನೀರು ಕೊಯ್ಲು ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿದ್ದು, ನಗರದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣವಾಗಲಿರುವುದರಿಂದ ಬೆಂಗಳೂರು ಜಾಗತಿಕ ಹೂಡಿಕೆದಾರರ ಪ್ರಮುಖ ಕೇಂದ್ರವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ದಾವೋಸ್ನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಹಲವು ವಿದೇಶಿ ಹೂಡಿಕೆದಾರರು ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಮುಂಬೈ ಸೇರಿದಂತೆ ಇತರ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಹೂಡಿಕೆ ಹಾಗೂ ಆಸ್ತಿ ಖರೀದಿ ಹೆಚ್ಚು ಅನುಕೂಲಕರವಾಗಿದೆ ಎಂದು ಅವರು ತಿಳಿಸಿದರು.
ಭೂ ಗ್ಯಾರಂಟಿಗೆ ಉತ್ತಮ ಜನಸ್ಪಂದನೆ
ರಾಜ್ಯ ಸರ್ಕಾರ ಘೋಷಿಸಿರುವ ಆರನೇ ಗ್ಯಾರಂಟಿ ‘ಭೂ ಗ್ಯಾರಂಟಿ’ ಯೋಜನೆಗೆ ಉತ್ತಮ ಜನಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಆಸ್ತಿ ಮಾಲೀಕರ ಹಕ್ಕುಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅಭಿವೃದ್ಧಿ ಹಾಗೂ ಜನಹಿತ ಎರಡನ್ನೂ ಸಮಾನವಾಗಿ ಕಾಪಾಡುವ ಆಡಳಿತಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಕೆ.ಜೆ. ಜಾರ್ಜ್, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ಅಪಾರ್ಟ್ಮೆಂಟ್ ಸಂಘಗಳ ಅಧ್ಯಕ್ಷ ರಾಜೀವ್ ಗೌಡ ಸೇರಿದಂತೆ ವಿವಿಧ ಅಪಾರ್ಟ್ಮೆಂಟ್ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.












