ವರದಿ:- ಅರುಣ್ ಕುಮಾರ್.ಎಸ್ (ದೊಡ್ಡ ಉಳ್ಳಾರ್ತಿ)
ಪ್ರತಿನಿತ್ಯ ಒಂದು ಕೋಟಿ ಲೀಟರ್ ಗೂ ಅಧಿಕ ಹಾಲು ಹಾಗೂ ಉತ್ಪಾದಿಸುವ ಕರ್ನಾಟಕ ಕ್ಷೀರ ಉತ್ಪಾದನೆಯಲ್ಲಿ ದೇಶದಲ್ಲಿ 2ನೇ ಸ್ಥಾನದಲ್ಲಿದೆ ಎಂದು ಶಿಮುಲ್ ನಿರ್ದೇಶಕ ಬಿ.ಸಿ ಸಂಜೀವಮೂರ್ತಿ ಹೇಳಿದರು. ನಗರದ ನಂದಿನಿ ಪಾರ್ಲರ್ ನಲ್ಲಿ ಶಿವಮೊಗ್ಗ ಹಾಲು ಒಕ್ಕೂಟದಿಂದ ಸೋಮವಾರ ಆಯೋಜಿಸಿದ್ದ ವಿಶ್ವ ಹಾಲು ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಜಗತ್ತಿನ ಒಟ್ಟಾರೆ ಉತ್ಪಾದನೆಯಲ್ಲಿ ಶೇ.27ರಷ್ಟು ಹಾಲು ಭಾರತದಲ್ಲಿ ಉತ್ಪಾದನೆಯಾಗುತ್ತದೆ. ದೇಶದಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದು ಕರ್ನಾಟಕ 2ನೇ ಸ್ಥಾನ ಪಡೆದಿದೆ, ಕೆಎಂಎಫ್ ನ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಗುಣಮಟ್ಟಕ್ಕೆ ಹೆಸರಾಗಿವೆ. ನಂದಿನಿ ತುಪ್ಪ ದೇಶದಲ್ಲಿ ಮನೆ ಮಾತಾಗಿದೆ. ಶಿಮುಲ್ ನಲ್ಲಿ ಪ್ರತಿನಿತ್ಯ ದಾಖಲೆಯ 9.25 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ.4.50 ಲಕ್ಷ ಲೀಟರ್ ಹಾಲು, ಮಜ್ಜಿಗೆ ಮೊಸರು ಮಾರಾಟ ಮಾಡುತ್ತಿದ್ದು,ಉಳಿದ ಹಾಲಿನಲ್ಲಿ ಬೆಣ್ಣೆ, ತುಪ್ಪ ಹಾಲಿನ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ, ಹಾಲು ಉದ್ಯಮ ಲಾಭದಾಯಕವಾಗಿದ್ದು ಉದ್ಯಮವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವ ಮೂಲಕ ರೈತರಿಗೆ ಉತ್ತೇಜನವನ್ನು ನೀಡಬೇಕು.ಹಾಲು ಉತ್ಪಾದಕರು ಗ್ರಾಮೀಣ ಆರ್ಥಿಕತೆಯ ಪ್ರಮುಖ ಆಧಾರಸ್ತಂಭಗಳಾಗಿದ್ದು, ಹೈನುಗಾರಿಕೆ ರೈತರಿಗೆ ನಿರಂತರ ಆದಾಯದ ಮೂಲವಾಗಿದೆ ಎಂದು ಹೇಳಿದರು. ವಿಶ್ವ ಹಾಲು ದಿನಾಚರಣೆ ಹಾಲಿನ ಮಹತ್ವ ಪೌಷ್ಟಿಕಾಂಶದ ಅರಿವು ಹಾಗೂ ಹೈನುಗಾರರ ಶ್ರಮವನ್ನು ಸ್ಮರಿಸುವ ಉದ್ದೇಶದಿಂದ ಆಚರಿಸಲಾಗುತ್ತದೆ.ನಂದಿನಿ ಉತ್ಪನ್ನಗಳು ಗುಣಮಟ್ಟ ಹಾಗೂ ವಿಶ್ವಾಸಾರ್ಹತೆಯಿಂದ ಜನಪ್ರಿಯತೆ ಗಳಿಸಿದ್ದು,ರೈತರ ಆರ್ಥಿಕ ಅಭಿವೃದ್ಧಿಗೆ ಶಿಮುಲ್ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹಾಲು ಹಾಗೂ ನಂದಿನಿ ಉತ್ಪನ್ನಗಳ ಮಹತ್ವದ ಕುರಿತು ಮಾಹಿತಿ ನೀಡಲಾಯಿತು. ಹಾಲು ಸೇವನೆಯಿಂದ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಮಕ್ಕಳ ಬೆಳವಣಿಗೆಗೆ ಅಗತ್ಯವಾದ ಪೌಷ್ಟಿಕಾಂಶ ದೊರೆಯುತ್ತದೆ ಎಂದು ವಿವರಿಸಲಾಯಿತು . ಕಾರ್ಯಕ್ರಮದಲ್ಲಿ ಶಿಮುಲ್ ಅಧಿಕಾರಿಗಳು.ಹಾಲು ಉತ್ಪಾದಕರ ಸಹಕಾರ ಸಂಘಗಳ ಪದಾಧಿಕಾರಿಗಳು ರೈತರು ನಂದಿನಿ ಪಾರ್ಲರ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.












