ಜೂನ್ 28 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಜಿಲ್ಲೆಯಲ್ಲಿ 1.27 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿಅಭಿಯಾನ ಯಶಸ್ವಿಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಕರೆ

ಜೂ.28 ರಂದು ಜರುಗುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳು ಸಮ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ದೇಶವನ್ನು ಪೋಲಿಯೋ ಮುಕ್ತವಾಗಿರಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪಲ್ಸ್ ಪೋಲಿಯೋ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸದೃಢ ಹಾಗೂ ಆರೋಗ್ಯವಂತ ಮಕ್ಕಳೇ ದೇಶದ ಸಂಪತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳಲು ನಿರ್ದೇಶನ ನೀಡಬೇಕು. 0 ರಿಂದ 5 ವರ್ಷದ ಒಳಗಿನ ಎಲ್ಲಾ ಮಕ್ಕಳು ತಪ್ಪದೇ ಪೋಲಿಯೋ ಲಸಿಕೆ ಪಡೆಯುವಂತೆ ಮಾಡಬೇಕು. ಅಭಿಯಾನಕ್ಕೆ ಅಗತ್ಯವಾದ ವಾಹನಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ ಅಧಿಗ್ರಹಣ ಮಾಡಿ, ಆರೋಗ್ಯ ಇಲಾಖೆಗೆ ನೀಡಬೇಕು. ಪೋಲಿಯೋ ಲಸಿಕೆ ಸಂಗ್ರಹಿಸಿರುವ ಆಸ್ಪತ್ರೆ ಹಾಗೂ ಲಸಿಕಾ ಸಂಗ್ರಹಣಗಾರಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಇರುವಂತೆ ನೋಡಿಕೊಳ್ಳುವುದು ಬೆಸ್ಕಾಂ ಸಿಬ್ಬಂದಿಗಳ ಕಾರ್ಯವಾಗಿದೆ. ಪ್ರತಿ ಗ್ರಾಮ ಹಾಗೂ ವಾರ್ಡ್‍ಗಳಲ್ಲಿ ಶಾಲಾ ಮಕ್ಕಳಿಂದ ಪ್ರಭಾತ್ ಬೇರಿ ಹಾಗೂ ಜಾಥಾಗಳನ್ನು ನಡೆಸಿ ಜಾಗೃತಿ ಮೂಡಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸೂಚಿಸಿದರು.
ನಗರ ಸಭೆ, ಪುರ ಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಪಲ್ಸ್ ಪೋಲಿಯೋ ಬೂತ್‍ಗಳ ನಿರ್ಮಾಣ ಹಾಗೂ ನಿರ್ವಹಣೆ ಸಹಕಾರ ನೀಡಬೇಕು. ಅಭಿಯಾನದ ಕುರಿತು ತಮ್ಮ ವ್ಯಾಪ್ತಿಯ ಕಸ ಸಂಗ್ರಹಣ ವಾಹನಗಳಲ್ಲಿ ಜಿಂಗಲ್ಸ್‍ಗಳನ್ನು ಬಿತ್ತರಿಸಬೇಕು. ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಆಕಾಶವಾಣಿ, ವಾರ್ತಾ ಇಲಾಖೆಯ ಮೂಲಕ ಪಲ್ಸ್ ಪೋಲಿಯೋ ಲಸಿಕೆ ಮಹತ್ವದ ಕುರಿತು ವ್ಯಾಪಕ ಪ್ರಚಾರ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಆರ್.ಸಿ.ಹೆಚ್ ಅಧಿಕಾರಿ ಡಾ.ಅಭಿನವ್ ಮಾತನಾಡಿ ಭಾರತವು ಮುಕ್ತ ರಾಷ್ಟ್ರವಾಗಿದ್ದರೂ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಲ್ಲಿ  ಪೋಲಿಯೋ  ಪ್ರಕರಣಗಳು ಪತ್ತೆಯಾಗಿದ್ದು, ಭಾರತಕ್ಕೆ ವೈರಸ್ ಹರಡುವ ಸಾಧ್ಯತೆಯನ್ನು ತಡೆಗಟ್ಟಲು ಮತ್ತು  ಪೋಲಿಯೋ   ಮುಕ್ತ ಸ್ಥಿತಿಯನ್ನು ಕಾಯ್ದುಕೊಳ್ಳಲು, ದೇಶಾದ್ಯಂತ ಜೂನ್ 28 ರಂದು ರಾಷ್ಟ್ರೀಯ ಪಲ್ಸ್  ಪೋಲಿಯೋ   ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ರಾಜ್ಯದಲ್ಲಿ 2007 ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಪೋಲಿಯೋ ಪ್ರಕರಣ ಪತ್ತೆಯಾಗಿತ್ತು. 2008 ರಿಂದ 2026 ವರೆಗೆ ರಾಜ್ಯದಲ್ಲಿ ಒಂದೂ ಪೋಲಿಯೋ ಪ್ರಕರಣ ಪತ್ತೆಯಾಗಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲೂ ಪೋಲಿಯೋ ರೋಗಕ್ಕೆ ಕಾರಣವಾಗುವ ವೈರಾಣು ಆಂತಕ ಎಲ್ಲಿಯೂ ಕಂಡುಬಂದಿಲ್ಲ. ಜೂನ್ 28 ರ ಭಾನುವಾರದಂದು ನಿಗದಿಪಡಿಸಿದ  ಪೋಲಿಯೋ   ಬೂತ್‍ಗಳಲ್ಲಿ 0 ಯಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ  ಪೋಲಿಯೋ   ಲಸಿಕೆ ಹಾಕಲಾಗುವುದು. ಬೂತ್‍ಗಳಲ್ಲಿ ಲಸಿಕೆ ಪಡೆಯಲು ಬಾಕಿ ಉಳಿಯುವ ಮಕ್ಕಳಿಗಾಗಿ ನಂತರದ ಮೂರು ದಿನಗಳು, ಅಂದರೆ ಜೂನ್ 29, 30 ಮತ್ತು ಜುಲೈ 1 ರಂದು ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನಗರ ಪ್ರದೇಶಗಳು, ಕೊಳಚೆ ಪ್ರದೇಶಗಳು (ಸ್ಲಂ) ಮತ್ತು ಹೆಚ್ಚು ಅಪಾಯಕಾರಿ ವಲಯಗಳಲ್ಲಿ ವಾಸಿಸುವ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಪಲ್ಸ್  ಪೋಲಿಯೋ  ಕ್ರಿಯಾ ಯೋಜನೆಯಡಿ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಒಟ್ಟು 1,27,641 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ 1,085  ಪೋಲಿಯೋ   ಬೂತ್‍ಗಳನ್ನು ಸ್ಥಾಪಿಸಲಾಗುವುದು. 1,162 ಲಸಿಕಾ ತಂಡಗಳನ್ನು ರಚಿಸಲಾಗಿದೆ. 2,324 ಲಸಿಕೆ ನೀಡುವ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಕಾರ್ಯಕ್ರಮದ ಮೇಲ್ವಿಚಾರಣೆಗಾಗಿ 235 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ 1282 ಹೆಚ್ಚು ಅಪಾಯಕಾರಿ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಲ್ಲಿನ 22,766 ಮಕ್ಕಳನ್ನು ವಿಶೇಷವಾಗಿ ಗುರುತಿಸಿ ಲಸಿಕೆ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರ್.ಸಿ.ಹೆಚ್ ಅಧಿಕಾರಿ ಡಾ.ಅಭಿನವ್ ಸಭೆಯಲ್ಲಿ ಮಾಹಿತಿ ನೀಡಿದರು.
ಓವರ್ ಹೆಡ್ ಟ್ಯಾಂಕ್‍ಗಳ ಸ್ವಚ್ಛತೆ ತಾಕೀತು :
ಇದೇ ವೇಳೆ ಜುರುಗಿದ ಸ್ಟಾಪ್ ಡಯೇರಿಯಾ-2026 ಅಭಿಯಾನದ ಸಭೆಯಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಅಶುದ್ಧ ನೀರು ಸೇವನೆಯು ಅತಿಸಾರ ಬೇಧಿಗೆ ಎಡೆ ಮಾಡಿಕೊಡುತ್ತದೆ. ಎಲ್ಲಾ ನಗರ ಸಭೆ, ಪುರ ಸಭೆ, ಪಟ್ಟಣ ಪಂಚಾಯಿತಿ, ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಓವರ್ ಹೆಡ್ ಟ್ಯಾಂಕ್‍ಗಳನ್ನು ಮಳೆಗಾಲ ಆರಂಭಕ್ಕೂ ಮುನ್ನ ತಪ್ಪದೇ ಸ್ವಚ್ಛಗೊಳಿಸಬೇಕು ಎಂದು ತಾಕೀತು ಮಾಡಿದರು.
ಕವಾಡಿಗರ ಹಟ್ಟಿಯ ದುರಂತ ನಮ್ಮ ಕಣ್ಣಮುಂದೆ ಇದೆ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ನೀರಿನ ಮೂಲ ಮತ್ತು ಸರಬರಾಜು ಆಗುವ ಜಾಗದಲ್ಲಿ ರಾಸಾಯನಿಕ ಹಾಗೂ ಜೈವಿಕ ತಪಾಸಣೆಗಳನ್ನು ನಡೆಸಿ, ಅದರ ದಾಖಲೆಗಳನ್ನು ನಿರ್ವಹಿಸಬೇಕು. ಪ್ರತಿ ಓವರ್‍ಹೆಡ್ ಟ್ಯಾಂಕ್ ಬಳಿ ಕೊನೆಯದಾಗಿ ಯಾವಾಗ ಸ್ವಚ್ಛಗೊಳಿಸಲಾಯಿತು ಮತ್ತು ಪರೀಕ್ಷಿಸಲಾಯಿತು ಎಂಬ ವಿವರವಿರುವ ಬೋರ್ಡ್ ಅಳವಡಿಸಬೇಕು. ಇದು ಸಾರ್ವಜನಿಕರಿಗೆ ಕಾಣಿಸುವಂತಿರಬೇಕು. ಕಲುಷಿತ ನೀರು ಅಥವಾ ಪೈಪ್‍ಲೈನ್ ಸೋರಿಕೆಯಿಂದ ಹರಡುವ ಕಾಲರಾ ಮತ್ತು ಬೇಧಿಯಂತಹ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳು ಮುಂಜಾಗ್ರತಾ ಕ್ರಮವಾಗಿ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಇದರಿಂದ ಆರೋಗ್ಯ ಇಲಾಖೆಯ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ. ಎಲ್ಲಾ ವಿದ್ಯಾರ್ಥಿ ನಿಲಯ ಹಾಗೂ ಶಾಲಾ ಕಾಲೇಜುಗಳಲ್ಲಿಯೂ ಕುಡಿಯುವ ನೀರಿನ ಟ್ಯಾಂಕ್‍ಗಳನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸೂಚಿಸಿದರು.
ಜೂನ್ 1 ರಿಂದ ಜೂನ್ 15 ವರೆಗೆ ಸ್ಟಾಪ್ ಡಯೇರಿಯಾ ಅಭಿಯಾನ -2026ರ   ಪೂರ್ವಸಿದ್ಧತೆ ಮಾಡಿಕೊಳ್ಳಲಾಗುವುದು. ಜೂನ್ 16 ರಿಂದ ಜೂನ್ 31 ನಡೆಯಲಿದ್ದು,  ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಜಂಟಿಯಾಗಿ ಪ್ರತಿ ಮನೆಗೆ ಭೇಟಿ ನೀಡಿ, 5 ವರ್ಷದೊಳಗಿನ ಮಕ್ಕಳಲ್ಲಿ ಬೇಧಿ ಅಥವಾ ಅದಕ್ಕೆ ಸಂಬಂಧಿಸಿದ ಲಕ್ಷಣಗಳಿವೆಯೇ ಎಂದು ಪರಿಶೀಲಿಸಲಿದ್ದಾರೆ. ಲಕ್ಷಣಗಳಿರುವ ಮಕ್ಕಳಿಗೆ ಒ.ಆರ್.ಎಸ್ ಪ್ಯಾಕೆಟ್‍ಗಳು ಮತ್ತು ಜಿಂಕ್ ಮಾತ್ರೆಗಳನ್ನು ವಿತರಿಸಿ, ಅಗತ್ಯವಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಾಶಿ ಸಭೆಯಲ್ಲಿ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಹಂತರ ಜನರಲ್ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳ ಸ್ವಚ್ಛತೆ ಹಾಗೂ ನಿರ್ವಹಣೆ ಕುರಿತು ಚರ್ಚಿಸಲಾಯಿತು. ಕಟ್ಟು ನಿಟ್ಟಾಗಿ ಆಸ್ಪತ್ರೆಗಳ ಜೈವಿಕ ತ್ಯಾಜ್ಯ ನಿರ್ವಹಣೆ ಮಾಡುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನಿರ್ದೇಶಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳೇಸಿಂಗೆ ಸೇರಿದಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಜೂನ್ 28 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಜಿಲ್ಲೆಯಲ್ಲಿ 1.27 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿಅಭಿಯಾನ ಯಶಸ್ವಿಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಕರೆ