ವಿಕಲಚೇತನರ ಸಬಲೀಕರಣಕ್ಕೆ ಸಮಗ್ರ ದತ್ತಾಂಶ ಕ್ರೋಢೀಕರಣ ಅಗತ್ಯ -ವಿಧಾನ ಪರಿಷತ್ ಶಾಸಕ ವೈ.ಎಂ.ಸತೀಶ್

ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಅವರ 2025-26ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ 15 ಮಹಿಳಾ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ವಿತರಣೆ

ವಿಕಲಚೇತನರಿಗೆ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳು ತಲುಪಬೇಕಾದರೆ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಅವರ ನಿಖರವಾದ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸುವುದು ಅತ್ಯಗತ್ಯ ಎಂದು ವಿಧಾನ ಪರಿಷತ್ ಶಾಸಕ ವೈ.ಎಂ. ಸತೀಶ್ ತಿಳಿಸಿದರು.
   ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಅವರ 2025-26ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಮಹಿಳಾ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ (ರೆಟ್ರೋಫಿಟ್ ಮೆಂಟ್ ಸಹಿತ) ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ, ನಗರ ಪುನರ್ವಸತಿ ಕಾರ್ಯಕರ್ತರು ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ತಮ್ಮ ವ್ಯಾಪ್ತಿಯಲ್ಲಿರುವ ವಿಕಲಚೇತನರ ದತ್ತಾಂಶವನ್ನು ಸರಿಯಾದ ಮಾಹಿತಿ ಜೋಡಣೆಯೊಂದಿಗೆ ಸರ್ಕಾರಕ್ಕೆ ಕಳುಹಿಸಬೇಕು. ಪ್ರಸ್ತುತ ನಮ್ಮ ಇಲಾಖೆಯಲ್ಲಿ ವಿಕಲಚೇತನರ ಸಮಗ್ರ ಮಾಹಿತಿ ಲಭ್ಯವಿಲ್ಲ. ಕೇವಲ ಶೇ. 75 ಕ್ಕಿಂತ ಹೆಚ್ಚು, ಶೇ. 40 ರಿಂದ 75 ಮತ್ತು ಶೇ. 40 ಕ್ಕಿಂತ ಕಡಿಮೆ ಎಂಬ ಮೂರು ಸಾಮಾನ್ಯ ವರ್ಗಗಳ ಆಧಾರದ ಮೇಲೆ ಮಾತ್ರ ಸದ್ಯ ವರ್ಗೀಕರಣ ಮಾಡಲಾಗುತ್ತಿದೆ ಎಂದು ತಿಳಿಸಿದ ಅವರು, ವಿಕಲಚೇತನರ ಕೌಶಲ, ಆಸಕ್ತಿ ಮತ್ತು ವಿಶೇಷ ಜ್ಞಾನ ಆಧರಿಸಿ ಹೊಸ ಮಾದರಿಯ ಫಾಮ್ರ್ಯಾಟ್ ಸಿದ್ಧಪಡಿಸಿ ಮಾಹಿತಿ ಕ್ರೋಡೀಕರಿಸಬೇಕು. ಈ ಮಾಹಿತಿ ಲಭ್ಯವಾದರೆ ಅವರಿಗೆ ಸೂಕ್ತವಾದ ಯೋಜನೆಗಳ ಜಾರಿಗೆ ತರಲು ಸರ್ಕಾರಕ್ಕೆ ಸುಲಭವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ಸಮಾಜದಲ್ಲಿ ವಿಕಲಚೇತನ ಮಕ್ಕಳನ್ನು ನೋಡುವ ದೃಷ್ಟಿಕೋನ ಇಂದಿಗೂ ಅತ್ಯಂತ ಬೇಸರ ತರಿಸುವಂತಿದೆ. ಆದರೆ, ಈ ಮಕ್ಕಳು ದೇವರ ಮಕ್ಕಳು. ಇವರನ್ನು ಕೀಳಾಗಿ ಕಾಣದೆ, ನಮ್ಮ ಸ್ವಂತ ಮಕ್ಕಳಂತೆ ಪ್ರೀತಿಯಿಂದ ‘ಬಂಗಾರ’ ಎಂದು ಕರೆದು ಗೌರವಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
  ನನ್ನೊಂದಿಗೆ ಶಾಸಕರಾದ ಕೆ.ಎಸ್. ನವೀನ್ ಮತ್ತು ಅರುಣ್ ವಿಕಲಚೇತನರ ಹಕ್ಕುಗಳಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದೇವೆ. ಈ ಹಿಂದೆ ಯಾವುದೇ ಖಾಸಗಿ ವಿಮಾ ಕಂಪನಿಗಳು ವಿಕಲಚೇತನರಿಗೆ ಆರೋಗ್ಯ ವಿಮೆ  ನೀಡಲು ಮುಂದೆ ಬರುತ್ತಿರಲಿಲ್ಲ. ಆದರೆ, ಕೇಂದ್ರ ಸರ್ಕಾರವು 2023-24ರಲ್ಲಿ ಮಹತ್ವದ ನಿಯಮವೊಂದನ್ನು ಜಾರಿಗೆ ತಂದಿದ್ದು, ಅದರನ್ವಯ ಪ್ರತಿಯೊಂದು ಖಾಸಗಿ ಕಂಪನಿಯೂ ವಿಕಲಚೇತನರಿಗೆ ಕಡ್ಡಾಯವಾಗಿ ಆರೋಗ್ಯ ವಿಮೆ ನೀಡಲೇಬೇಕು. ಒಂದು ವೇಳೆ ಯಾವುದೇ ಕಂಪನಿಯು ವಿಮೆ ನೀಡಲು ನಿರಾಕರಿಸಿದರೆ, ತಕ್ಷಣವೇ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಬಹುದು ಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ ಶಾಸಕ ಡಿ.ಎಸ್. ಅರುಣ್ ಮಾತನಾಡಿ, ವಿಕಲಚೇತನರ ಹಾಗೂ ಮಹಿಳೆಯರ ಸಬಲೀಕರಣ ಎಂದರೆ ಕೇವಲ ಅವರ ಮೇಲೆ ಸಹಾನುಭೂತಿ ತೋರಿಸುವುದಲ್ಲ. ಅವರಿಗೆ ಸಮಾಜದಲ್ಲಿ ಗೌರವಯುತವಾಗಿ ಬದುಕಲು ಸಮಾನ ಅವಕಾಶಗಳನ್ನು ಕಲ್ಪಿಸಿಕೊಡುವುದು ನಿಜವಾದ ಸಬಲೀಕರಣವಾಗಿದೆ ಎಂದರು.
ದೇಶದಲ್ಲಿ ಮಹಿಳೆಯರು ತಾಯಿ, ಮಗಳು, ಪತ್ನಿ, ಸಹೋದರಿಯಾಗಿ ಇಡೀ ಕುಟುಂಬದ ಜವಾಬ್ದಾರಿ ಹೊರುತ್ತಾರೆ. ಇಂತಹ ಸಂದರ್ಭದಲ್ಲಿ ದೈಹಿಕ ಸವಾಲುಗಳ ಎದುರಿಸುತ್ತಿರುವ ವಿಕಲಚೇತನ ಮಹಿಳೆಯರಿಗೆ ಕೇವಲ ಕರುಣೆ ತೋರಿಸಿದರೆ ಸಾಲದು. ಅವರಿಗೆ ಆರ್ಥಿಕ ಮತ್ತು ಸಾಮಾಜಿಕ ಸ್ವಾವಲಂಬನೆ ತಂದುಕೊಡುವ ಯೋಜನೆಗಳು ತಲುಪಬೇಕು. 2011ರ ಜನಗಣತಿಯ ಪ್ರಕಾರ ದೇಶದಲ್ಲಿ ಸುಮಾರು 2.68 ಕೋಟಿ ವಿಕಲಚೇತನರಿದ್ದು, ಈ ಪೈಕಿ 1.18 ಕೋಟಿಗೂ ಹೆಚ್ಚು ಮಹಿಳೆಯರಿದ್ದಾರೆ ಎಂದು ತಿಳಿಸಿದರು.
ವಿಕಲತೆ ಎಂಬುದು ಕೇವಲ ದೇಹಕ್ಕೆ ಮಾತ್ರ ಸೀಮಿತವೇ ಹೊರತು ಸಾಧನೆಗಲ್ಲ. ಸಾಧನೆಗೆ ದೈಹಿಕ ವಿಕಲತೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ದೇಶದ ಹೆಣ್ಣುಮಕ್ಕಳೇ ಸಾಕ್ಷಿಯಾಗಿದ್ದಾರೆ ಎಂದ ಅವರು, ರೈಲು ಅಪಘಾತದಲ್ಲಿ ಕಾಲು ಕಳೆದುಕೊಂಡರೂ ಧೃತಿಗೆಡದೆ ಮೌಂಟ್ ಎವರೆಸ್ಟ್ ಶಿಖರವನ್ನೇರಿದ ಮೊದಲ ವಿಕಲಚೇತನ ಮಹಿಳೆ ಅರುಣಿಮಾ ಸಿನ್ಹಾ ಅವರ ಸಾಧನೆ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದರು.
ಸರ್ಕಾರದ ಯೋಜನೆಗಳು ಹಾಗೂ ಸಹಾಯಧನಗಳು ಅರ್ಹರಿಗೆ ತಲುಪಬೇಕು ಎಂಬುದು ನಮ್ಮ ಆಶಯ. ಕೆಲವು ಸಂದರ್ಭಗಳಲ್ಲಿ ಈ ಯೋಜನೆಗಳು ದುರುಪಯೋಗವಾಗುತ್ತಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ವಿಧಾನ  ಪರಿಷತ್ ಶಾಸಕ ಕೆ.ಎಸ್.ನವೀನ್ ಮಾತನಾಡಿ, ವಿಕಲಚೇತನ ಮಹಿಳೆಯರು ಕೇವಲ ಸರ್ಕಾರದ ನೆರವು ನಂಬಿ ಕೂರದೆ ಸ್ವಾವಲಂಬಿಗಳಾಗಿ, ಆರ್ಥಿಕವಾಗಿ ಸಬಲರಾಗಲು ಅಗತ್ಯವಿರುವ ಉದ್ಯಮಶೀಲತಾ ತರಬೇತಿ ಹಾಗೂ ಬ್ಯಾಂಕ್‍ಗಳ ಮೂಲಕ ಆರ್ಥಿಕ ನೆರವು ಕೊಡಿಸಲು ಬದ್ಧ ಎಂದು ಭರವಸೆ ನೀಡಿದರು.
ದ್ವಿಚಕ್ರ ವಾಹನವೊಂದಕ್ಕೆ ಸುಮಾರು ರೂ.1.25 ಲಕ್ಷ ವೆಚ್ಚ ಮಾಡಿ ಅತ್ಯಾಧುನಿಕ ರೆಟ್ರೋಫಿಟ್‍ಮೆಂಟ್ ಅಳವಡಿಸಿದ 15 ದ್ವಿಚಕ್ರ ವಾಹನಗಳನ್ನು ಮಹಿಳಾ ವಿಕಲಚೇತನರಿಗೆ ನೀಡಲಾಗುತ್ತಿದ್ದು, ಈ ವಾಹನವನ್ನು ಮನೆಯ ಅಂಗಳದಲ್ಲಿ ನಿಲ್ಲಿಸಿಕೊಳ್ಳಲು ಅಥವಾ ಸಮಯ ಸಿಕ್ಕಾಗ ಸುಮ್ಮನೆ ಓಡಾಡಲು ಬಳಸದೆ, ನಿಮ್ಮ ಆರ್ಥಿಕ ಪ್ರಗತಿಯ ಹೆದ್ದಾರಿಗೆ ಮುನ್ನುಡಿಯನ್ನಾಗಿ ಬಳಸಿಕೊಳ್ಳಬೇಕು. ನಿಮ್ಮಲ್ಲಿರುವ ಪ್ರತಿಭೆ, ಬುದ್ಧಿವಂತಿಕೆ ಬಳಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಲು ಇದೊಂದು ಉತ್ತಮ ಸಾಧನ ಎಂದು ಸಲಹೆ ನೀಡಿದರು.
ಕೇವಲ ವಾಹನ ನೀಡಿ ನಮ್ಮ ಜವಾಬ್ದಾರಿ ಮುಗಿಯಿತು ಎಂದು ನಾವು ಕೈತೊಳೆದುಕೊಳ್ಳುವುದಿಲ್ಲ. ವಾಹನ ಪಡೆದ 15 ಮಹಿಳೆಯರನ್ನು ಯಶಸ್ವಿ ಉದ್ಯಮಿಗಳನ್ನಾಗಿ ರೂಪಿಸಲು ಸಿದ್ಧರಿದ್ದೇವೆ. ಅವರಿಗೆ ಅಗತ್ಯವಿರುವ ಉದ್ಯಮಶೀಲತಾ ತರಬೇತಿ ನೀಡುವುದರ ಜೊತೆಗೆ, ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್‍ಗಳು ಮತ್ತು ತರಬೇತಿ ಸಂಸ್ಥೆಗಳ ಮೂಲಕ ತಲಾ ರೂ.5 ಲಕ್ಷ ರೂಪಾಯಿಗಳವರೆಗೆ ಆರ್ಥಿಕ ಧನಸಹಾಯ ಕೊಡಿಸುವ ಕೆಲಸವನ್ನು ಮಾಡುತ್ತೇವೆ. ಒಂದು ವರ್ಷದ ಅವಧಿಗೆ ನಿಮ್ಮನ್ನು ಕೈಹಿಡಿದು ನಡೆಸಲಿದ್ದೇವೆ ಎಂದರು.
ಈ ಹಿಂದೆ ಸಮಾಜದಲ್ಲಿ ಅನುಭವಿಸಿದ ಕಷ್ಟಗಳನ್ನು ಮರೆತು, ನಿಮ್ಮನ್ನು ಕೀಳಾಗಿ ಕಂಡವರ ಮುಂದೆ ನೀವೆಲ್ಲರೂ ಸ್ವಾಭಿಮಾನದಿಂದ ಬದುಕಬೇಕು. ಶಾಸಕನಾಗಿ ಅಷ್ಟೇ ಅಲ್ಲದೆ, ನಿಮ್ಮ ಪ್ರೀತಿಯ ಸಹೋದರನಾಗಿ ನಿಮ್ಮ ಮುಂದಿನ ಪ್ರತಿಯೊಂದು ಯಶಸ್ಸಿನ ಹಂತದಲ್ಲೂ ನಾನು ಬೆಂಗಾವಲಾಗಿ ನಿಲ್ಲುತ್ತೇನೆ ಎಂದು ತಿಳಿಸಿದರು.
ವಿಧಾನ  ಪರಿಷತ್ ಶಾಸಕ ಡಿ.ಎಸ್.ಅರುಣ್ ಅವರು 15 ಮಂದಿ ಮಹಿಳಾ ವಿಕಲಚೇತನರಿಗೆ ದ್ವಿಚಕ್ರ ವಾಹನಗಳ ವಿತರಿಸಿ, ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್, ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಸಾಮಾಜಿಕ ಉದ್ಯಮಿ ಮತ್ತು ರೂಟ್ಸ್ ರಿಫಾಮ್ರ್ಸ್ ಇನಿಷಿಯೇಟಿವ್ಸ್ ಸಂಸ್ಥೆ ಸಂಸ್ಥಾಪಕಿ ಅರುಣ ಸಂಪಿಗೆ ಸೇರಿದಂತೆ ಗ್ರಾಮೀಣ, ನಗರ ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ಇದ್ದರು.

ವಿಕಲಚೇತನರ ಸಬಲೀಕರಣಕ್ಕೆ ಸಮಗ್ರ ದತ್ತಾಂಶ ಕ್ರೋಢೀಕರಣ ಅಗತ್ಯ -ವಿಧಾನ ಪರಿಷತ್ ಶಾಸಕ ವೈ.ಎಂ.ಸತೀಶ್