ವಿದ್ಯಾರ್ಥಿಗಳ ಪರವಾಗಿ ಕಾಂಗ್ರೆಸ್ ಸದಾ ನಿಲ್ಲಲಿದೆ; ಯುವಜನರ ಧ್ವನಿಯನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವಕ್ಕೆ ಅಪಾಯ – ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಕರ್ನಾಟಕ ಭವನ, ನವದೆಹಲಿ.: ದೇಶದ ಯುವಕರೇ ಭಾರತದ ನಿಜವಾದ ಶಕ್ತಿ. ಅವರೇ ದೇಶದ ಮುಂದಿನ ಭವಿಷ್ಯ. ಲಕ್ಷಾಂತರ ವಿದ್ಯಾರ್ಥಿಗಳ ಪರಿಶ್ರಮ ಮತ್ತು ಕನಸುಗಳನ್ನು ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳು ನಾಶಪಡಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
Thank you for reading this post, don't forget to subscribe!ಈ ಕುರಿತು ಹೇಳಿಕೆ ನೀಡಿರುವ ಅವರು, ದೇಶದಾದ್ಯಂತ ಸುಮಾರು 25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಗಲಿರುಳು ಶ್ರಮಿಸಿ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳು ಅವರ ಕನಸು ಮತ್ತು ಭವಿಷ್ಯಕ್ಕೆ ದೊಡ್ಡ ಹೊಡೆತ ನೀಡಿವೆ ಎಂದು ಹೇಳಿದರು.
“ದೇಶದ ಯುವಕರು ಈ ದೇಶದ ಆಸ್ತಿ. ಭಾರತದ ಉಜ್ವಲ ಭವಿಷ್ಯ ಅವರ ಕೈಯಲ್ಲಿದೆ. ತಮ್ಮ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿ ವಿದ್ಯಾರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವಾಗ, ಅವರ ಧ್ವನಿಯನ್ನು ಕೇಳುವುದು ಸರ್ಕಾರದ ಕರ್ತವ್ಯ. ಆದರೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ನಡೆದುಕೊಳ್ಳುತ್ತಿರುವ ರೀತಿ ಅತ್ಯಂತ ಖಂಡನೀಯ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ವಿದ್ಯಾರ್ಥಿಗಳ ಮೇಲೆ ನಡೆದ ಬಲಪ್ರಯೋಗ ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕರು ಹಾಗೂ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿರುವ ಕ್ರಮಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದರು.
“ದೇಶದ ಮುಂದಿನ ಭವಿಷ್ಯವಾಗಿರುವ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ಯಾವ ಪೋಷಕರೂ ಒಪ್ಪಲಾರರು. ಈ ವಿದ್ಯಾರ್ಥಿಗಳು ನಮ್ಮ ಮಕ್ಕಳೇ. ಅವರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸುವ ಬದಲು ಅವರನ್ನು ತಡೆಯುವುದು ಮತ್ತು ದಮನಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ” ಎಂದು ಅವರು ಹೇಳಿದರು.
ವಿದ್ಯಾರ್ಥಿಗಳ ಸಂಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಅವರೊಂದಿಗೆ ದೃಢವಾಗಿ ನಿಂತಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿದ್ಯಾರ್ಥಿಗಳ ನ್ಯಾಯಕ್ಕಾಗಿ ಹೋರಾಟದ ಮುಂಚೂಣಿಯಲ್ಲಿದ್ದರೆ, ಪ್ರಿಯಾಂಕಾ ಗಾಂಧಿ ವಾದ್ರಾ ಸಹ ವಿದ್ಯಾರ್ಥಿಗಳ ಪರವಾಗಿ ನೇರವಾಗಿ ಧ್ವನಿ ಎತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
“ಜನರು ಸಂಕಷ್ಟದಲ್ಲಿದ್ದಾಗ ಅವರ ಪರವಾಗಿ ನಿಂತು ಹೋರಾಡುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ. ವಿದ್ಯಾರ್ಥಿಗಳು, ಯುವಜನರು ಹಾಗೂ ಪೋಷಕರ ಧ್ವನಿಯನ್ನು ದೇಶದ ಮುಂದೆ ತರುವ ಕೆಲಸವನ್ನು ನಮ್ಮ ನಾಯಕರು ಮಾಡುತ್ತಿದ್ದಾರೆ. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳು ಮತ್ತು ನಾಯಕರನ್ನು ವಶಕ್ಕೆ ಪಡೆಯುವ ಮೂಲಕ ಸರ್ಕಾರ ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಇದು ಖಂಡನೀಯ” ಎಂದು ಅವರು ಹೇಳಿದರು.
ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಸಂಪೂರ್ಣ ತನಿಖೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ವಿಶ್ವಾಸವನ್ನು ಮರುಸ್ಥಾಪಿಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು ಎಂದು ಮುಖ್ಯಮಂತ್ರಿ ಒತ್ತಾಯಿಸಿದರು.
“ಇದು ಕೇವಲ ಒಂದು ಪರೀಕ್ಷೆಯ ವಿಷಯವಲ್ಲ; ದೇಶದ ಯುವಜನತೆಯ ಬದುಕಿನ ಪ್ರಶ್ನೆ. ವಿದ್ಯಾರ್ಥಿಗಳಿಗೆ ನ್ಯಾಯ ದೊರೆಯುವವರೆಗೆ ಕಾಂಗ್ರೆಸ್ ಪಕ್ಷ ಅವರ ಪರವಾಗಿ ಹೋರಾಟ ಮುಂದುವರಿಸುತ್ತದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.











