ಮತದಾರರು ಭರ್ತಿ ಮಾಡಿ ಬಿ.ಎಲ್.ಓ ಗಳಿಗೆ ಮರಳಿ ನೀಡಿದ 8,79,154 ಗಣತಿ ನಮೂನೆಗಳನ್ನು ಗಣಕೀಕರಣ ಮಾಡಲಾಗಿದ್ದು, ಶೇ.61.03 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಜರುಗಿದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಉತ್ತಮವಾಗಿ ಜರಗುತ್ತಿದ್ದು, ಇದುವರೆಗೂ 14,40,534 ಮತದಾರ ಪೈಕಿ 14,39,849 ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿದೆ. 5407 ಮರಣ, 4821 ಶಾಶ್ವತ ವಲಸೆ, 1842 ಡಬಲ್ ಎಂಟ್ರಿ ಹಾಗೂ 116 ಮತದಾರರು ವಾಸ ಸ್ಥಳದಲ್ಲಿ ಗೈರು ಇರುವುದು ಗಣತಿ ನಮೂನೆಗಳ ಹಂಚಿಕೆ ವೇಳೆ ಕಂಡು ಬಂದಿದೆ. ಯಾವುದೇ ಗೊಂದಲಗಳಿಲ್ಲದೆ ನಿಖರವಾದ ಪಟ್ಟಿ ತಯಾರಿಸಲು ರಾಜಕೀಯ ಪಕ್ಷಗಳ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು, ಚಿತ್ರದುರ್ಗ ನಗರದ ಕೆಲವು ವಾರ್ಡ್ಗಳಲ್ಲಿ ಶೇಕಡಾವಾರು ನೋಂದಣಿ ಕಡಿಮೆ ಇರುವುದನ್ನು ಗುರುತಿಸಲಾಗಿದೆ. ಬಿ.ಎಲ್.ಓ.ಗಳು ಮನೆ ಮನೆಗೆ ಭೇಟಿ ನೀಡಿ ನಿಖರ ಮಾಹಿತಿ ಸಂಗ್ರಹಿಸುವಂತೆ, ರಾಜಕೀಯಕ ಪಕ್ಷಗಳ ಏಜೆಂಟರು ಸೂಕ್ತ ಸಹಕಾರ ನೀಡಬೇಕು. ಈಗಾಗಲೇ ನಗರಸಭೆ ವಾಹನಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪರಿಷ್ಕರಣೆ ಅವಧಿ ವಿಸ್ತರಣೆ:
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIಖ) ಅವಧಿ ವಿಸ್ತರಿಸಲಾಗಿದೆ.ಬದಲಾದ ವೇಳಾಪಟ್ಟಿ ಅನುಸಾರ ಬಿ.ಎಲ್.ಓ ಗಳಿಂದ ಮನೆ ಮನೆ ಭೇಟಿ ಕೊನೆಯ ದಿನಾಂಕವನ್ನು ಜುಲೈ 29 ರಿಂದ ಆಗಸ್ಟ್ 8 ವರೆಗೆ ವಿಸ್ತರಿಸಲಾಗಿದೆ. ಆಗಸ್ಟ್ 8 ರಂದೇ ಮತದಾನ ಕೇಂದ್ರಗಳ ಮರುಹೊಂದಾಣಿಕೆ ಹಾಗೂ ತರ್ಕಬದ್ಧಗೊಳಿಸುವಿಕೆ ಕಾರ್ಯ ಪೂರ್ಣಗೊಳಿಸಲಾಗುವುದು. ಆಗಸ್ಟ್ 17 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಆಗಸ್ಟ್ 17 ರಿಂದ ಸೆಪ್ಟೆಂಬರ್ 16 ವರೆಗೆ 30 ದಿನಗಳ ಕಾಲ ಕಡರು ಮತದಾರರ ಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ. ಅಕ್ಟೋಬರ್ 15 ವರೆಗೆ ಆಕ್ಷೇಪಣೆ ಸಲ್ಲಿಸಿದವರಿಗೆ ನೋಟಿಸ್ ನೀಡಿ, ಆಕ್ಷೇಪಣೆಗಳ ಇತ್ಯರ್ಥಗೊಳಿಸಿ ಆದೇಶ ನೀಡಲಾಗುವುದು. ತದನಂತರ ಅಕ್ಟೋಬರ್ 19 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸಭೆಯಲ್ಲಿ ಮಾಹಿತಿ ನೀಡಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎನ್. ಮೈಲಾರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮತದಾರರ ದತ್ತಾಂಶ ಸಂಗ್ರಹಿಸುವ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ಆದರೆ ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ, ವಿಶೇಷವಾಗಿ ಚಿತ್ರದುರ್ಗ ನಗರದಲ್ಲಿ ಪ್ರಗತಿ ಕಡಿಮೆಯಿದೆ. ನಗರ ಪ್ರದೇಶಗಳಲ್ಲಿ ಕಚೇರಿ ನೌಕರರು, ಉದ್ಯೋಗಸ್ಥರು ಹಾಗೂ ವಿವಿಧ ಕೆಲಸಗಳಲ್ಲಿ ತೊಡಗಿರುವ ಸಾರ್ವಜನಿಕರು ವಾರದ ದಿನಗಳಲ್ಲಿ ಮನೆಯಲ್ಲಿ ಸಿಗುವುದು ವಿರಳ. ಆದ್ದರಿಂದ, ಇವರನ್ನು ತಲುಪಲು ಅಧಿಕಾರಿಗಳು ಮತ್ತು ಬಿ.ಎಲ್.ಒ ಗಳು ವಾರಾಂತ್ಯದ ಶನಿವಾರ ಮತ್ತು ಭಾನುವಾರ ವಿಶೇಷ ಮುತುವರ್ಜಿ ವಹಿಸಿ ಮನೆ ಮನೆಗೆ ಭೇಟಿ ನೀಡಬೇಕು ಎಂದು ಸಲಹೆ ನೀಡಿದರು.
ಎಸ್.ಐ.ಆರ್ ನೊಂದಣಿಯ ಮಹತ್ವವನ್ನು ಸಾರಲು ಕೇವಲ ಔಪಚಾರಿಕ ಸಭೆಗಳನ್ನು ನಡೆಸಿದರೆ ಸಾಲದು. ಬದಲಿಗೆ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳನ್ನು ಒಳಗೊಂಡ ಸೈಕಲ್ ಜಾಥಾ, ಮ್ಯಾರಥಾನ್ ಹಾಗೂ ವಿವಿಧ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಬೇಕು ಎಂದು ಕೋರಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಚುನಾವಣಾ ತಹಶೀಲ್ದಾರ್ ಬೀಬೀ ಫಾತಿಮಾ, ಗ್ರೇಡ್-2 ತಹಶೀಲ್ದಾರ್ ಮಲ್ಲಿಕಾರ್ಜುನ್, ಕಾಂಗ್ರೆಸ್ ಪಕ್ಷದ ನಾಸೀರ್,ಬಿಜೆಪಿ ಪಕ್ಷದ ಮೋಹನ್ ಕುಮಾರ್, ಜೆ.ಡಿ.ಎಸ್ ಪಕ್ಷದ ಗೋಪಾಲಸ್ವಾಮಿ ನಾಯಕ, ಸಿ.ಪಿ.ಎಂ. ಪಕ್ಷದ ಗೌಸ್ಪೀರ್ ಸೇರಿದಂತೆ ಮತ್ತಿರರು ಇದ್ದರು.












