ಕಳ್ಳತನ ಪ್ರಕರಣ ಭೇದಿಸಿದ ಹಿರಿಯೂರು ಪೊಲೀಸರು : ಇಬ್ಬರು ಆರೋಪಿಗಳು ಅರೆಸ್ಟ್*
ವರದಿ: ಪೊಲೀಸ್ ಬೇಟೆ ಪ್ರಸನ್ನ,
ಹಿರಿಯೂರು, ಜು.4: ರಾತ್ರಿ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಹಿರಿಯೂರು ನಗರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ 138 ಗ್ರಾಂ ತೂಕದ ಸುಮಾರು ₹18 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.
ಜೂನ್ 24ರ ರಾತ್ರಿ 10.45ರಿಂದ ಜೂನ್ 25ರ ಬೆಳಗಿನ ಜಾವ 5.45ರ ನಡುವಿನ ಅವಧಿಯಲ್ಲಿ, ಮನೆಯವರು ನಿದ್ರೆಯಲ್ಲಿದ್ದ ವೇಳೆ ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿ ಕಪಾಟಿನಲ್ಲಿದ್ದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದರು. ಬೆಳಿಗ್ಗೆ ಮನೆಯವರು ಎಚ್ಚರವಾದಾಗ ಕಳ್ಳತನ ಬೆಳಕಿಗೆ ಬಂದಿದ್ದು, ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿ, ತಾಂತ್ರಿಕ ಮಾಹಿತಿ ಹಾಗೂ ಖಚಿತ ಸುಳಿವುಗಳ ಆಧಾರದ ಮೇಲೆ ತನಿಖೆ ನಡೆಸಿದರು. ಇದರ ಫಲವಾಗಿ ಜುಲೈ 2ರಂದು ಇಬ್ಬರು ಆರೋಪಿಗಳನ್ನು ಬಂಧಿಸಿ, ಕಳುವಾಗಿದ್ದ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರ ಮಾರ್ಗದರ್ಶನದಲ್ಲಿ, ಹಿರಿಯೂರು ಉಪವಿಭಾಗದ ಡಿವೈಎಸ್ಪಿ ಶಿವಕುಮಾರ್ ಅವರ ನೇತೃತ್ವದಲ್ಲಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹಮದ್ ಸಿರಾಜ್, ಬೆರಳಚ್ಚು ವಿಭಾಗದ ಇನ್ಸ್ಪೆಕ್ಟರ್ ವಿಶ್ವನಾಥ್, ಎಸ್ಐ ಭೀಮನಗೌಡ ಪಾಟೀಲ್ ಹಾಗೂ ಸಿಬ್ಬಂದಿಗಳಾದ ಚೇತನ್, ಮಂಜುನಾಥ್, ದೇವೇಂದ್ರಪ್ಪ, ಸುರೇಶ್ ನಾಯ್ಕ್, ಎಚ್. ಸಿದ್ಧಲಿಂಗೇಶ್ವರ ಯಳವಟ್ಟಿ, ಸುದರ್ಶನ್ ಗೌಡ, ಶಿವಪ್ಪ, ನಾಗನಾಯ್ಕ್ ಮತ್ತು ಶರಣಬಸಪ್ಪ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತು.
ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಕಳ್ಳತನ ಪ್ರಕರಣವನ್ನು ಶೀಘ್ರದಲ್ಲೇ ಭೇದಿಸಿ ಕಳುವಾದ ಚಿನ್ನಾಭರಣವನ್ನು ವಶಪಡಿಸಿಕೊಂಡ ಹಿರಿಯೂರು ನಗರ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಚಿತ್ರ ಶೀರ್ಷಿಕೆ:
ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ಭೇದಿಸಿ ವಶಪಡಿಸಿಕೊಂಡ ಚಿನ್ನಾಭರಣದೊಂದಿಗೆ ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ.










