ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ • ಕಾರ್ಯಕರ್ತರ ಅಭಿಪ್ರಾಯದ ಆಧಾರದಲ್ಲಿ ಪಾರದರ್ಶಕ ಆಯ್ಕೆ • ಶಿಸ್ತು ಮತ್ತು ಸಂಘಟನೆಗೆ ಕೆಪಿಸಿಸಿ ಒತ್ತು
Thank you for reading this post, don't forget to subscribe!ಚಿತ್ರದುರ್ಗ, ಜು. 27:
ಕಾಂಗ್ರೆಸ್ ಪಕ್ಷದ ನೈಜ ಶಕ್ತಿ ಕಾರ್ಯಕರ್ತರೇ ಆಗಿದ್ದು, ಪಕ್ಷದಲ್ಲಿ ಯಾವುದೇ ಕಾರ್ಯಕರ್ತರಿಗೂ ಕಡೆಗಣನೆ ಅಥವಾ ಅನ್ಯಾಯವಾಗುವುದಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಸಂಘಟನ್ ಶ್ರೀಜನ್ ಅಭಿಯಾನದ ಉಸ್ತುವಾರಿ ವಿ.ಎಸ್. ಉಗ್ರಪ್ಪ ಸ್ಪಷ್ಟಪಡಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಸಂಘಟನೆ ಬಲಪಡಿಸುವ ಉದ್ದೇಶದಿಂದ ಆರಂಭಗೊಂಡಿರುವ ‘ಸಂಘಟನ್ ಶ್ರೀಜನ್ ಅಭಿಯಾನ್’ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಕಳೆದ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ಹಾಗೂ ಗೌರವ ನೀಡುವುದು ಈ ಅಭಿಯಾನದ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ಪಕ್ಷದಲ್ಲಿ ಶಿಸ್ತು ಅತ್ಯಂತ ಮುಖ್ಯವಾಗಿದ್ದು, ಶಿಸ್ತಿನಿಂದ ಕೆಲಸ ಮಾಡುವ ಕಾರ್ಯಕರ್ತರಿಗೆ ಸೂಕ್ತ ಅವಕಾಶ ಕಲ್ಪಿಸಲಾಗುತ್ತದೆ. ಶಿಸ್ತು ಉಲ್ಲಂಘಿಸುವವರ ಬಗ್ಗೆ ಎಐಸಿಸಿ ವಿಶೇಷ ತಂಡಗಳು ವರದಿ ಸಲ್ಲಿಸಲಿದ್ದು, ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹಿಂದಿನ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿದ ಉಗ್ರಪ್ಪ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ನ 17 ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಪಕ್ಷಕ್ಕೆ ಹಿನ್ನಡೆಯಾಯಿತು. ಆದರೆ ಮುಂಬರುವ ದಿನಗಳಲ್ಲಿ ತಳಮಟ್ಟದಿಂದ ಸಂಘಟನೆ ಬಲಪಡಿಸಿ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.
ರಾಜೀವ್ ಗಾಂಧಿ ಜಾರಿಗೆ ತಂದ ಪಂಚಾಯತ್ ರಾಜ್ ವ್ಯವಸ್ಥೆಯ ಮಾದರಿಯಲ್ಲೇ ಕಾಂಗ್ರೆಸ್ ಪಕ್ಷವೂ ಬ್ಲಾಕ್ ಮಟ್ಟದಿಂದ ಸಂಘಟನೆಯನ್ನು ಬಲಪಡಿಸುತ್ತಿದ್ದು, ಪಕ್ಷದ ಎಲ್ಲಾ ಸಂಘಟನಾ ಚಟುವಟಿಕೆಗಳಲ್ಲಿ ಭಾಗವಹಿಸಲು ಕಾಂಗ್ರೆಸ್ ಸದಸ್ಯತ್ವ ಕಡ್ಡಾಯವಾಗಿದೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಕೆಪಿಸಿಸಿ ಉಸ್ತುವಾರಿ ಮುರಳೀಧರ ಹಾಲಪ್ಪ, ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಅಧ್ಯಕ್ಷರ ಆಯ್ಕೆ ಕಾರ್ಯಕರ್ತರ ನೇರ ಅಭಿಪ್ರಾಯದ ಆಧಾರದ ಮೇಲೆ ನಡೆಯಲಿದ್ದು, ಯಾವುದೇ ಹಿಂಬಾಗಿಲು ರಾಜಕಾರಣ ಅಥವಾ ಪ್ರಭಾವಕ್ಕೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಪಿಸಿಸಿ ಹಾಗೂ ಎಐಸಿಸಿಯಿಂದ ನೇಮಕಗೊಂಡ ವೀಕ್ಷಕರ ತಂಡ ಈಗಾಗಲೇ ಜಿಲ್ಲೆಗೆ ಆಗಮಿಸಿದ್ದು, ಪಾರದರ್ಶಕ ಹಾಗೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇದೇ ಮಾದರಿಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ವೀಕ್ಷಕರಾದ ರಿಪುನ್ ಬೋರಾ, ಸೌಗಂಧಿಕಾ ರಘುನಾಥ್, ರಾಜಕೀಯ ವಿಶ್ಲೇಷಕ ರಮೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್ಪೀರ್, ಕಾರ್ಯಾಧ್ಯಕ್ಷ ಕೆ.ಎಂ. ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಪಿ. ಸಂಪತ್ ಕುಮಾರ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್ನ ಹಲವು ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.











