ಹಿರಿಯೂರು: ರೈತರ ಬೋರ್‌ವೆಲ್‌ಗಳಿಗೆ ಅಳವಡಿಸಿರುವ ವಿದ್ಯುತ್ ಪರಿವರ್ತಕಗಳು (ಟ್ರಾನ್ಸ್‌ಫಾರ್ಮರ್‌ಗಳು) ಸುಟ್ಟ ನಂತರ ಸರ್ಕಾರದ ಆದೇಶದಂತೆ 72 ಗಂಟೆಗಳೊಳಗೆ ದುರಸ್ತಿಪಡಿಸಿ ಮರು ಅಳವಡಿಸಬೇಕಾದರೂ, ಬೆಸ್ಕಾಂ ಅಧಿಕಾರಿಗಳು ತಿಂಗಳುಗಟ್ಟಲೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಗುರುವಾರ ಹಿರಿಯೂರಿನ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ತಾಲೂಕಿನಲ್ಲಿ ಸಕಾಲಕ್ಕೆ ಮಳೆಯಾಗದ ಕಾರಣ ಅಂತರ್ಜಲ ಮಟ್ಟ ಕುಸಿದಿದ್ದು, ಮುಂಗಾರು ಮಳೆಯ ಕೊರತೆಯಿಂದ ತೋಟಗಾರಿಕೆ ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿವೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸುಟ್ಟಿರುವ ಪರಿವರ್ತಕಗಳನ್ನು ತಕ್ಷಣ ಬದಲಾಯಿಸದೇ ರೈತರನ್ನು ಇಲಾಖೆಗೆ ಅಲೆದಾಡಿಸುತ್ತಿರುವುದು ರೈತರ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಹಿಂದೆ ಒಂದು ವಾರದೊಳಗೆ ಸಮಸ್ಯೆ ಪರಿಹರಿಸದಿದ್ದರೆ ಬೆಸ್ಕಾಂ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಗೆ ಮುಂದಾದರು. ಸುಟ್ಟಿರುವ ಎಲ್ಲಾ ಪರಿವರ್ತಕಗಳನ್ನು ಕೂಡಲೇ ದುರಸ್ತಿಪಡಿಸಿ ಗುಣಮಟ್ಟದ ಹೊಸ ಪರಿವರ್ತಕಗಳನ್ನು ಒದಗಿಸಬೇಕು ಹಾಗೂ ರೈತರನ್ನು ಅನಗತ್ಯವಾಗಿ ಅಲೆದಾಡಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ವೇಳೆ ಬೆಸ್ಕಾಂ ಸ್ಟೋರ್ ಅಧಿಕಾರಿ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹಾವೀರ್ ಸ್ಥಳಕ್ಕೆ ಆಗಮಿಸಿ, ಬಾಕಿ ಇರುವ ಎಲ್ಲಾ ರೈತರ ಸುಟ್ಟ ಪರಿವರ್ತಕಗಳನ್ನು ಸೋಮವಾರದೊಳಗೆ ವಿತರಿಸುವುದಾಗಿ ಭರವಸೆ ನೀಡಿದರು. ಈ ಭರವಸೆಯ ಹಿನ್ನೆಲೆಯಲ್ಲಿ ರೈತರು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ.ಸಿ. ಹೊರಕೇರಪ್ಪ, ಕಾರ್ಯಪಾಲಕ ಅಭಿಯಂತರ ಪೀರ್ ಸಾಬ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬಿ.ಒ. ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷ ಎಂ. ಲಕ್ಷ್ಮಿಕಾಂತ್, ಬಿ.ಡಿ. ಶ್ರೀನಿವಾಸ್, ದಸ್ತಗಿರಿ ಸಾಬ್, ಚೇತನ್ ಯಳನಾಡು, ಮೆಟಿಕುರ್ಕೆ ತಿಪ್ಪೇಸ್ವಾಮಿ, ಭಾರತೀಯ ಕಿಸಾನ್ ಸಂಘದ ಗಡಾರಿ ಕೃಷ್ಣಪ್ಪ, ಕಾತ್ರಿಕೇನಹಳ್ಳಿ ಮಂಜುನಾಥ್, ಕೆ.ಸಿ. ಚಿಕ್ಕೇಗೌಡ, ಮಹೇಶ್, ಸುಬ್ರಮಣ್ಯ, ಮಣಿಕಂಠ, ಜಯಪ್ರಕಾಶ್, ಕೆ.ಕೆ. ಹಟ್ಟಿ, ಹರೀಶ್, ನಾಗಣ್ಣ, ಗಿರೀಶ್, ದೊಡ್ಡಘಟ್ಟ ಕುಮಾರ್, ಮಹಿಳಾ ಘಟಕದ ವಿ. ಕಲ್ಪನಾ, ಶಶಿಕಲಾ, ಡಾ. ಲಕ್ಷ್ಮಕ್ಕ, ಲಕ್ಕವನಹಳ್ಳಿ ಸುಬ್ರಮಣಿ, ಲಕ್ಷ್ಮಿ, ಕರಿಯಮ್ಮ, ಹೆಚ್. ರಂಗಸ್ವಾಮಿ, ಐನಹಳ್ಳಿ ರವೀಶ್, ಉಮಾಪತಿ, ಈಶ್ವರಗೆರೆ ನಾಗರಾಜ್, ವಿನಯ್, ಬೋಚಪುರ ರಮೇಶ್, ಮರದ ಮುತ್ತು, ಬ್ಯಾಡರಹಳ್ಳಿ ಶ್ರೀನಿವಾಸ್, ಎಂ.ಪಿ. ನಾಗರಾಜ್, ನಾಗಣ್ಣ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.










