ಹಿರಿಯೂರು, ಜು. 18: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರು ವಿಧಿವಶರಾಗಿರುವುದು ಅತ್ಯಂತ ದುಃಖದ ಸಂಗತಿ ಎಂದು ಜೆಡಿಎಸ್ ಹಿರಿಯ ಮುಖಂಡ ಎಂ. ರವೀಂದ್ರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Thank you for reading this post, don't forget to subscribe!ಈ ಕುರಿತು ಪ್ರಕಟಣೆ ನೀಡಿರುವ ಅವರು, “ಚೆನ್ನಮ್ಮ ಅವರು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಮಾರ್ಗದರ್ಶಕರಾಗಿ, ಕುಟುಂಬದ ಶಕ್ತಿ ಮತ್ತು ಆಧಾರಸ್ತಂಭವಾಗಿ ಬದುಕು ನಡೆಸಿದ್ದರು. ಸರಳತೆ, ಸೌಜನ್ಯ ಹಾಗೂ ಕುಟುಂಬದ ಮೌಲ್ಯಗಳನ್ನು ತಮ್ಮ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದ ಅವರು ಅನೇಕರಿಗೆ ಆದರ್ಶಪ್ರಾಯರಾಗಿದ್ದರು” ಎಂದು ತಿಳಿಸಿದ್ದಾರೆ.
ಅವರ ನಿಧನದಿಂದ ದೇವೇಗೌಡರ ಕುಟುಂಬಕ್ಕೆ ಮಾತ್ರವಲ್ಲದೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೂ ಅಪಾರ ದುಃಖ ಉಂಟಾಗಿದೆ. ಇದು ತುಂಬಲಾರದ ನಷ್ಟವಾಗಿದ್ದು, ಅವರ ಅಗಲಿಕೆ ರಾಜ್ಯದ ರಾಜಕೀಯ ವಲಯಕ್ಕೂ ನೋವುಂಟು ಮಾಡಿದೆ ಎಂದು ರವೀಂದ್ರಪ್ಪ ಹೇಳಿದ್ದಾರೆ.
ಈ ದುಃಖದ ಸಂದರ್ಭದಲ್ಲಿ ತಾವು ದೇವೇಗೌಡರ ಕುಟುಂಬದೊಂದಿಗೆ ಇದ್ದು, ಭಗವಂತನು ಚೆನ್ನಮ್ಮ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಅವರ ಕುಟುಂಬದವರಿಗೆ ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.












