ದಲಿತ ಚಳವಳಿಯ ಕುದಿಕುಲುಮೆಯಲ್ಲಿ ಎದ್ದು ಬಂದ ಸಿ.ಎಂ.ಮುನಿಯಪ್ಪ ಆತ್ಮಚರಿತ್ರೆ
*
“ದಲಿತ ಚಳವಳಿ” ಎಂದರೆ ಮೈನವಿರೇಳುವ ಕಾಲವೊಂದಿತ್ತು. ಈ ಚಳವಳಿಯನ್ನು ರಕ್ತ ಕಣ್ಣೀರಿನಲ್ಲಿ ಕಟ್ಟಿದ್ದು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಎಂಬ ಘನ ವಿವೇಕದ ಬೆಳಕಿನಲ್ಲಿ ಮುನ್ನಡೆಸಿದ್ದು, ಇದರ ಫಲವೇ ಇಂದು ದಲಿತ ಸಮುದಾಯ ತಲೆ ಎತ್ತಿ ಅನ್ಯಾಯ,ಅಸಮಾನತೆಯನ್ನು ಪ್ರಶ್ನಿಸುವಂತಾಗಿದೆ. ಮುಖ್ಯ ದಾರಿಯಲ್ಲಿ ಸ್ವಾಭಿಮಾನದಿಂದ ನಡೆಯುವಂತಾಗಿದೆ. ಈ ಹಾದಿಯಲ್ಲಿ ಸರ್ವಸ್ವವನ್ನು ತ್ಯಾಗ ಮಾಡಿ ದುಡಿದು, ದಣಿದ ಜೀವಗಳು ಇಂದು ಹಣ್ಣಾಗಿವೆ. ದಲಿತ ಚಳವಳಿ ಎಂಬ ಕುದಿಕುಲುಮೆಯಲ್ಲಿ ಎದ್ದು ಬಂದವರಲ್ಲಿ “ಕೋಲಾರದ ಸಿ.ಎಂ ಮುನಿಯಪ್ಪ” ಕೂಡ ಒಬ್ಬರು. ಅವರ ಆತ್ಮ ಚರಿತ್ರೆ “ಕಾಲಡಿಯ ಕಣ್ಣು” ಜನಾರ್ಪಣೆಗೊಂಡಿದೆ. ಅದು ಕೇವಲ ಸಿ.ಎಂ ಮುನಿಯಪ್ಪ ಅವರ ಆತ್ಮಚರಿತ್ರೆಯಲ್ಲಷ್ಟೆ ಅಲ್ಲ, ಅದು ದಲಿತ ಚಳವಳಿಯ ಆತ್ಮ ಚರಿತ್ರೆಯೂ ಆಗಿದೆ. ಈ ದೇಶದ ನೆಲಮೂಲ ಚರಿತ್ರೆಯೂ ಹೌದು. “ಕಾಲಡಿಯ ಕಣ್ಣುಗಳು” ಮುಗಿಲ ಬೆಳಕ ಕಂಡ ಪರಿ ಇದು.
ದಲಿತ ಚಳವಳಿಯ ಕಥನದ ಕಾಲಡಿಯ ಕಣ್ಣು ಕೃತಿ ಶುಕ್ರವಾರ ಜುಲೈ. 10 ರಂದು ಕೋಲಾರದಲ್ಲಿ ಸ್ವತಃ ಕೃತಿಕಾರ ಯನ್ನು ಕೃತಿಕಾರ ಸಿ.ಎಂ.ಮುನಿಯಪ್ಪ ಅವರು ಸರಳವಾಗಿ ಜನರಿಗೆ ಸಮರ್ಪಿಸಿದರು.
ನಾಡಿನ ಹಿರಿಯ ದಲಿತ ಹೋರಾಟಗಾರೂ , ಪತ್ರಕರ್ತರೂ ಆಗಿರುವ ಸಿ.ಎಂ.ಮುನಿಯಪ್ಪರ ನಾಲ್ಕು ದಶಕಗಳ ತಮ್ಮ ಚಳವಳಿಯ ಬದುಕು ಹಾಗೂ ಕರ್ನಾಟಕದ ದಲಿತ ಸಂಘರ್ಷ ಸಮಿತಿಯ ಚಾರಿತ್ರಿಕ ಹೋರಾಟವನ್ನು ಒಳಗೊಂಡ ಕಥನವು ಕಗ್ಗತ್ತಲಲ್ಲಿದ್ದ ದಮನಿತ ಲೋಕದ ಒಡಲಾಳದ ಧ್ವನಿಯಾಗಿದೆ.
ಆತ್ಮ ಚರಿತ್ರೆಯ ರೂಪದಲ್ಲಿ ತಮ್ಮ ಅನುಭವದ ಕಥನವನ್ನು ಬರವಣಿಗೆಯ ಮೂಲಕ ದಾಖಲಿಸಲು ಮುಂದಾಗಿ ಅಂತಿಮವಾಗಿ ದಲಿತ ಚಳವಳಿಯ ಕಥನವಾಗಿ ಏಳು ಅಧ್ಯಾಯಗಳಲ್ಲಿ ಸಿ.ಎಂ.ಮುನಿಯಪ್ಪರ ಜೀವನ ಮತ್ತು ಚಳವಳಿಯ 140 ಅನುಭವದ ಪ್ರಸಂಗಗಳು 748 ಪುಟಗಳಾಗಿ ಹೊರ ಹೊಮ್ಮಿದೆ.
ಕಳೆದ 11 ವರ್ಷಗಳಿಂದಲೂ ವೈಯಕ್ತಿಕ ಹಾಗೂ ಸಾಂಸ್ಕೃತಿಕವಾದ ಹಲವಾರು ಸಂಕಟ, ಸವಾಲುಗಳ ನಡುವೆ ಸರಿ ಸುಮಾರು 11 ವರ್ಷಗಳ ಕಾಲ ಪರಿಶ್ರಮ ಪಟ್ಟು ದಲಿತ ಲೋಕದ ಅನುಭವ ಕಥನಗಳನ್ನು ಬರೆದಿರುವ ಅವರು, ಕೋಲಾರ ಜಿಲ್ಲೆ ಮಾತ್ರವಲ್ಲದೆ ಕರ್ನಾಟಕದ ಇತರೆ ಜಿಲ್ಲೆಗಳ ದಲಿತ ಹೋರಾಟಗಳನ್ನು ದಾಖಲೀಕರಿಸಬೇಕೆಂಬ ಹಂಬಲದಲ್ಲಿ ಬೃಹತ್ ಕೃತಿಯು ರೂಪುಗೊಂಡಿದೆ.
ದೊಡ್ಡ ಕಾರ್ಯಕ್ರಮದ ಮೂಲಕ ಈ ಕೃತಿಯನ್ನು ಲೋಕಾರ್ಪಣೆಗೊಳಿಸುವ ಉದ್ದೇಶ ಇತ್ತಾದರೂ, ಕೃತಿಕಾರರ ಆರೋಗ್ಯದಲ್ಲಿನ ಏರುಪೇರಿನ ಕಾರಣ ಕೃತಿಯು ಸರಳವಾಗಿ ಕೃತಿಕಾರರಿಂದಲೇ ಜುಲೈ 10 ಶುಕ್ರವಾರ ಲೋಕಾಪರ್ಣೆಗೊಂಡಿದೆ
ಮಹಾರಾಷ್ಟ್ರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ರ ಅರಿವಿನ ಮಾರ್ಗದರ್ಶನದಲ್ಲಿ ಮೈದಳೆದಿದ್ದ ದಲಿತ ಪ್ಯಾಂಥರ್ಸ್ ಬಿತ್ತಿದ ಹೋರಾಟ ಕಾವು ಕರ್ನಾಟಕಕ್ಕೂ ವ್ಯಾಪಿಸಿ ದಲಿತ ಸಂಘರ್ಷ ಸಮಿತಿಯಾಗಿ ರೂಪುಗೊಂಡು ದಮನಿತ ಸಮುದಾಯಗಳಲ್ಲಿ ಅದಮ್ಯ ಸ್ವಾಭಿಮಾನ ಮೂಡಿಬಂದು, ಜೀವನ ಸುಧಾರಣೆಗೊಂಡು ಸಬಲೀಕರಣ ಸಾಧ್ಯವಾಗಿರುವ ಕರ್ನಾಟಕ ಸಾಂಸ್ಕೃತಿಕ ಚರಿತ್ರೆಗೆ ಸೇರಿದ ಸುವರ್ಣ ಅಧ್ಯಾಯಗಳನ್ನು ಕಾಲಡಿಯ ಕಣ್ಣು ಕೃತಿ ಒಳಗೊಂಡಿದೆ.
ದಲಿತ ಸಂಘರ್ಷ ಸಮಿತಿ ಒಂದು ಸಾಂಸ್ಕೃತಿಕ ಸಂಘಟನೆಯಾಗಿ ಕರ್ನಾಟಕದಲ್ಲಿ ೧೯೭೫ 1975 ರಿಂದ 1990 ರವರೆಗೆ ಯಾವುದೇ ರೋಗ ರುಜಿನ, ಭಿನ್ನಾಭಿಪ್ರಾಯ, ಸ್ವಾರ್ಥ, ಸ್ವಜಾತಿ ಹಾಗೂ ಉಪಜಾತಿ ಮಮಕಾರಗಳಿಲ್ಲದೆ ಆರೋಗ್ಯದಿಂದ ಉತ್ತುಂಗದಲ್ಲಿತ್ತು. ಮುಂದಿನ ತಲೆಮಾರಿಗೆ ದಸಂಸ ಚರಿತ್ರೆ ತಿಳಿಯದಿದ್ದರೆ ತುಂಬಲಾರದ ನಷ್ಟವೆಂಬ ಭಾವನೆಯಲ್ಲಿ, ದಲಿತ ಚಳವಳಿ ಆರಂಭವಾಗಿ 50 ವರ್ಷಗಳು ಕಳೆದಿರುವ ಸಂದರ್ಭದಲ್ಲಿ ಸಿಎಂ ಮುನಿಯಪ್ಪ ರ ಆತ್ಮಕಥೆಯು ದಸಂಸ ಆತ್ಮಕಥೆಯಂತೆ ಹೊರಬಂದಿದೆ.
ದಲಿತ ಚಳವಳಿಯ ಮಹಾಸಮುದ್ರದಿಂದ ಒಂದು ಬೊಗಸೆಯಷ್ಟು ನೀರನ್ನು ಮಾತ್ರವೇ ತೆಗೆದುಕೊಂಡಿರುವೆ ಎನ್ನುವ ಕೃತಿಕಾರ ಸಿಎಂ ಮುನಿಯಪ್ಪರ ಅನಿಸಿಕೆಯು ದಲಿತ ಚಳವಳಿಯ ಬೀರಿದ ಸಾಮಾಜಿಕ ಪರಿಣಾಮಗಳ ಅಗಾಧತೆಯ ಸಂಕೇತವಾಗಿದೆ.
ದಲಿತ ಚಳವಳಿಯ ಕುರಿತು ಅನೇಕ ಅಪಕಲ್ಪನೆಗಳು, ಅಪವ್ಯಾಖ್ಯಾನಗಳು ಆಗುತ್ತಿರುವ ಈ ಸಂದರ್ಭದಲ್ಲಿ ಇವುಗಳ ಹಿಂದಿನ ಸತ್ಯಾಸತ್ಯತೆಯನ್ನು ಅರಿವುದಕ್ಕೆ ಕಾಲಡಿಯ ಕಣ್ಣು ಸಹಕಾರಿಯಾಗಲಿದೆ. ದಲಿತ ಚಳವಳಿಯ ನೈಜ ಕಥನ ಇಲ್ಲಿ ದಾಖಲಾಗಿದೆ. ಹೊಸ ತಲೆ ಮಾರಿನ ಹೋರಾಟಗಾರರು ಹಾಗೂ ಬರಹಗಾರರು ಈ ಕೃತಿಯ ಮೂಲಕ ನಮ್ಮ ನೆಲದ ಗತಚರಿತ್ರೆ ಹಾಗೂ ಸಾಮಾಜಿಕ ವಾಸ್ತವಗಳನ್ನು ಅರಿತುಕೊಂಡು, ತಮ್ಮ ಅರಿವನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಸಮಾಜದಲ್ಲಿ ದ್ವೇಷರಹಿತ ಸಾಮರಸ್ಯ ಹಾಗೂ ಸದ್ವಿವೇಕಗಳು ಸದೃಢವಾಗಿ ಬೆಳೆಯುವಂತಾಗಲಿ ಎಂಬ ಆಶಯವನ್ನು ಕಾಲಡಿಯ ಕಣ್ಣು ಕೃತಿಯು ಹೊಂದಿದೆ.
ಸಾಹಿತಿಗಳು, ಚಿಂತಕರು, ದಲಿತ ಸಂಘಟನೆಯ ಒಡನಾಡಿಗಳು, ಮಿತ್ರರ ಪ್ರೀತಿಯ ಕೋರಿಕೆ ಮತ್ತು ನಿರೀಕ್ಷೆಯಂತೆ ಕಾಲಡಿಯ ಕಣ್ಣು ಕೃತಿ ಓದುಗರ ಮುಂದಿದ್ದು, ರಾಜ್ಯಾದ್ಯಂತ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ಶನಿವಾರದಿಂದ ಮಾರಾಟಕ್ಕೆ ಸಿಗುತ್ತದೆ.
ಸಾವಿರಾರು ವರ್ಷಗಳಿಂದ ಅಕ್ಷರ ಸಂಸ್ಕೃತಿಯಿಂದಲೇ ವಂಚಿತವಾಗಿದ್ದ ಸಮುದಾಯದ ಕಥನವನ್ನು ಹೊಂದಿರುವ ಕಾಲಡಿಯ ಕಣ್ಣು ಕೃತಿಯನ್ನು ಕನ್ನಡ ನಾಡು ಪ್ರೀತಿಯಿಂದ ಸ್ಪೀಕರಿಸಿ, ಮುಕ್ತ ಮನಸ್ಸಿನಿಂದ ಓದಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಜನಪರ ಚಳವಳಿ ಚೇತನಗಳಿಗೆ ಬೆಂಬಲವಾಗಿ ನಿಲ್ಲಬೇಕೆಂದು ಕೃತಿಕಾರ ಸಿ.ಎಂ.ಮುನಿಯಪ್ಪ ಕೋರಿದ್ದಾರೆ.










