ರಕ್ತದಾನ ಶಿಬಿರದಲ್ಲಿ ಐಎಂಎ ಅಧ್ಯಕ್ಷ ಡಾ. ಎಲ್.ಪಾಲಾಕ್ಷಯ್ಯ ಹೇಳಿಕೆಯುವಕರು ರಕ್ತದಾನದ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು

ಚಿತ್ರದುರ್ಗ:
ರಕ್ತವನ್ನು ಯಾವುದೇ ಕಾರ್ಖಾನೆಯಲ್ಲಿ ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಅದನ್ನು ಒಬ್ಬರಿಂದ ಮತ್ತೊಬ್ಬರಿಗೆ ದಾನ ಮಾಡಲು ಮಾತ್ರ ಸಾಧ್ಯ. ಯುವಜನತೆ ಹೆಚ್ಚೆಚ್ಚು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಐಎಂಎ ಜಿಲ್ಲಾ ಅಧ್ಯಕ್ಷರಾದ ಡಾ.ಎಲ್.ಪಾಲಾಕ್ಷಯ್ಯ ಹೇಳಿದರು.
ನಗರದ ಐ.ಎಂ.ಎ ಸಭಾಂಗಣದಲ್ಲಿ ಮಂಗಳವಾರ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಹಾಗೂ ಕೋಟೆನಾಡು ವೆಲ್ಫೇರ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ರಕ್ತದಾನ ಶಿಬಿರ’ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ನೀಡುವ ಒಂದು ಯೂನಿಟ್ ರಕ್ತವು ಸಂಸ್ಕರಣೆಯ ಮೂಲಕ ಕನಿಷ್ಠ ಮೂರು ಜನರ ಪ್ರಾಣ ಉಳಿಸಬಲ್ಲದು. ರಕ್ತದ ಮಹತ್ವ ಹಾಗೂ ದೇಶದಲ್ಲಿ ಎದುರಾಗುತ್ತಿರುವ ರಕ್ತದ ಕೊರತೆ ನಿವಾರಿಸುವಲ್ಲಿ ರೆಡ್‍ಕ್ರಾಸ್ ಸಂಸ್ಥೆಯು ನಿರಂತರವಾಗಿ ಮಾಡುತ್ತಿರುವ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಬಣ್ಣಿಸಿದರು.
“ರಕ್ತದಾನ ಮಾಡಿ – ಜೀವ ಉಳಿಸಿ”, “ನನ್ನ ರಕ್ತ – ನನ್ನ ಕೊಡುಗೆ” ಎಂಬ ಘೋಷವಾಕ್ಯಗಳೊಂದಿಗೆ ರಕ್ತದಾನ ಜಾಗೃತಿ ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿ ಮಾದರಿಯಾಗಿರುವ ಪ್ರಮುಖ ರಕ್ತದಾನಿಗಳನ್ನು ಗುರುತಿಸಿ, ಅವರಿಗೆ ಪ್ರಮಾಣಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಿಬಿರದಲ್ಲಿ ನೂರಾರು ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಯುವಜನಾಧಿಕಾರಿ ಧನಂಜಯ್ ಜಗತಾಪ್, ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ಗಾಯತ್ರಿ ಶಿವರಾಮ್, ಉಪ ಸಭಾಪತಿ ಅರುಣ್ ಕುಮಾರ್, ಕಾರ್ಯದರ್ಶಿ ಮಜಹರ್ ಉಲ್ಲಾ, ಖಜಾಂಚಿ ವಿರೇಶ್, ನಿರ್ದೇಶಕರಾದ ಪಿ.ಬಿ. ಶಿವರಾಮ್, ಗುರುಮೂರ್ತಿ, ಸುರೇಶ್ ಬಾಬು, ಕೋಟೆನಾಡು ವೆಲ್ಫೇರ್ ಫೌಂಡೇಶನ್ ಅಧ್ಯಕ್ಷ ಮುಷ್ಟಾಕ್ ಅಹ್ಮದ್ ಮತ್ತು ಪದಾಧಿಕಾರಿಗಳು, ಬಸವೇಶ್ವರ ರಕ್ತಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ರಕ್ತದಾನ ಶಿಬಿರದಲ್ಲಿ ಐಎಂಎ ಅಧ್ಯಕ್ಷ ಡಾ. ಎಲ್.ಪಾಲಾಕ್ಷಯ್ಯ ಹೇಳಿಕೆಯುವಕರು ರಕ್ತದಾನದ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು