ಬರ ಪರಿಸ್ಥಿತಿ, ಮೇಕೆದಾಟು, ಮಹದಾಯಿ, ಕೃಷ್ಣಾ ನೀರು ಹಂಚಿಕೆ, ನದಿ ಜೋಡಣೆ ಸೇರಿ ರಾಜ್ಯದ ಪ್ರಮುಖ ಯೋಜನೆಗಳಿಗೆ ಕೇಂದ್ರದ ಅನುಮತಿ ಪಡೆಯಲು ಎಲ್ಲ ಪಕ್ಷಗಳ ಸಹಕಾರ ಕೋರಿಕೆ
ನವದೆಹಲಿ, ಜು. 27:
Thank you for reading this post, don't forget to subscribe!ರಾಜ್ಯದ ಹಿತಾಸಕ್ತಿಯ ವಿಚಾರದಲ್ಲಿ ರಾಜಕೀಯ ಭೇದಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲ ಸಂಸದರು ಮತ್ತು ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು. ನವದೆಹಲಿಯಲ್ಲಿ ನಡೆದ ಕರ್ನಾಟಕ ಸಂಸದರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುಮತಿ ಮತ್ತು ನೆರವು ದೊರಕಿಸಲು ಎಲ್ಲ ಪಕ್ಷಗಳ ಸಹಕಾರ ಅಗತ್ಯ ಎಂದು ತಿಳಿಸಿದರು.
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ಭೇಟಿಯಲ್ಲಿ ಸೂಚಿಸಿದ್ದಾಗಿ ತಿಳಿಸಿದ ಮುಖ್ಯಮಂತ್ರಿ, ಆಲಮಟ್ಟಿ ಮತ್ತು ಹಾರಂಗಿ ಜಲಾಶಯಗಳನ್ನು ಹೊರತುಪಡಿಸಿ ಉಳಿದ ಬಹುತೇಕ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ ಎಂದರು. ಇದೇ ಪರಿಸ್ಥಿತಿ ಮುಂದುವರಿದರೆ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ನೆರವು ಕೋರಿರುವುದಾಗಿ ಹೇಳಿದರು.
ರೈತರು ಅಣೆಕಟ್ಟುಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣವನ್ನು ಗಮನಿಸಿ ಬೆಳೆ ಆಯ್ಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ ಅವರು, ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ತುಂಗಭದ್ರಾ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯಕ್ರಮದ ವೇಳೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರ ಸಮ್ಮುಖದಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರೊಂದಿಗೆ ನಡೆದ ಸಭೆಯಲ್ಲಿ 30 ಟಿಎಂಸಿ ನೀರು ಸಂರಕ್ಷಿಸುವ ಉದ್ದೇಶದಿಂದ ನವಿಲೆ ಸಮತೋಲನ ಜಲಾಶಯ ನಿರ್ಮಾಣಕ್ಕೆ ಒಮ್ಮತ ವ್ಯಕ್ತವಾಗಿದೆ ಎಂದು ಹೇಳಿದರು. ಗೋದಾವರಿ–ಕೃಷ್ಣಾ–ಪೆನ್ನಾರ್–ಕಾವೇರಿ ನದಿಗಳ ಜೋಡಣೆ ಯೋಜನೆಗೂ ಮೂರು ರಾಜ್ಯಗಳ ಒಪ್ಪಿಗೆ ದೊರೆತಿದ್ದು, ಇದು ಐತಿಹಾಸಿಕ ನಿರ್ಧಾರವಾಗಿದೆ ಎಂದು ತಿಳಿಸಿದರು.
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕರ್ನಾಟಕದ ಪರವಾಗಿ ಮಹತ್ವದ ತೀರ್ಪು ನೀಡಿದ್ದು, ರಾಜ್ಯದ ವ್ಯಾಪ್ತಿಯಲ್ಲಿ ಸಮತೋಲನ ಅಣೆಕಟ್ಟು ನಿರ್ಮಿಸಲು ಬೇರೆ ರಾಜ್ಯಗಳ ಅನುಮತಿ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಹೇಳಿದರು. ಇದೇ ವಿಷಯವನ್ನು ರಾಜ್ಯಸಭೆಯಲ್ಲಿ ಕೇಂದ್ರ ಜಲಶಕ್ತಿ ಸಚಿವರೂ ಪುನರುಚ್ಚರಿಸಿರುವುದನ್ನು ಸ್ವಾಗತಿಸಿದರು.
ಕೃಷ್ಣಾ ನ್ಯಾಯಮಂಡಳಿಯ ನೀರು ಹಂಚಿಕೆ ಕುರಿತ ಗೆಜೆಟ್ ಅಧಿಸೂಚನೆಗೆ ಸಂಬಂಧಿಸಿದ ಪ್ರಕರಣದ ಶೀಘ್ರ ಇತ್ಯರ್ಥಕ್ಕಾಗಿ ಸುಪ್ರೀಂ ಕೋರ್ಟ್ ವಿಶೇಷ ಪೀಠ ರಚಿಸಲು ನಿರ್ಧರಿಸಿರುವುದನ್ನು ಮುಖ್ಯಮಂತ್ರಿ ಸ್ವಾಗತಿಸಿದರು. ಮಹದಾಯಿ ಯೋಜನೆಗೆ ಇರುವ ಕಾನೂನು ಅಡೆತಡೆಗಳನ್ನು ನಿವಾರಿಸಲು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದ ಬಾಕಿ ಯೋಜನೆಗಳ ಪ್ರಗತಿಯನ್ನು ಸಮನ್ವಯಗೊಳಿಸಲು ಕರ್ನಾಟಕ ಭವನದಲ್ಲಿ ಹೊಸ ಆಡಳಿತಾತ್ಮಕ ವ್ಯವಸ್ಥೆ ಜಾರಿಗೆ ತರಲಾಗುವುದು. ಯೋಜನೆಗಳ ಮೇಲ್ವಿಚಾರಣೆಗೆ ಪ್ರತ್ಯೇಕ ರೆಸಿಡೆಂಟ್ ಕಮಿಷನರ್ ಸೇರಿದಂತೆ ವಿಶೇಷ ತಂಡವನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.












