ಬರ ಪರಿಹಾರಕ್ಕೆ ವಿಬಿ ಜಿ ರಾಮ್ ಜಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ: ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ

ಕರ್ನಾಟಕ ವಾರ್ತೆ(ಚಿತ್ರದುರ್ಗ). ಜು.25:

Thank you for reading this post, don't forget to subscribe!

ರಾಜ್ಯದಲ್ಲಿ ಬರಪೀಡಿತ ವಾತಾವರಣವಿರುವುದರಿಂದ ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿ ಬೇರೆಡೆಗೆ ವಲಸೆ ಹೋಗುವುದನ್ನು ತಡೆಯುವುದು ಸರ್ಕಾರದ ಆದ್ಯತೆಯಾಗಿದೆ. ಇದಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಜಾರಿಗೆ ತರಲಾಗಿರುವ ವಿಬಿ ಜಿ ರಾಮ್ ಜಿ (VBG RAM G) ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಇಲಾಖೆಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಕರೆ ನೀಡಿದ್ದಾರೆ.

ಚಿತ್ರದುರ್ಗ ನಗರದ ಮರುಘಾಮಠದ ಅನುಭವ ಮಂಟಪದಲ್ಲಿ ಬೆಂಗಳೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

​ಈ ಹಿಂದೆ ಶೇ. 90ರಷ್ಟು ಕೇಂದ್ರ ಮತ್ತು ಶೇ. 10ರಷ್ಟು ರಾಜ್ಯ ಸರ್ಕಾರದ ಪಾಲು ಹೊಂದಿದ್ದ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಸ್ವರೂಪ ಬದಲಾಗಿ, ಈಗ ವಿಬಿ ಜಿ ರಾಮ್ ಜಿ ಯೋಜನೆಯಾಗಿ ಅನುಷ್ಠಾನಕ್ಕೆ ಬಂದಿದೆ. ಪ್ರಸ್ತುತ ಈ ಯೋಜನೆಯಲ್ಲಿ ರಾಜ್ಯ ಸರ್ಕಾರವು ಶೇ. 40 ಹಾಗೂ ಕೇಂದ್ರ ಸರ್ಕಾರವು ಶೇ. 60ರಷ್ಟು ಹಣಕಾಸಿನ ಪಾಲು ಹಂಚಿಕೊಳ್ಳುತ್ತಿವೆ.

ವಿಬಿ ಜಿ ರಾಮ್ ಜಿ ಯೋಜನೆಗಾಗಿ ಕೇಂದ್ರ ಸರ್ಕಾರದಿಂದ ರೂ.5,709 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ ರೂ3,800 ಕೋಟಿ ಅನುದಾನ್ನು ಮುಖ್ಯಮಂತ್ರಿಗಳು ಅನುಮೋದಿಸಿ ಬಿಡಿಗಡೆಗೊಳಿಸಿದ್ದಾರೆ.

ಜುಲೈ 1ರಿಂದ ಜಾರಿಗೆ ಬಂದಿರುವ ಈ ಯೋಜನೆಯಡಿ ಬರುವ 9 ತಿಂಗಳಿಗೆ ಒಟ್ಟು ರೂ.9,500 ಕೋಟಿ ಅನುದಾನ ಲಭ್ಯವಿದೆ. ಈಗಾಗಲೇ ಮೊದಲ ಹಂತದಲ್ಲಿ ರೂ.2,500 ಕೋಟಿ ಬಿಡುಗಡೆಯಾಗಿದ್ದು, ರಾಜ್ಯದ 31 ಜಿಲ್ಲೆಗಳಿಗೆ ಕೂಲಿ ಪಾವತಿಗಾಗಿ ಸುಮಾರು ರೂ.1,000 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಕೂಲಿ ಹಾಗೂ ಸಾಮಗ್ರಿ ವೆಚ್ಚಕ್ಕೆ ಯಾವುದೇ ಹಣಕಾಸಿನ ತೊಂದರೆಯಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

​ಹಿಂದೆ 267 ಮಾದರಿಯ ಕಾಮಗಾರಿಗಳಿದ್ದರೆ, ಪ್ರಸ್ತುತ ಪರಿಷ್ಕೃತ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ 318 ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಯೋಜನೆಯಲ್ಲಿ ಕೂಲಿಗೆ 60 ಸಾಮಗ್ರಿ 40 ಅನುಪಾತವನ್ನು ಕಾಯ್ದುಕೊಳ್ಳಲಾಗಿದೆ.

​ರಾಜ್ಯದ 5,927 ಗ್ರಾಮ್ ಪಂಚಾಯಿತಿಗಳ ಪೈಕಿ ಶೇ. 75ರಷ್ಟು ಪಂಚಾಯಿತಿಗಳಲ್ಲಿ ಈಗಾಗಲೇ ಕೆಲಸಗಳು ಪ್ರಾರಂಭವಾಗಿದ್ದು, ಇನ್ನುಳಿದ ಶೇ. 25ರಷ್ಟು ಗ್ರಾಮಗಳಲ್ಲಿಯೂ ಶೀಘ್ರವೇ ಕಾಮಗಾರಿ ಆರಂಭಿಸಲು ಸೂಚಿಸಲಾಗಿದೆ.ಬರ ಪರಿಸ್ಥಿತಿಯನ್ನು ಎದುರಿಸಲು ವಿಬಿ ಜಿ ರಾಮ್ ಜಿ ಯೋಜನೆಯಡಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯೋಜನೆಯಡಿ ಪ್ರತಿ ತಿಂಗಳು 1.25 ಕೋಟಿ ಮಾನವ ದಿನಗಳ ಸೃಜನೆಗೆ ಅವಕಾಶವಿದೆ.

ಬೋರ್‌ವೆಲ್ ರೀಚಾರ್ಜ್, ಇಂಗುಗುಂಡಿ, ಚೆಕ್ ಡ್ಯಾಂ ನಿರ್ಮಾಣ ಮತ್ತು ಜಲಮೂಲಗಳ ಹೂಳೆತ್ತುವ ಕೆಲಸಗಳಿಗೆ ಆದ್ಯತೆ ನೀಡಬೇಕು. ಹೊಸದಾಗಿ ಶಾಲಾ ಕೊಠಡಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳು, ಕಾಂಪೌಂಡ್ ಹಾಗೂ ಚರಂಡಿ ನಿರ್ಮಾಣ ಮತ್ತು ದುರಸ್ತಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದು. ಅನುದಾನ ಬಿಡುಗಡೆ ಬಗ್ಗೆ ಅಧಿಕಾರಿಗಳಿಗೆ ಗೊಂದಲ ಬೇಡ. ಇನ್ನೂ ಪೋರ್ಟಲ್ ತೆರೆದಿದ್ದು ಕೆಲಸಗಳನ್ನು ನೊಂದಾಯಿಸಿ ಜಾರಿಗೊಳಿಸಬಹುದು.ಶಾಸಕರು ತಮ್ಮ ಕ್ಷೇತ್ರದಲ್ಲಿ 5 ರಿಂದ 10 ಬಡ ಫಲಾನುಭವಿಗಳನ್ನು ವೈಯಕ್ತಿಕ ಕಾಮಗಾರಿಗಳಿಗೆ ಆಯ್ಕೆ ಮಾಡಿ ಉದ್ಯೋಗ ಸೃಷ್ಟಿಗೆ ನೆರವಾಗಬಹುದು ಎಂದರು.

ಜಿ.ಪಂ. ಸಿಇಒಗಳು ಇಚ್ಛಾಶಕ್ತಿ ಪ್ರದರ್ಶಿಸಿ ವಿಬಿ ಜಿ ರಾಮ್ ಜಿ ಯೋಜನೆಯ ಮೂಲಕ ಗ್ರಾಮೀಣ ಭಾಗದ ಕೊನೆಯ ವ್ಯಕ್ತಿಗೂ ಕೆಲಸ ಸಿಗುವಂತೆ ನೋಡಿಕೊಳ್ಳಬೇಕು ಎಂದು ಸಚಿವ ಈಶ್ವರ್ ಖಂಡ್ರೆ ಸೂಚಿಸಿದರು.

ಬರ ಪರಿಹಾರಕ್ಕೆ ವಿಬಿ ಜಿ ರಾಮ್ ಜಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ: ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ