ಚಿತ್ರದುರ್ಗ: ದೆಹಲಿಯ ಪಾರ್ಲಿಮೆಂಟ್ ಚಲೋ ಹೋರಾಟ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಹಾಗೂ ಅಶ್ರುವಾಯು ದಾಳಿಯನ್ನು ಖಂಡಿಸಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಸರ್ಕಾರಿ ಕಲಾ ಕಾಲೇಜು ಮತ್ತು ಮಹಿಳಾ ಕಾಲೇಜು ವಿದ್ಯಾರ್ಥಿಗಳು ಕಾಲೇಜು ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಲಾಯಿತು.
Thank you for reading this post, don't forget to subscribe!ಈ ಸಂದರ್ಭದಲ್ಲಿ ಎಐಡಿಎಸ್ಓ ರಾಜ್ಯ ಕಛೇರಿ ಕಾರ್ಯದರ್ಶಿ ಮಹಾಂತೇಶ್ ಬಿಳೂರು ಮಾತನಾಡುತ್ತಾ, “ನಿನ್ನೆ ದೆಹಲಿಯ ಸಂಸತ್ ಚಲೋ ಸಂದರ್ಭದಲ್ಲಿ ಕ್ರೂರ ದಮನಕಾರಿ ದಾಳಿ ನಡೆಸಿ, ವಿದ್ಯಾರ್ಥಿಗಳ ಹೋರಾಟವನ್ನು ಹತ್ತಿಕ್ಕಲು ಲಾಠಿಚಾರ್ಜ್ ಹಾಗೂ ಅಶ್ರುವಾಯು ಸಿಡಿಸಿರುವ ಸರ್ಕಾರದ ಕ್ರಮವನ್ನು ಅತ್ಯುಗ್ರ ಪದಗಳಲ್ಲಿ ಎಐಡಿಎಸ್ಓ ಖಂಡಿಸುತ್ತದೆ. ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂದಿಸುವುದರ ಬದಲಿಗೆ ಹೋರಾಟವನ್ನು ಹತ್ತಿಕಲಾಗುತ್ತಿದೆ. ಪ್ರಜಾತಾಂತ್ರಿಕ ವ್ಯವಸ್ಥೆ ಎಲ್ಲಿಗೆ ಬಂದು ನಿಂತಿದೆ ಎಂದು ಪ್ರಶ್ನೆ ಹಾಕಿದರು. ವಿದ್ಯಾರ್ಥಿಗಳ ಬೇಡಿಕೆ ಏನು ಎಂದು ಚರ್ಚೆ ನಡೆಸಲು ಬಾರದ ಕೇಂದ್ರ ಬಿಜೆಪಿ ಸರ್ಕಾರದ “ಸರ್ವಾಧಿಕಾರಿ ಧೋರಣೆ” ಎದ್ದು ಕಾಣುತ್ತದೆ ಎಂದು ಕಿಡಿಕಾರಿದರು.
ದೇಶದ ಇತಿಹಾಸ ಪುಟಗಳನ್ನು ತೆಗೆದು ನೋಡಿದರೆ ಬದಲಾವಣೆ ಎಂಬುದು ಸುಮ್ಮನೆ ಬಂದಿಲ್ಲ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅತ್ಯಂತ ಸ್ಪೂರ್ತಿಯಿಂದ ಭಾಗವಹಿಸಿದ್ದರು. ಎಮರ್ಜೆನ್ಸಿ ಸಮಯದಲ್ಲಿ ವಿದ್ಯಾರ್ಥಿಗಳು ಹೋರಾಡಿದ್ದಾರೆ. ಇತ್ತೀಚೆಗೆ ದೆಹಲಿಯ ರೈತರ ಹೋರಾಟದಲ್ಲಿ ಕೂಡ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದಾರೆ. ಈಗ ಇನ್ನು ವಿದ್ಯಾರ್ಥಿಗಳ ಮೇಲೆ ನೇರ ದೌರ್ಜನ್ಯ, ಅನ್ಯಾಯ ನಡೆದಿರುವಾಗ ಇದನ್ನು ಸಹಿಸಿಕೊಂಡು ವಿದ್ಯಾರ್ಥಿಗಳು ಸುಮ್ಮನಿರುವುದಿಲ್ಲ ಎನ್ನುವುದಕ್ಕೆ ನಿನ್ನೆಯ ಹೋರಾಟ ಸಾಕ್ಷಿ.
ಹಾಗಾಗಿ ವಿದ್ಯಾರ್ಥಿಗಳು ಸರಿಯಾದ ವಿಚಾರದ ಅಡಿಯಲ್ಲಿ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ಮುಂತಾದ ಕ್ರಾಂತಿಕಾರಿಗಳ ಆದರ್ಶಗಳನ್ನು ಅರಿತು, ಮೈಗೂಡಿಸಿಕೊಂಡು ಈ ವ್ಯವಸ್ಥೆ ವಿರುದ್ಧ ಸಮರ ಸಾರಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಐಡಿಎಸ್ಓ ಜಿಲ್ಲಾ ಸಂಚಾಲಕ ಕೆ ಈರಣ್ಣ ಮತ್ತು ಸುಪ್ರೀಯಾ, ಭೂಮಿಕಾ, ವಿದ್ಯಾರ್ಥಿಗಳು ಭಾಗವಹಿಸಿದ್ದರು.













