ಬಾಲಕಾರ್ಮಿಕ ಮುಕ್ತ ಸಮಾಜದಿಂದ ದೇಶದ ಭವಿಷ್ಯ ಉಜ್ವಲ – ಆರ್. ಶಿವಣ್ಣ

ವರದಿ:- ಅರುಣ್ ಕುಮಾರ್. ಎಸ್(ದೊಡ್ಡ ಉಳ್ಳಾರ್ತಿ)

Thank you for reading this post, don't forget to subscribe!

ಚಿತ್ರದುರ್ಗ: “ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ ಬಾಲಕಾರ್ಮಿಕರನ್ನಾಗಿ ದುಡಿಸಿಕೊಳ್ಳುವ ವ್ಯವಸ್ಥೆಗೆ ತಿಲಾಂಜಲಿ ಹಾಡಿದಾಗ ಮಾತ್ರ ಅವರ ಭವಿಷ್ಯ ರೂಪಿಸಲು ಸಾಧ್ಯ. ಆ ಮೂಲಕ ಅವರು ದೇಶದ ಅತ್ಯುನ್ನತ ಸೇವೆಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ,” ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಆರ್. ಶಿವಣ್ಣ ತಿಳಿಸಿದರು.

ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ವಕೀಲರ ಸಂಘ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಆಶ್ರಿತ ಸಂಸ್ಥೆ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ಉದ್ಯೋಗದಾತರ ಹಾಗೂ ಕಾರ್ಮಿಕ ಸಂಘಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ದುಡಿಯುವ ವಯಸ್ಸಿನಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಯಾವುದೇ ಕಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ, ಅವರ ಮುಂದಿನ ಗುರಿ ಹಾಗೂ ಸಾಧನೆಗಳಿಗೆ ಮುಳುವಾಗುತ್ತದೆ. ಆರ್ಥಿಕ ಸಂಕಷ್ಟಗಳ ನೆಪವೊಡ್ಡಿ ಮಕ್ಕಳನ್ನು ಜಾನುವಾರು ಮೇಯಿಸಲು ಅಥವಾ ಇನ್ನಿತರ ಕೂಲಿ ಕೆಲಸಗಳಿಗೆ ದೂಡುವುದು ಅತ್ಯಂತ ಬೇಸರದ ಸಂಗತಿ. ಇಂತಹ ಪ್ರವೃತ್ತಿಗಳಿಂದ ಮಕ್ಕಳು ಶಿಕ್ಷಣ ವಂಚಿತರಾಗಿ ಬಾಲಕಾರ್ಮಿಕರಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಬಾಲಕಾರ್ಮಿಕ ನಿಷೇಧ ಕಾಯ್ದೆಯು ಪೂರಕವಾಗಿ ಕೆಲಸ ಮಾಡುತ್ತದೆ,” ಎಂದರು.
“ಹಿಂದಿನ ಕಾಲದಲ್ಲಿದ್ದ ಕಠಿಣ ಶಿಕ್ಷೆಗಳು ಇಂದಿನ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಇಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು 1 ರಿಂದ 9ನೇ ತರಗತಿವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದೊಂದಿಗೆ ಯಾರನ್ನೂ ಅನುತ್ತೀರ್ಣಗೊಳಿಸಬಾರದು ಎಂಬ ನಿಯಮವನ್ನು ಜಾರಿಗೆ ತಂದಿದೆ. ಮಗುವು ಒಂದು ವೇಳೆ ಕಲಿಕೆಯಲ್ಲಿ ಹಿಂದುಳಿದಿದ್ದರೂ ಸಹ, ಮುಂದಿನ ದಿನಗಳಲ್ಲಿ ಅವನ ಬೌದ್ಧಿಕ ಮಟ್ಟ ಸುಧಾರಿಸಿ ಉತ್ತಮ ವಿಜ್ಞಾನಿ, ವಕೀಲ, ಸೈನಿಕ, ತಾಂತ್ರಿಕ ಸಹಾಯಕ, ರಾಜಕಾರಣಿ ಅಥವಾ ನ್ಯಾಯಾಧೀಶನಾಗಲು ಇದು ಅನುವು ಮಾಡಿಕೊಡುತ್ತದೆ,” ಎಂದು ಸರ್ಕಾರದ ಶೈಕ್ಷಣಿಕ ಸುಧಾರಣಾ ಕ್ರಮಗಳನ್ನು ಶ್ಲಾಘಿಸಿದರು.
“ಸಮಾಜದಲ್ಲಿ ಶಾಂತಿ ಮತ್ತು ರಕ್ಷಣೆ ಕಾಪಾಡಲು ಪೊಲೀಸ್ ಇಲಾಖೆಯಿದ್ದರೆ, ಬಾಲಕಾರ್ಮಿಕರನ್ನು ಗುರುತಿಸಿ ಅವರಿಗೆ ಶಿಕ್ಷಣದ ಮುಖ್ಯವಾಹಿನಿಗೆ ತರಲು ಕಾರ್ಮಿಕ ಇಲಾಖೆ ಪ್ರಮುಖ ಜವಾಬ್ದಾರಿ ಹೊತ್ತಿದೆ. ಕಾರ್ಮಿಕ ಕಲ್ಯಾಣ ಇಲಾಖೆಯು ಜಿಲ್ಲಾ, ರಾಜ್ಯ ಮಟ್ಟದಲ್ಲಿ ಬಾಲಕಾರ್ಮಿಕರ ಹಕ್ಕುಗಳ ರಕ್ಷಣೆಗೆ ನಿರಂತರವಾಗಿ ಶ್ರಮಿಸುತ್ತಿದೆ. ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಜಾಗೃತಿ ಮೂಡಿಸಲು ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಅನೇಕ ಸ್ವಯಂ ಸೇವಾ ಸಂಸ್ಥೆಗಳು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವುದು ಶ್ಲಾಘನೀಯ,” ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಅತ್ಯಂತ ಯಶಸ್ವಿಯಾಗಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳನ್ನು ದುಡಿಮೆಗೆ ತಳ್ಳುವುದಕ್ಕಿಂತ ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಬಾಲಕಾರ್ಮಿಕ ನಿರ್ಮೂಲನೆಗಾಗಿ ಸರ್ಕಾರ ಹಲವು ಮಹತ್ವದ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. 1 ರಿಂದ 9ನೇ ತರಗತಿವರೆಗೆ ಅನುತ್ತೀರ್ಣ ಪದ್ಧತಿಯನ್ನು ನಿಷೇಧಿಸಿ ಮಕ್ಕಳಲ್ಲಿ ಶಿಕ್ಷಣದ ಆಸಕ್ತಿ ಹೆಚ್ಚಿಸಲಾಗಿದೆ. ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆ ಜಾರಿಗೊಳಿಸುವ ಮೂಲಕ ಮಕ್ಕಳ ಹಾಜರಾತಿಯನ್ನು ಹೆಚ್ಚಿಸಲಾಗುತ್ತಿದೆ. ಪೌಷ್ಟಿಕಾಂಶದ ಕೊರತೆ ನಿವಾರಣೆಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಮಾಡಲಾಗುತ್ತಿದೆ.
ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ವಿದ್ಯಾರ್ಥಿ ವೇತನಗಳನ್ನು ನೀಡಲಾಗುತ್ತಿದ್ದು, ದೂರದ ಪ್ರದೇಶಗಳ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲಾಗಿದೆ. ಪೋಷಕರ ಆರ್ಥಿಕ ಸ್ಥಿತಿ ಸುಧಾರಿಸಲು ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸುವ ಮೂಲಕ ಶಾಲಾ ಶಿಕ್ಷಣಕ್ಕೆ ಉತ್ತೇಜನ ನೀಡಲಾಗಿದೆ.
ಮಕ್ಕಳ ರಕ್ಷಣೆಗಾಗಿ ಮಕ್ಕಳ ಸಹಾಯವಾಣಿ 1098 ಸ್ಥಾಪಿಸಲಾಗಿದ್ದು, ಬಾಲ ನ್ಯಾಯ ಮಂಡಳಿಗಳನ್ನು ರಚಿಸಲಾಗಿದೆ. ಬಾಲಕಾರ್ಮಿಕರ ರಕ್ಷಣೆ ಹಾಗೂ ಪುನರ್ವಸತಿಗಾಗಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಬಾಲಕಾರ್ಮಿಕ ಪದ್ಧತಿಯನ್ನು ತಡೆಗಟ್ಟಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸರ್ಕಾರದ ಜೊತೆಗೆ ಸಾರ್ವಜನಿಕರು, ಪೋಷಕರು ಹಾಗೂ ಸಾಮಾಜಿಕ ಸಂಘಟನೆಗಳು ಕೈಜೋಡಿಸಬೇಕು. ಪ್ರತಿಯೊಂದು ಮಗು ಶಿಕ್ಷಣ ಪಡೆದು ಉತ್ತಮ ಪ್ರಜೆಯಾಗಿ ಬೆಳೆಯುವ ವಾತಾವರಣ ನಿರ್ಮಾಣವಾದಾಗ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಬಾಲಕಾರ್ಮಿಕ ಮುಕ್ತ ಸಮಾಜದಿಂದ ದೇಶದ ಭವಿಷ್ಯ ಉಜ್ವಲ – ಆರ್. ಶಿವಣ್ಣ