ಉಚಿತ ಆರೋಗ್ಯ ಶಿಬಿರ ಮೂಲಕ. ಶ್ರೀ ಸಿ.ಟಿ ಕೃಷ್ಣಮೂರ್ತಿ ಹುಟ್ಟುಹಬ್ಬ ಆಚರಣೆ
ವರದಿ :-ಅರುಣ್ ಕುಮಾರ್.ಎಸ್ (ದೊಡ್ಡಉಳ್ಳಾರ್ತಿ)
ಚಿತ್ರದುರ್ಗ :- ನಗರದ ಕರುವಿನ ಕಟ್ಟೆ ಸರ್ಕಲ್ ಬಳಿ ಚಿತ್ರದುರ್ಗ ಮಾಜಿ ನಗರಸಭೆ ಅಧ್ಯಕ್ಷರಾದ ಶ್ರೀಯುತ ಸಿ.ಟಿ. ಕೃಷ್ಣಮೂರ್ತಿಯವರ 70ನೇ ವರ್ಷದ ಜನ್ಮದಿನಾಚರಣೆಯನ್ನು ದೊಡ್ಡ ಗರಡಿ ಅಭಿಮಾನಿಗಳ ಬಳಗ ಹಾಗೂ ಗೋಡೆಮನೆ ಆರೋಗ್ಯ ಮತ್ತು ರಸ್ತೆ ಜಾಗೃತಿ ಟ್ರಸ್ಟ್ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಅಂಗವಾಗಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಸಹಯೋಗದಲ್ಲಿ ಹಾಗೂ ನಗರದ ಎಸ್.ಜೆ.ಎಂ ದಂತ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ಉಚಿತ ದಂತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು,ಸಸಿಗೆ ನೀರು ಎರೆಯುವ ಮೂಲಕ ಚಾಲನೆ ನೀಡಲಾಯಿತು,
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಗರಸಭೆಯ ಮಾಜಿ ಅಧ್ಯಕ್ಷರಾದ ಕಾಂತರಾಜ್ ರವರು:- ಸಿ.ಟಿ. ಕೃಷ್ಣಮೂರ್ತಿಯವರು 3 ಬಾರಿ ನಗರಸಭಾ ಅಧ್ಯಕ್ಷರಾಗಿ ಸಮಾಜಸೇವೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಸಮಾಜ ಸೇವೆಯ ಮೂಲಕ ಸಾವಿರಾರು ಜನರಿಗೆ ಬೆಳಕಾಗಲಿ.“ ಜನಸೇವೆಯನ್ನು ತಮ್ಮ ಜೀವನದ ಧ್ಯೇಯವನ್ನಾಗಿಸಿಕೊಂಡು ಸಮಾಜಮುಖಿ ಕಾರ್ಯಗಳ ಮೂಲಕ ಜನಮನ ಗೆದ್ದಿದ್ದಾರೆ. ಅವರ 70ನೇ ವರ್ಷದ ಜನ್ಮದಿನವನ್ನು ಆರೋಗ್ಯ ಶಿಬಿರಗಳ ಮೂಲಕ ಆಚರಿಸಿತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಸೇವಾ ಮನೋಭಾವ ಯುವಪೀಳಿಗೆಗೆ ಪ್ರೇರಣೆಯಾಗಬೇಕು” ಇಂತಹ ಮಹನೀಯರ 70ನೇ ವರ್ಷದ ಜನ್ಮದಿನದ ಈ ಶುಭ ಸಂದರ್ಭದಲ್ಲಿ ಅವರಿಗೆ ದೇವರು ಇನ್ನಷ್ಟು ಆಯುಷ್ಯ, ಆರೋಗ್ಯ ಮತ್ತು ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.
ಮಾಜಿ ಶಾಸಕರಾದ ಎಸ್.ಕೆ. ಬಸವರಾಜನ್ ಮಾತನಾಡಿ:- ಸಿ.ಟಿ. ಕೃಷ್ಣಮೂರ್ತಿ ಅವರು ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವ ಅಪರೂಪದ ನಾಯಕರು. ಅಧಿಕಾರಕ್ಕಿಂತ ಮಾನವೀಯತೆಯನ್ನು ಹೆಚ್ಚಾಗಿ ಮೌಲ್ಯಮಾಪನ ಮಾಡಿದವರು. ಅವರ ನಡೆ, ನುಡಿ ಮತ್ತು ಕಾರ್ಯಗಳು ಯುವ ಪೀಳಿಗೆಗೆ ಪ್ರೇರಣೆಯಾಗಿವೆ ಸಮಾಜಮುಖಿ ಕಾರ್ಯಗಳು ಜನರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಆಡಳಿತಧಿಕಾರಿಗಳಾದ ಬಸವ ಕುಮಾರ ಸ್ವಾಮೀಜಿ ಮಾತನಾಡಿ:-ಶ್ರೀ ಸಿ.ಟಿ.ಕೃಷ್ಣಮೂರ್ತಿ ಅವರ 70ನೇ ವರ್ಷದ ಜನ್ಮದಿನೋತ್ಸವವನ್ನು ಆಚರಿಸುತ್ತಿರುವುದು ಅತ್ಯಂತ ಸಂತಸದ ಸಂಗತಿ.70 ವರ್ಷ ಎಂದರೆ ಕೇವಲ ವಯಸ್ಸಿನ ಸಂಖ್ಯೆ ಅಲ್ಲ. ಅದು ಅನುಭವದ ಸಂಪತ್ತು, ಸೇವೆಯ ಪಯಣ ಮತ್ತು ಜನರ ಆಶೀರ್ವಾದಗಳ ಪ್ರತೀಕ. ಶ್ರೀ ಸಿ.ಟಿ. ಕೃಷ್ಣಮೂರ್ತಿ ಅವರು ತಮ್ಮ ಜೀವನವನ್ನು ಸಮಾಜದ ಒಳಿತಿಗಾಗಿ ಮುಡಿಪಾಗಿಟ್ಟ ವ್ಯಕ್ತಿ. ರಾಜಕೀಯ, ಸಾಮಾಜಿಕ ಹಾಗೂ ಮಾನವೀಯ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿರುವ ಸೇವೆ ಅಪಾರ ಎಂದರು.
ದೇವರಾಜು ಅರಸು ವಿದ್ಯಾ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕಧಿಕಾರಿಗಳಾದ:-ಎಂ.ಸಿ ರಘು ಚಂದನ್ ಮಾತನಾಡಿ:- ರಾಜಕೀಯ ಸಾಮಾಜಿಕ ಹಾಗೂ ಮಾನವೀಯ ಮೌಲ್ಯಗಳನ್ನು ಸಮನ್ವಯಗೊಳಿಸಿಕೊಂಡು ಜನರೊಂದಿಗೆ ಬೆರೆತು ಜನಸೇವೆಗಾಗಿ ಬದುಕಿದ ವ್ಯಕ್ತಿತ್ವ ಅವರದು. ಬಡವರ ನೋವಿಗೆ ಸ್ಪಂದಿಸುವ ಗುಣ, ಸಮಾಜದ ಒಳಿತಿಗಾಗಿ ಮಾಡುವ ಕಾರ್ಯಗಳು ಮತ್ತು ಎಲ್ಲರನ್ನು ಒಂದಾಗಿ ಕರೆದುಕೊಂಡು ಹೋಗುವ ನಾಯಕತ್ವ ಇಂದು ಅವರಿಗೆ ಅಪಾರ ಜನಮನ್ನಣೆ ತಂದುಕೊಟ್ಟಿದೆ ಎಂದರು.
ಚಿತ್ರದುರ್ಗದ ಕಬೀರಾನಂದ ಆಶ್ರಮದ ಶ್ರೀ ಪೂಜ್ಯ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ :- ಕೃಷ್ಣಮೂರ್ತಿರವರು ಬಡವರ ನೋವಿಗೆ ಸ್ಪಂದಿಸುವ ಹೃದಯ, ಯುವಕರಿಗೆ ಮಾರ್ಗದರ್ಶನ ನೀಡುವ ಚಿಂತನೆ, ಸಮಾಜದಲ್ಲಿ ಆರೋಗ್ಯ, ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಕಾರ್ಯಗಳು ಇವರ ವ್ಯಕ್ತಿತ್ವವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತವೆ. ಇಂದು ಅವರ ಹುಟ್ಟುಹಬ್ಬವನ್ನು ಉಚಿತ ಆರೋಗ್ಯ ತಪಾಸಣಾ ಶಿಬಿರ, ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತಿರುವುದು ಅವರ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದರು.
ಉಚಿತ ಆರೋಗ್ಯ ಹಾಗೂ ದಂತ ತಪಾಸಣಾ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.ಕಾರ್ಯಕ್ರಮವು ವಿಶೇಷ ಭಾವಪೂರ್ಣ ಕ್ಷಣಗಳಿಗೆ ಸಾಕ್ಷಿಯಾಯಿತು.
ಈ ಶಿಬಿರದಲ್ಲಿ ಹೃದಯರೋಗ, ನರರೋಗ, ಮೂತ್ರಪಿಂಡದ ಕಲ್ಲು, ಕ್ಯಾನ್ಸರ್ ಸೇರಿದಂತೆ ವಿವಿಧ ಗಂಭೀರ ಕಾಯಿಲೆಗಳ ಪೂರ್ಣ ಶರೀರ ತಪಾಸಣೆ ನಡೆಸಿ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿ ಆರೋಗ್ಯ ತಪಾಸಣೆಯ ಸೌಲಭ್ಯವನ್ನು ಪಡೆದುಕೊಂಡರು. ತಜ್ಞ ವೈದ್ಯರ ತಂಡ ಜನರ ಆರೋಗ್ಯ ಸಮಸ್ಯೆಗಳನ್ನು ಪರಿಶೀಲಿಸಿ ಅಗತ್ಯ ಸಲಹೆಗಳನ್ನು ನೀಡಿದರು. ಸಮಾಜಮುಖಿ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಆರೋಗ್ಯದ ಕಡೆ ವಿಶೇಷ ಕಾಳಜಿ ವಹಿಸಿರುವ ಟ್ರಸ್ಟ್ ಹಾಗೂ ಆಸ್ಪತ್ರೆಯ ಕಾರ್ಯವನ್ನು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು,ಇನ್ನೂ ಕಾರ್ಯಕ್ರಮದಲ್ಲಿ ಸಿ.ಟಿ ಕೃಷ್ಣ ಮೂರ್ತಿರವರ ಸುಪುತ್ರ ಅರ್ಜುನ್.ದೊಡ್ಡ ಗರಡಿ ಅಧ್ಯಕ್ಷರಾದ ಶ್ರೀ ಯುತ ತಿಮ್ಮಣ್ಣ,ಗೋಡೆಮನೆ ಆರೋಗ್ಯ ಮತ್ತು ರಸ್ತೆ ಜಾಗೃತಿ ಟ್ರಸ್ಟ್ ಸಂಸ್ಥಾಪಕರಾದ ವಿನಯ್ ಗೋಡೆಮನೆ,
ಮಾಜಿ ನಗರಸಭೆ ಅಧ್ಯಕ್ಷರು ಎಚ್.ಸಿ ನಿರಂಜನಮೂರ್ತಿ.ನರಸಿಂಹರಾಜು ಜಿಲ್ಲಾ ಪಂಚಾಯತಿ ಸದಸ್ಯರು.ಸಲ್ಮಾನ್ ಯುವ ಮುಖಂಡರು,ಶ್ರೀ ಸಿ.ಟಿ ಕೃಷ್ಣ ಮೂರ್ತಿ ಅಭಿಮಾನಿ ಬಳಗದವರು ಕೇಕ್ ಕತ್ತರಿಸಿ ಸನ್ಮಾನಿಸಿ ಗೌರವಿಸಿದರು ಕಾರ್ಯಕ್ರಮದಲ್ಲಿ ಗಣ್ಯತಿ ಗಣ್ಯರು ಉಪಸ್ಥಿತರಿದ್ದರು.












