ಚರಂಡಿ ಅವ್ಯವಸ್ಥೆಗೆ ಕೆರೆಯಾದ ರಸ್ತೆ : ಗ್ರಾಮಸ್ಥರ ಗೋಳು ಕೇಳುವವರು ಯಾರು?

ವರದಿ:- ಅರುಣ್ ಕುಮಾರ್.ಎಸ್(ದೊಡ್ಡ ಉಳ್ಳಾರ್ತಿ)

ಚಳ್ಳಕೆರೆ :- ನಗರಂಗೆರೆ ಗ್ರಾಮದ ಬೋವಿ ಕಾಲೋನಿಯ ಬಾಬು ಅವರ ಮನೆ ಸಮೀಪ ಮಳೆ ನೀರು ರಸ್ತೆಯ ಮೇಲೆಯೇ ನಿಂತು ಕೆರೆಯಂತಾಗಿರುವ ಪರಿಣಾಮ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಸೂಕ್ತ ಚರಂಡಿ ವ್ಯವಸ್ಥೆಯ ಕೊರತೆಯಿಂದ ಮಳೆ ನೀರು ಹರಿದು ಹೋಗದೆ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು,
ಮಳೆಯ ನೀರು ಮನೆಗೆ ನುಗ್ಗುತ್ತಿವೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬೋವಿ ಕಾಲೋನಿಯಿಂದ ಮುಖ್ಯ ಚರಂಡಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಇಲ್ಲದ ಕಾರಣ ಪ್ರತೀ ಮಳೆಯಲ್ಲೂ ಇದೇ ಸಮಸ್ಯೆ ಮರುಕಳಿಸುತ್ತಿದೆ. ರಸ್ತೆಯ ಮೇಲೆ ನೀರು ನಿಂತಿರುವುದರಿಂದ ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ಹಾಗೂ ದಿನಗೂಲಿ ಕಾರ್ಮಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕರು ಜಾರಿ ಬಿದ್ದು ಗಾಯಗೊಂಡ ಘಟನೆಗಳೂ ನಡೆದಿವೆ ಎಂದು ನಿವಾಸಿಗಳು ದೂರಿದ್ದಾರೆ.ನಿಂತ ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದ್ದು, ಡೆಂಗ್ಯೂ, ಮಲೇರಿಯಾ ಹಾಗೂ ಚಿಕುನ್‌ಗುನ್ಯಾ ಸೇರಿದಂತೆ ಮಾರಕ ರೋಗಗಳು ಹರಡುವ ಭೀತಿ ಎದುರಾಗಿದೆ. ಚರಂಡಿ ನೀರು ಮಳೆ ನೀರಿನೊಂದಿಗೆ ಬೆರೆತು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ದುರ್ವಾಸನೆ ಆವರಿಸಿ ನೈರ್ಮಲ್ಯ ಸಂಪೂರ್ಣ ಹದಗೆಟ್ಟಿದೆ. ಸಾಂಕ್ರಾಮಿಕ ರೋಗಗಳ ಆತಂಕದಿಂದ ಸ್ಥಳೀಯರು ಭಯಭೀತರಾಗಿದ್ದಾರೆ.ಇನ್ನೊಂದೆಡೆ ನಿರಂತರವಾಗಿ ನೀರು ನಿಲ್ಲುತ್ತಿರುವ ಪರಿಣಾಮ ಸಮೀಪದ ಮನೆಗಳ ಅಡಿಪಾಯ ಹಾಗೂ ಗೋಡೆಗಳು ಶಿಥಿಲಗೊಳ್ಳುತ್ತಿದ್ದು, ಆಸ್ತಿಪಾಸ್ತಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಸಮಸ್ಯೆ ಬಗ್ಗೆ ಹಲವು ಬಾರಿ ಗಮನ ಸೆಳೆದರೂ ಯಾವುದೇ ಶಾಶ್ವತ ಪರಿಹಾರ ಕಂಡುಬಂದಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಆದ್ದರಿಂದ ಬೋವಿ ಕಾಲೋನಿಯಿಂದ ಮುಖ್ಯ ಚರಂಡಿಗೆ ಸಂಪರ್ಕ ಕಲ್ಪಿಸುವ ಸೂಕ್ತ ಅಳತೆಯ ಸಿ.ಸಿ. ಚರಂಡಿ ನಿರ್ಮಾಣ, ರಸ್ತೆ ಮಟ್ಟ ಸರಿಪಡಿಸುವುದು ಹಾಗೂ ಸಿ.ಸಿ. ರಸ್ತೆ ಅಥವಾ ಡಾಂಬರೀಕರಣ ಕಾಮಗಾರಿ ಕೈಗೊಳ್ಳುವ ಮೂಲಕ ಶಾಶ್ವತ ಪರಿಹಾರ ಒದಗಿಸಬೇಕು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾರೊಬ್ಬರೂ ಬಂದು ಸರಿಪಡಿಸುತ್ತಿಲ್ಲ, ಪ್ರಯೋಜನವಾಗುತ್ತಿಲ್ಲ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಸರಿ ಪಡಿಸಬೇಕೆಂದು  ಗ್ರಾಮಸ್ಥರು ಆಗ್ರಹಿಸಿದ್ದಾರೆ.ಸಾರ್ವಜನಿಕರ ಆರೋಗ್ಯ, ಸುರಕ್ಷತೆ ಹಾಗೂ ಮೂಲಭೂತ ಸೌಲಭ್ಯಗಳ ಪ್ರಶ್ನೆಯಾಗಿರುವ ಈ ಸಮಸ್ಯೆಯನ್ನು ಗ್ರಾಮ ಪಂಚಾಯಿತಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ತುರ್ತಾಗಿ ಪರಿಗಣಿಸಿ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ನಡೆಸುವುದಾಗಿ ಸ್ಥಳೀಯ ನಿವಾಸಿ ಬಾಬು ಮತ್ತು ಊರಿನ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಚರಂಡಿ ಅವ್ಯವಸ್ಥೆಗೆ ಕೆರೆಯಾದ ರಸ್ತೆ : ಗ್ರಾಮಸ್ಥರ ಗೋಳು ಕೇಳುವವರು ಯಾರು?