ಚಿತ್ರದುರ್ಗ(ಕರ್ನಾಟಕ ವಾರ್ತೆ).ಜೂ.03:
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಬೂತ್ ಮಟ್ಟದ ಏಜೆಂಟರುಉ (ಬಿಎಲ್ಒ) ಸಂಪೂರ್ಣ ಮಾಹಿತಿ ಹೊಂದುವುದು ಅಗತ್ಯವಾಗಿದ್ದು, ತಮಗೆ ನೀಡಿರುವ ಜವಾಬ್ದಾರಿ ಅರಿತು ನಿಷ್ಠೆಯಿಂದ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಯಾವುದೇ ಒಬ್ಬ ಅರ್ಹ ಮತದಾರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಬೂತ್ ಮಟ್ಟದ ಏಜೆಂಟರಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ಕುರಿತು ಮಾನ್ಯತಾ ಪಡೆದ ರಾಜಕೀಯ ಪಕ್ಷಗಳ ವತಿಯಿಂದ ವಿಧಾನಸಭಾ ಕ್ಷೇತ್ರವಾರು ನೇಮಕ ಮಾಡಲಾದ ಬಿಎಲ್ಎ-1 ಅವರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕಳೆದ ಆರು ತಿಂಗಳಿನಿಂದ ಜಿಲ್ಲಾಡಳಿತವು ನಿರಂತರವಾಗಿ ನಡೆಸಿದ ಸರ್ವೇ ಕಾರ್ಯದಿಂದಾಗಿ 2025ರ ಮತದಾರರ ಪಟ್ಟಿಯ 14,40,316 ಮತದಾರರ ಪೈಕಿ ಈಗಾಗಲೇ 13,96,284 ಮತದಾರರನ್ನು ಗುರುತಿಸಿ, ಶೇ.96.94 ರಷ್ಟು ಮ್ಯಾಪಿಂಗ್ ಮಾಡಲಾಗಿದೆ. ಆದರೆ, ಇನ್ನೂ 40,032 ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ. ಬೂತ್ ಮಟ್ಟದ ಏಜೆಂಟರು ತಮ್ಮ ಭಾಗದ ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಬಿಟ್ಟುಹೋಗಿರುವ ಮತದಾರರನ್ನು ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸೂಚಿಸಿದರು.
ಗುರುತಿಸಲಾದ ಪ್ರತಿಯೊಬ್ಬ ಮತದಾರನ ದಾಖಲಾತಿ ನಮೂನೆಯಲ್ಲಿ ನೂತನ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸಬೇಕು. ಹಳೆಯ ಗುರುತಿನ ಚೀಟಿಗಳ ಭಾವಚಿತ್ರಗಳು ಸರಿಯಾಗಿ ಇಲ್ಲದಿರುವುದರಿಂದ, ಮತಗಟ್ಟೆಗಳಲ್ಲಿ ಆಕ್ಷೇಪಣೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಮತದಾರರನ್ನು ಖುದ್ದಾಗಿ ಭೇಟಿ ಮಾಡಿ, ಅವರಿಂದ ಹೊಸ ಫೋಟೋ ಪಡೆದು ಅಪ್ಡೇಟ್ ಮಾಡಬೇಕಿದೆ. ಇದರೊಂದಿಗೆ ಮತದಾರರ ಪಟ್ಟಿ ಅತ್ಯಂತ ಸ್ವಚ್ಛ ಮತ್ತು ಪಾರದರ್ಶಕವಾಗಿರಬೇಕು. ಈ ಮೂಲಕ ಒಬ್ಬ ಮತದಾರನೂ ಬಿಟ್ಟುಹೋಗದಂತೆ ಸಹಕರಿಸಬೇಕು ಎಂದು ತಿಳಿಸಿದರು.
ಬಿಟ್ಟುಹೋದ ಮತದಾರರಲ್ಲಿ ಯಾರಾದರೂ ನಿಧನರಾಗಿದ್ದರೆ, ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು ಕಡ್ಡಾಯವಾಗಿ ಮರಣ ಪ್ರಮಾಣಪತ್ರ ಪಡೆದುಕೊಳ್ಳಲೇಬೇಕು. ಮರಣ ಪ್ರಮಾಣಪತ್ರವಿಲ್ಲದೆ ಯಾವುದೇ ಹೆಸರನ್ನು ಕಡಿತಗೊಳಿಸುವಂತಿಲ್ಲ. ಇದರೊಂದಿಗೆ ಮತದಾರರ ನೋಂದಣಿಗೆ ನಿಗದಿಪಡಿಸಲಾಗಿರುವ 12 ಪ್ರಮುಖ ದಾಖಲೆಗಳ ಪೈಕಿ ಸೂಕ್ತವಾದ ದಾಖಲೆಗಳನ್ನು ಕ್ರೋಢೀಕರಿಸಬೇಕು. ಸಾಮಾನ್ಯ ಕೂಲಿ ಕಾರ್ಮಿಕರು, ಅನಕ್ಷರಸ್ಥರ ಬಳಿ ಸೂಕ್ತ ದಾಖಲೆಗಳಿಲ್ಲದಿದ್ದರೆ, ಅವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸಹಾಯ ನೀಡಿ ಆಧಾರ್ ಕಾರ್ಡ್ ಮತ್ತಿತರ ಅಗತ್ಯ ದಾಖಲೆಗಳನ್ನು ಮಾಡಿಸಿಕೊಡಲು ಅಧಿಕಾರಿಗಳು ಮತ್ತು ಏಜೆಂಟರು ನೆರವಾಗಬೇಕೆಂದು ನಿರ್ದೇಶನ ನೀಡಿದರು.
ರಾಜಕೀಯ ಪಕ್ಷಗಳು ತಮ್ಮ ಬೂತ್ ಮಟ್ಟದ ಏಜೆಂಟರನ್ನು ಕಡ್ಡಾಯವಾಗಿ ನೇಮಕ ಮಾಡಿಕೊಳ್ಳಬೇಕು. ಇದರಿಂದ ಮುಂಬರುವ ಚುನಾವಣೆಗಳ ಸಿದ್ಧತೆಗೆ ಮತ್ತು ಚುನಾವಣಾ ಕಾರ್ಯಗಳು ಸುಸೂತ್ರವಾಗಿ ನಡೆಯಲು ಬಹಳ ಸಹಕಾರಿಯಾಗಲಿದೆ. ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷಗಳು ಬಿಎಲ್ಎಗಳನ್ನು ನೇಮಕ ಮಾಡುವುದರಿಂದ ತಮ್ಮ ಕ್ಷೇತ್ರ ವ್ಯಾಪ್ತಿಯ ಬೂತ್ ಮಟ್ಟದಲ್ಲಿ ಏನೆಲ್ಲಾ ಚಟುವಟಿಕೆಗಳು ನಡೆಯುತ್ತಿವೆ ಎಂಬ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಬಿಎಲ್ಎಗಳಿಗೆ ತಾಲೂಕು ಮಟ್ಟದಲ್ಲಿ ತರಬೇತಿ: ನೇಮಕಗೊಳ್ಳುವ ಬೂತ್ ಮಟ್ಟದ ಏಜೆಂಟರಿಗೆ ಅಗತ್ಯವಿರುವ ತರಬೇತಿಯನ್ನು ನೀಡಲಾಗುವುದು. ತಾಲೂಕು ಮಟ್ಟದಲ್ಲಿ ಇಆರ್ಒ ಹಾಗೂ ಎಇಆರ್ಒಗಳು ಇರಲಿದ್ದು, ಅವರು ಬಿಎಲ್ಎಗಳ ಜವಾಬ್ದಾರಿಗಳು, ಕರ್ತವ್ಯಗಳು ಮತ್ತು ಅವರು ಕಾರ್ಯನಿರ್ವಹಿಸಬೇಕಾದ ಮಿತಿಗಳ ಬಗ್ಗೆ ಸಮಗ್ರವಾಗಿ ತರಬೇತಿ ನೀಡಲಿದ್ದಾರೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸದಾ ಇಆರ್ಒಗಳೊಂದಿಗೆ ಸಂಪರ್ಕದಲ್ಲಿದ್ದರೆ ತಾಲೂಕು ಮಟ್ಟದ ಎಲ್ಲಾ ಅಗತ್ಯ ಮಾಹಿತಿಗಳು ಸುಲಭವಾಗಿ ದೊರೆಯಲಿವೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಂದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಮುಖ್ಯ ಉದ್ದೇಶ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವುದು ಮತ್ತು ಅನರ್ಹರನ್ನು ನಿಯಮಾನುಸಾರ ಮತದಾರರ ಪಟ್ಟಿಯಿಂದ ಕೈಬಿಡುವುದಾಗಿದೆ. ಜೂನ್ 20 ರಿಂದ 29 ರವರೆಗೆ ಪೂರ್ವಸಿದ್ಧತೆ, ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ, ಜೂನ್ 30 ರಿಂದ ಜುಲೈ 29 ರವರೆಗೆ ಮತಗಟ್ಟೆ ಅಧಿಕಾರಿಗಳಿಂದ ಮನೆ ಮನೆ ಸಮೀಕ್ಷೆ, ಗಣತಿ ನಮೂನೆಗಳನ್ನು ಮತದಾರರಿಗೆ ಹಂಚುವುದು ಮತ್ತು ಸಂಗ್ರಹಿಸುವ ಕಾರ್ಯ ನಡೆಯಲಿದೆ. ಜುಲೈ 29ರಂದು ಮತಗಟ್ಟೆ ಪುನರ್ ವಿಂಗಡಣೆ ಸಂಬಂಧ ನಿಯಮಾನುಸಾರ ಪ್ರಸ್ತಾವ ಸಲ್ಲಿಕೆ, ಆಗಸ್ಟ್ 05ರಂದು ಎಸ್ಐಆರ್ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಈ ಹೊಸ ಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆ, ಇಲ್ಲಿಯವರೆಗೆ ಚಾಲ್ತಿಯಲ್ಲಿದ್ದ ಹಳೆಯ ಎಲ್ಲಾ ಮತದಾರರ ಪಟ್ಟಿಗಳು ಸಂಪೂರ್ಣವಾಗಿ ರದ್ದಾಗಲಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಚುನಾವಣಾ ತಹಶೀಲ್ದಾರ್ ಬೀಬೀ ಫಾತಿಮಾ, ಶಿರಸ್ತೆದಾರ ಮಲ್ಲಿಕಾರ್ಜುನ ನಾಯಕ ಸೇರಿದಂತೆ ಮಾನ್ಯತಾ ಪಡೆದ ರಾಜಕೀಯ ಪಕ್ಷಗಳ ವತಿಯಿಂದ ವಿಧಾನಸಭಾ ಕ್ಷೇತ್ರವಾರು ನೇಮಕ ಮಾಡಲಾದ ಬಿಎಲ್ಎ-1 ಇದ್ದರು.


ಮತದಾರರ ನೊಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೊಂದಣಾಧಿಕಾರಿಗಳಿಗೆ ಎಸ್ಐಆರ್ ಕುರಿತು ತರಬೇತಿ ಕಾರ್ಯಾಗಾರ
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿರ್ಲಕ್ಷೆ ವಹಿಸಿದರೆ ಕಠಿಣ ಕ್ರಮ
-ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್
ಚಿತ್ರದುರ್ಗ(ಕರ್ನಾಟಕ ವಾರ್ತೆ).ಜೂ.03:
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಅತ್ಯಂತ ಜವಾಬ್ದಾರಿಯುತ ಹಾಗೂ ಸಂವೇದನಾಶೀಲ ಕೆಲಸವಾಗಿದ್ದು, ಇದರಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸಿದರೆ ಸಹಿಸುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಮತದಾರರ ನೊಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೊಂದಣಾಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಎಸ್ಐಆರ್ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಚುನಾವಣಾ ಆಯೋಗವು ಪ್ರತಿಯೊಬ್ಬ ಬಿಎಲ್ಒ ಕಾರ್ಯವೈಖರಿಯನ್ನು ಸಾಫ್ಟ್ವೇರ್ ಮೂಲಕ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಕೆಲಸದ ತೀವ್ರತೆ ಹಾಗೂ ಗಾಂಭೀರ್ಯತೆ ಪ್ರತಿಯೊಬ್ಬರಿಗೂ ಇರಬೇಕು. ಯಾರಾದರೂ ಕೆಲಸ ಮಾಡಲು ನಿರಾಕರಿಸಿದರೆ, ನಿರ್ಲಕ್ಷ್ಯ ತೋರಿದರೆ ತಕ್ಷಣವೇ ಅವರನ್ನು ಅಮಾನತು ಮಾಡಿ, ಆ ಜಾಗಕ್ಕೆ ಮತ್ತೊಬ್ಬರನ್ನು ನೇಮಕ ಮಾಡಿ ಎಂದು ಮತದಾರರ ನೊಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೊಂದಣಾಧಿಕಾರಿಗಳಿಗೆ ತಾಕೀತು ಮಾಡಿದರು.
ಮತದಾರರ ಪಟ್ಟಿಯಲ್ಲಿ ಸಣ್ಣ ವ್ಯತ್ಯಾಸವಾದರೂ ಒಬ್ಬ ನಾಗರಿಕನ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಇದು ಅತ್ಯಂತ ಗಂಭೀರವಾದ ಅಪರಾಧ. ಕೆಲಸದಲ್ಲಿ ಏನಾದರೂ ಲೋಪದೋಷಗಳಾದರೆ ಬಿಎಲ್ಒ ಮಾತ್ರವಲ್ಲ, ನೇರವಾಗಿ ನೀವೇ ಹೊಣೆಯಾಗಬೇಕಾಗುತ್ತದೆ. ಚುನಾವಣಾ ಪ್ರಕ್ರಿಯೆಯಲ್ಲಿ ಸಣ್ಣ ತಪ್ಪು ದೊಡ್ಡ ಪರಿಣಾಮ ಬೀರುವುದರಿಂದ, ಪ್ರತಿಯೊಬ್ಬ ಅಧಿಕಾರಿಗಳು ತೀವ್ರ ನಿಗಾ ವಹಿಸಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಕ್ರಿಯವಾಗಿ ಕೆಲಸ ಮಾಡುವವರನ್ನು ಬಿಎಲ್ಒಗಳಾಗಿ ನೇಮಕ ಮಾಡಬೇಕು. ಈ ಕುರಿತು ಜೂನ್ 5ರೊಳಗಾಗಿ ಎಲ್ಲಾ ಬಿಎಲ್ಒಗಳ ನೇಮಕಾತಿ ಕುರಿತು ಕಡ್ಡಾಯವಾಗಿ ದೃಢೀಕರಣ ಸಲ್ಲಿಸಬೇಕು. ಆಯಾ ವ್ಯಾಪ್ತಿಯ ಅಧಿಕಾರಿಗಳೇ ಜೂನ್ 6ರ ಒಳಗಾಗಿ ಬಿಎಲ್ಎ, ಬಿಎಲ್ಒ ಮತ್ತು ಸೂಪರ್ವೈಸರ್ಗಳಿಗೆ ಕಡ್ಡಾಯವಾಗಿ ತರಬೇತಿ ನೀಡಬೇಕು ಎಂದರು.
ಜಿಲ್ಲಾ ಮಟ್ಟದಲ್ಲಿ ಈಗಾಗಲೇ ರಾಜಕೀಯ ಪಕ್ಷಗಳ ಸಭೆ ನಡೆಸಿ ಮಾಹಿತಿ ನೀಡಲಾಗಿದೆ. ಅದೇ ಮಾದರಿಯಲ್ಲಿ ತಾಲೂಕು ಮಟ್ಟದಲ್ಲಿಯೂ ಇಆರ್ಒ ಮತ್ತು ಎಇಆರ್ಒಗಳ ಅಧ್ಯಕ್ಷತೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಸಭೆ ಕರೆಯಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಕುರಿತಾದ ಮಾರ್ಗಸೂಚಿಗಳನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು ಹಾಗೂ ಅವರಲ್ಲಿ ಯಾವುದೇ ಗೊಂದಲಗಳಿದ್ದರೆ ತಕ್ಷಣವೇ ಬಗೆಹರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಮಾಸ್ಟರ್ ಟ್ರೈನರ್ ಎಸ್.ನಾಗಭೂಷಣ್ ಅವರು ಎಸ್ಐಆರ್ ಕುರಿತು ಮತದಾರರ ನೊಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೊಂದಣಾಧಿಕಾರಿಗಳಿಗೆ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಇಆರ್ಒಗಳಾದ ವೆಂಕಟೇಶ್ ನಾಯ್ಕ್, ಡಾ.ಕಾಂತರಾಜ್, ಚಂದ್ರಕುಮಾರ್, ರೇಷ್ಮ ಹಾನಗಲ್, ಎಇಆರ್ಒಗಳಾದ ಗೋವಿಂದರಾಜ್, ರೇಹಾನ್ ಪಾಷಾ, ಸಿದ್ದೇಶ್, ತಿರುಪತಿ ಪಾಟೀಲ್, ವಿಜಯ್ ಕುಮಾರ್, ಡಾ.ನಾಗವೇಣಿ, ಚುನಾವಣಾ ತಹಶೀಲ್ದಾರ್ ಬೀ ಬೀ ಫಾತಿಮಾ ಇದ್ದರು.









