ಜನ್ಮದಿನಾಚರಣೆ ಬೇಡ, ಮಠದ ವಾರ್ಷಿಕೋತ್ಸವವನ್ನೇ ಆಚರಿಸೋಣ: ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ

ಚಿತ್ರದುರ್ಗ, ಜು. 12: ಇನ್ನು ಮುಂದೆ ತಮ್ಮ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಆಚರಿಸದೇ, ಅದರ ಬದಲಿಗೆ ಮಠದ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಭಕ್ತರಿಗೆ ಕರೆ ನೀಡಿದರು.

ನಗರದ ಲಿಡ್ಕರ್ ಭವನದಲ್ಲಿ ಭಾನುವಾರ ಮಾದಿಗ ನೌಕರರ ಸಂಘದ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಈವರೆಗೆ ತಮ್ಮ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಇನ್ನುಮುಂದೆ ಜನ್ಮದಿನದ ಆಚರಣೆ ಬೇಡ, ಮಠದ ವಾರ್ಷಿಕೋತ್ಸವವನ್ನೇ ಎಲ್ಲರೂ ಸೇರಿ ಆಚರಿಸೋಣ ಎಂದು ಮನವಿ ಮಾಡಿದರು.

ತಾವು ಮಠದ ಪೀಠಾಧ್ಯಕ್ಷರಾಗಿ ಪಟ್ಟಾಭಿಷೇಕಗೊಂಡು 24 ವರ್ಷಗಳು ಪೂರ್ಣಗೊಂಡಿದ್ದು, ಮುಂದಿನ ವರ್ಷ 25ನೇ ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಸಮಾಜದ ಮುಖಂಡರು, ಭಕ್ತರು ಹಾಗೂ ಹಿತೈಷಿಗಳೊಂದಿಗೆ ಚರ್ಚಿಸಿ ಪಟ್ಟಾಭಿಷೇಕದ ಬೆಳ್ಳಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಘೋಷಿಸಿದರು.

ಸಮಾಜದ ವಿಚಾರವಾಗಿ ಮಾತನಾಡುವ ಸಂದರ್ಭಗಳಲ್ಲಿ ಕೆಲವರು ತಮ್ಮ ಭಾಷಣದ ಕೆಲವು ಭಾಗಗಳನ್ನು ಮಾತ್ರ ಕತ್ತರಿಸಿ, ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿರುವುದು ಬೇಸರದ ಸಂಗತಿ ಎಂದು ಶ್ರೀಗಳು ಹೇಳಿದರು. ಸೂಕ್ಷ್ಮ ವಿಚಾರಗಳಲ್ಲಿ ಎಲ್ಲರೂ ಪರಸ್ಪರ ಹೊಂದಾಣಿಕೆ, ಸಹನೆ ಮತ್ತು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಸಮುದಾಯದ ನಾಯಕರಿಗೆ ಸಲಹೆ ನೀಡಿದರು.

ಮೀಸಲಾತಿಯಿಂದ ದೊರೆಯುವ ಅವಕಾಶಗಳಲ್ಲಿ ನಮ್ಮ ಸಮುದಾಯದ ಪ್ರತಿನಿಧಿತ್ವ ಹೆಚ್ಚಾಗುವಂತೆ ನಾಯಕರು ವಿಶೇಷ ಗಮನಹರಿಸಬೇಕು ಎಂದ ಅವರು, ಬಿ.ಎನ್. ಚಂದ್ರಪ್ಪ, ನಾರಾಯಣಸ್ವಾಮಿ ಹಾಗೂ ಗೋವಿಂದ ಕಾರಜೋಳ ಅವರು ದೆಹಲಿಯಲ್ಲಿ ಸಮುದಾಯದ ಪ್ರಾತಿನಿಧ್ಯವನ್ನು ಉಳಿಸಿಕೊಂಡಿರುವುದನ್ನು ಸ್ಮರಿಸಿದರು. ಯಾವುದೇ ರಾಜಕೀಯ ಪಕ್ಷದಲ್ಲಿದ್ದರೂ ಅವರು ನಮ್ಮ ಸಮುದಾಯದವರೇ ಎಂಬ ಭಾವನೆ ಇರಬೇಕು. ಭಿನ್ನಾಭಿಪ್ರಾಯಗಳಿದ್ದರೆ ಸಾರ್ವಜನಿಕವಾಗಿ ಚರ್ಚಿಸುವ ಬದಲು ಒಳಗಡೆಯೇ ಕುಳಿತು ಬಗೆಹರಿಸಿಕೊಳ್ಳುವುದು ಉತ್ತಮ ಎಂದು ಕಿವಿಮಾತು ಹೇಳಿದರು.

ಹಿಂದೆ ಶಿಕ್ಷಣ ಹಾಗೂ ಬದುಕಿನ ಅವಕಾಶಗಳೇ ಇಲ್ಲದ ಪರಿಸ್ಥಿತಿಯಲ್ಲೂ ಹಿರಿಯರು ಸಾಧನೆ ಮಾಡಿದ್ದಾರೆ. ಇಂದು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೇರಿದಂತೆ ಅನೇಕ ಸರ್ಕಾರಿ ಸೌಲಭ್ಯಗಳು ಲಭ್ಯವಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಗಳನ್ನು ಅಲಂಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸತತ 35 ವರ್ಷಗಳ ಕಾಲ ಸಂಸದ ಹಾಗೂ ಸಚಿವರಾಗಿ ಸೇವೆ ಸಲ್ಲಿಸಿರುವ ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ಅವರಿಗೆ ನೀಡಿರುವ ಸಚಿವ ಖಾತೆ ಬಗ್ಗೆ ಸಮುದಾಯದಲ್ಲಿ ಅಸಮಾಧಾನವಿದೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು. ಈ ಹಿಂದೆ ಗೋವಿಂದ ಕಾರಜೋಳ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ಹೆಚ್ಚುವರಿಯಾಗಿ ಇದೇ ಖಾತೆ ನೀಡಲಾಗಿತ್ತು. ಅದೇ ಖಾತೆಯನ್ನು ಇದೀಗ ಕೆ.ಎಚ್. ಮುನಿಯಪ್ಪ ಅವರಿಗೆ ನೀಡಿರುವುದರಿಂದ ಸಮುದಾಯಕ್ಕೆ ನೋವಾಗಿದೆ. ಆದ್ದರಿಂದ ಶೀಘ್ರದಲ್ಲೇ ಅವರಿಗೆ ಸೂಕ್ತ ಹಾಗೂ ಮಹತ್ವದ ಖಾತೆ ನೀಡುವ ಮೂಲಕ ಸಮುದಾಯದ ನೋವನ್ನು ಶಮನಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯುವ ಹಾಗೂ ಉತ್ಸಾಹಿ ನಾಯಕತ್ವ ಹೊಂದಿದ್ದು, ನಮ್ಮ ಸಮುದಾಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಅವರನ್ನು ಮಠಕ್ಕೆ ಆಹ್ವಾನಿಸಿ ಗೌರವಿಸುವುದರ ಜೊತೆಗೆ ಸಮುದಾಯದ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಅವರ ಗಮನಕ್ಕೆ ತರೋಣ ಎಂದು ಹೇಳಿದರು.

ಒಳಮೀಸಲಾತಿ ಜಾರಿಯಾದ ಬಳಿಕ ವಿದ್ಯಾರ್ಥಿಗಳು ಈ ಹಿಂದೆ ಇದ್ದಂತೆ 101 ಜಾತಿಗಳೊಂದಿಗೆ ಸ್ಪರ್ಧಿಸುವ ಅಗತ್ಯವಿಲ್ಲ. ಈಗ 18 ರಿಂದ 20 ಜಾತಿಗಳ ನಡುವೆ ಮಾತ್ರ ಸ್ಪರ್ಧೆ ನಡೆಸಬೇಕಾಗಿರುವುದರಿಂದ ಉತ್ತಮ ಅಂಕ ಗಳಿಸಿ ಉನ್ನತ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆದುಕೊಳ್ಳುವತ್ತ ಗಮನಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ಜನ್ಮದಿನಾಚರಣೆ ಬೇಡ, ಮಠದ ವಾರ್ಷಿಕೋತ್ಸವವನ್ನೇ ಆಚರಿಸೋಣ: ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ