ಚಿತ್ರದುರ್ಗ: ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಕೆ.ಕೆ.ಹಟ್ಟಿ ಗ್ರಾಮಸ್ಥರು ಉತ್ತರೆ ಬೆಟ್ಟದಲ್ಲಿರುವ ತಿಮ್ಮಪ್ಪನ ದೇವರ ದರ್ಶನಕ್ಕೆ ಪಾದಯಾತ್ರೆ ನಡೆಸಿ ವಿಶೇಷ ಪೂಜೆ ಸಲ್ಲಿಸಿದರು.
Thank you for reading this post, don't forget to subscribe!ಭಾನುವಾರ ಬೆಳಗ್ಗೆ 9 ಗಂಟೆಗೆ ಕೆ.ಕೆ.ಹಟ್ಟಿಯಿಂದ ಆರಂಭವಾದ ಪಾದಯಾತ್ರೆಯಲ್ಲಿ ಗ್ರಾಮಸ್ಥರು ಮೊದಲು ಐತಿಹಾಸಿಕ ಮಾದಿಗನ ದೊಣ್ಣೆ ತಲುಪಿ, ಅಲ್ಲಿ ಗಂಗಾಸ್ಥಾನ ಪೂಜೆ ನೆರವೇರಿಸಿದರು. ಬಳಿಕ ದೇವರಿಗೆ ಇಷ್ಟವಾದ ನೈವೇದ್ಯವನ್ನು ತಯಾರಿಸಿ ಅರ್ಪಿಸಿದರು. ನಂತರ ಸುಮಾರು ನಾಲ್ಕು ಕಿಲೋಮೀಟರ್ಗಳಷ್ಟು ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಬೆಟ್ಟದ ಮಾರ್ಗದಲ್ಲಿ ಯುವಕರು ಹಾಗೂ ಗ್ರಾಮಸ್ಥರು ಉತ್ಸಾಹದಿಂದ ಹೆಜ್ಜೆ ಹಾಕುತ್ತ ತಿಮ್ಮಪ್ಪನ ದೇವರ ಸನ್ನಿಧಿ ತಲುಪಿದರು.
ದೇವರ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ಹಾಗೂ ಪ್ರಸಾದ ಸಮರ್ಪಿಸಿ ಮಳೆ ಸಮೃದ್ಧಿಯಾಗಿ ಸುರಿಯಲಿ, ರೈತರ ಬದುಕು ಹಸನಾಗಲಿ ಎಂದು ಸಂಕಲ್ಪ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಪೂಜೆಯ ನಂತರ ಸಂಪ್ರದಾಯದಂತೆ ಮೂಡಲು ಮನೆ ಹಾಕಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ಮಾದಿಗನ ದೊಣ್ಣೆಗೆ ಮರಳಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ, ಕೃಷಿಕ ಹಾಗೂ ಗ್ರಾಮೀಣ ಚರಿತ್ರೆಯ ಅಧ್ಯಯನಕಾರ ಲಕ್ಷ್ಮಣ್ ಹೂಗಾರ್ ಮಾತನಾಡಿ, ಉತ್ತರೆ ಬೆಟ್ಟದಲ್ಲಿರುವ ವಿವಿಧ ಬಗೆಯ ಸಸ್ಯಸಂಪತ್ತು, ಅಪರೂಪದ ಔಷಧೀಯ ಗಿಡಗಳು ಹಾಗೂ ಧೂಪದ ಮರದ ವಿಶೇಷತೆ ಕುರಿತು ಮಾಹಿತಿ ನೀಡಿದರು. ಪ್ರಕೃತಿಯ ಮಡಿಲಿನಲ್ಲಿ ಕಳೆದ ಈ ಪಾದಯಾತ್ರೆ ಜೀವನದ ಅತ್ಯಂತ ಸುಂದರ ಕ್ಷಣಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಗಡಾರಿ ಕಷ್ಟಪ್ಪ ಮಾತನಾಡಿ, ಬೆಟ್ಟದಲ್ಲಿ ಬೆಳೆಯುವ ನೆಲ್ಲಿಕಾಯಿಯ ಔಷಧೀಯ ಹಾಗೂ ಪರಿಸರದ ಮಹತ್ವವನ್ನು ವಿವರಿಸಿದರು.
ಜಯಪ್ರಕಾಶ್ ಆರ್. ಮಾತನಾಡಿ, ಈ ಬಾರಿ ಮುಂಗಾರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಶ್ರಾವಣ ಮಾಸದ ಪೂಜೆಯನ್ನು ಮುಂಚಿತವಾಗಿಯೇ ನಡೆಸಿ ಮಳೆಗಾಗಿ ವಿಶೇಷ ಸಂಕಲ್ಪ ಮಾಡಿ ತಿಮ್ಮಪ್ಪನ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅವಿನಾಶ್ ಸಿ., ಬಂಡಿ ರಂಗ, ದ್ಯಾಮಣ್ಣ, ಶಶಿಕುಮಾರ್, ಭಾಸ್ಕರ್, ದಿಂಡಾವರ ರಾಜು, ಅಶೋಕ್ ಹಾಗೂ ಕೆ.ಕೆ.ಹಟ್ಟಿ ಗ್ರಾಮದ ಅನೇಕ ಯುವಕರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.














