ಜಾತಿ ರಾಜಕಾರಣವಲ್ಲ, ನೀತಿ ರಾಜಕಾರಣ ಮಾಡಿ; ಜನಗಳಿಕೆಯೇ ಶಾಶ್ವತ ಸಂಪತ್ತು – ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಹಿರಿಯೂರಿನಲ್ಲಿ ದಿ. ಡಿ. ಸುಧಾಕರ್ ನುಡಿ ನಮನ ಕಾರ್ಯಕ್ರಮ; ₹244 ಕೋಟಿ ಕೆರೆ ತುಂಬಿಸುವ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ಘೋಷಣೆ

ಹಿರಿಯೂರು: “ಜಾತಿ ರಾಜಕಾರಣದಿಂದಲ್ಲ, ನೀತಿ ಮತ್ತು ಮಾನವೀಯತೆಯ ರಾಜಕಾರಣದಿಂದಲೇ ಜನರ ಹೃದಯ ಗೆಲ್ಲಬಹುದು. ಹಣ ಗಳಿಕೆ ಶಾಶ್ವತವಲ್ಲ, ಜನಗಳಿಕೆಯೇ ಶಾಶ್ವತ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.

Thank you for reading this post, don't forget to subscribe!

ಪಟ್ಟಣದ ನೆಹರು ಮೈದಾನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಹಿರಿಯೂರು ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ದಿವಂಗತ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರಿಗೆ ಆಯೋಜಿಸಿದ್ದ ‘ನುಡಿ ನಮನ’ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

“ಸರಳತೆ, ಮಾನವೀಯತೆ ಮತ್ತು ಮನುಷ್ಯತ್ವಕ್ಕೆ ಮತ್ತೊಂದು ಹೆಸರೇ ಡಿ. ಸುಧಾಕರ್. ಜಿಲ್ಲೆಯಲ್ಲಿ ಜಾತಿ ಬಲವಿಲ್ಲದಿದ್ದರೂ ನೀತಿ ಬಲದ ಮೂಲಕ ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ಜನಸೇವೆ ಮಾಡಿದ ಅಪರೂಪದ ನಾಯಕ ಅವರು. ವ್ಯಕ್ತಿ ಸಂಪಾದಿಸಿದ ಆಸ್ತಿ-ಪಾಸ್ತಿ ಮರಣಾನಂತರ ಜೊತೆಗೆ ಬರುವುದಿಲ್ಲ. ಆದರೆ ಅವರು ಗಳಿಸಿದ ಗೌರವ, ಪ್ರೀತಿ, ಸಂಬಂಧ, ದಾನ-ಧರ್ಮ ಮತ್ತು ಮಾನವೀಯತೆಯೇ ಅವರನ್ನು ಶಾಶ್ವತವಾಗಿ ಜೀವಂತವಾಗಿರಿಸುತ್ತದೆ” ಎಂದು ಹೇಳಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಐಮಂಗಲ ಹಾಗೂ ಜವನಗೊಂಡನಹಳ್ಳಿ ಹೋಬಳಿಯ 16 ಕೆರೆಗಳಿಗೆ ನೀರು ತುಂಬಿಸುವ ₹244 ಕೋಟಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಘೋಷಿಸಿದರು.

“ಈ ಯೋಜನೆ ಡಿ. ಸುಧಾಕರ್ ಅವರ ಬಹುದಿನಗಳ ಕನಸಾಗಿತ್ತು. ಅನೇಕ ಬಾರಿ ನನ್ನೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದರು. ಅವರ ಕನಸನ್ನು ನನಸು ಮಾಡುವ ಉದ್ದೇಶದಿಂದ ಸರ್ಕಾರ ಯೋಜನೆಗೆ ಮಂಜೂರಾತಿ ನೀಡಿದೆ” ಎಂದರು.

ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿಗೊಳಿಸುವಲ್ಲಿ ಡಿ. ಸುಧಾಕರ್ ಅವರ ಪಾತ್ರ ಮಹತ್ವದ್ದಾಗಿತ್ತು. ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಅವರ ವಿಶೇಷ ಒತ್ತಾಸೆಯಿತ್ತು. ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಸಮನ್ವಯ ಸಾಧಿಸಿ ಜಿಲ್ಲೆಯ ಅಭಿವೃದ್ಧಿಗೆ ಅವರು ಸಲ್ಲಿಸಿದ ಸೇವೆ ಸದಾ ಸ್ಮರಣೀಯ ಎಂದು ಹೇಳಿದರು.

ಸುಧಾಕರ್ ಅಗಲಿಕೆ ಕಾಂಗ್ರೆಸ್‌ಗೆ ತುಂಬಲಾರದ ನಷ್ಟ: ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, “ಡಿ. ಸುಧಾಕರ್ ಅವರ ಅಗಲಿಕೆ ಕೇವಲ ಹಿರಿಯೂರು ಅಥವಾ ಚಿತ್ರದುರ್ಗ ಜಿಲ್ಲೆಗೆ ಮಾತ್ರವಲ್ಲ, ಇಡೀ ರಾಜ್ಯ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಧರ್ಮನಿರಪೇಕ್ಷ, ಜಾತ್ಯತೀತ, ಜನಪರ ಮತ್ತು ಕ್ರಿಯಾಶೀಲ ನಾಯಕರು. ತಮ್ಮ ಸಮುದಾಯದ ಸಂಖ್ಯಾಬಲ ಕಡಿಮೆ ಇದ್ದರೂ ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ರಾಜಕೀಯ ಕ್ಷೇತ್ರದಲ್ಲಿ ವಿಶಿಷ್ಟ ಗುರುತು ಮೂಡಿಸಿದ್ದಾರೆ” ಎಂದು ಹೇಳಿದರು.

ಜನಬಲವೇ ಸುಧಾಕರ್ ಅವರ ರಾಜಕೀಯ ಶಕ್ತಿ: ಬಿ.ಕೆ. ಹರಿಪ್ರಸಾದ್

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮಾತನಾಡಿ, “ಭಾರವಾದ ಹೃದಯದೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಡಿ. ಸುಧಾಕರ್ ಅವರು ಮೂರು ದಶಕಗಳ ಕಾಲ ಜನಸೇವೆಯಲ್ಲಿ ತೊಡಗಿದ್ದರು. ವ್ಯಕ್ತಿಯ ವಯಸ್ಸಲ್ಲ, ಅವರು ಸಮಾಜಕ್ಕೆ ನೀಡಿದ ಸೇವೆಯೇ ಅವರನ್ನು ಅಮರಗೊಳಿಸುತ್ತದೆ. ಜಾತಿಯ ಬಲವಿಲ್ಲದಿದ್ದರೂ ಜನಬಲದಿಂದ ರಾಜಕೀಯದಲ್ಲಿ ಯಶಸ್ಸು ಕಂಡ ನಾಯಕ ಅವರು. ರೈತರು, ಮಹಿಳೆಯರು, ಕಾರ್ಮಿಕರು ಹಾಗೂ ದುಡಿಯುವ ವರ್ಗದೊಂದಿಗೆ ಸದಾ ಬೆರೆತು ಕೆಲಸ ಮಾಡಿದ ಕಾರಣ ಅವರು ಜನಮನದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ” ಎಂದು ನುಡಿದರು.

ಮಾಜಿ ಸಚಿವ ಎಚ್. ಆಂಜನೇಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಿ. ಸುಧಾಕರ್ ಅವರ ಪತ್ನಿ ಹರ್ಷಿಣಿ ಸುಧಾಕರ್, ಪುತ್ರ ಸುಹಾಸ್, ಪುತ್ರಿ ಸ್ಪೂರ್ತಿ, ಅಳಿಯ ನಿತಿನ್, ಸಹೋದರರಾದ ಡಿ.ಎಸ್. ಕುಮಾರ್ ಹಾಗೂ ಸುರೇಶ್, ಸಚಿವ ಸತೀಶ್ ಜಾರಕಿಹೊಳಿ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕರಾದ ಕೆ.ಸಿ. ವೀರೇಂದ್ರ ಪಪ್ಪಿ, ಟಿ. ರಘುಮೂರ್ತಿ, ಬಿ.ಜಿ. ಗೋವಿಂದಪ್ಪ, ಎಚ್.ವಿ. ವೆಂಕಟೇಶ್, ತನ್ವೀರ್ ಶೇಠ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಎಚ್. ಆಂಜನೇಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್ ಪೀರ್, ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಕಾಂಗ್ರೆಸ್ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಚಿತ್ರನಟ, ಸಂಗೀತ ನಿರ್ದೇಶಕ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಅವರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

.

ಜಾತಿ ರಾಜಕಾರಣವಲ್ಲ, ನೀತಿ ರಾಜಕಾರಣ ಮಾಡಿ; ಜನಗಳಿಕೆಯೇ ಶಾಶ್ವತ ಸಂಪತ್ತು – ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್