ಹಿರಿಯೂರು: ಹಿರಿಯೂರು ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ದಿವಂಗತ ಡಿ. ಸುಧಾಕರ್ ಆರಂಭಿಸಿದ್ದ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ತಾಲೂಕಿನ ರೈತರ ಜಮೀನುಗಳಿಗೆ ನೀರು ತಲುಪಿಸುವ ಸಂಕಲ್ಪದೊಂದಿಗೆ ಅವರ ಪುತ್ರ ಸುಹಾಸ್ ಸುಧಾಕರ್ ಮುಂದಾಗಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಸುಹಾಸ್ ಸುಧಾಕರ್, ತಮ್ಮ ತಂದೆ ಡಿ. ಸುಧಾಕರ್ ಅವರು ಹಿರಿಯೂರು ತಾಲೂಕಿನ ರೈತರ ಹಿತದೃಷ್ಟಿಯಿಂದ ಭದ್ರಾ ಮೇಲ್ದಂಡೆ ಯೋಜನೆಯಡಿ 64 ಕೆರೆಗಳಿಗೆ ನೀರು ತುಂಬಿಸುವ ಹಾಗೂ 37,131 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಕಲ್ಪಿಸುವ ₹1,447 ಕೋಟಿ ವೆಚ್ಚದ ನಾಲ್ಕು ಬ್ಲಾಕ್ಗಳ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅವಿರತ ಶ್ರಮಿಸಿದ್ದರು ಎಂದು ಸ್ಮರಿಸಿದ್ದಾರೆ.
ತಂದೆಯವರು ಕಂಡ ಕನಸು ಅರ್ಧದಲ್ಲೇ ನಿಲ್ಲಬಾರದು ಎಂಬ ಉದ್ದೇಶದಿಂದ, ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಿ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಮತ್ತು ಐಮಂಗಲ ಹೋಬಳಿ ಸೇರಿದಂತೆ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಶೀಘ್ರವಾಗಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ, ಬಾಕಿ ಉಳಿದಿರುವ ಹನಿ ನೀರಾವರಿ ಕಾಮಗಾರಿಗಳಿಗೆ ಕೂಡಲೇ ಚಾಲನೆ ನೀಡಿ ಶೀಘ್ರ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಸಂಬಂಧ ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿರುವ ಸುಹಾಸ್ ಸುಧಾಕರ್, ರೈತರ ಬಹುದಿನಗಳ ಕನಸಾದ ನೀರಾವರಿ ಯೋಜನೆಗೆ ವೇಗ ನೀಡುವಂತೆ ಕೋರಿದ್ದಾರೆ.
“ತಂದೆಯವರು ಆರಂಭಿಸಿದ ಜನಪರ ಕಾರ್ಯವನ್ನು ಪೂರ್ಣಗೊಳಿಸುವುದು ನನ್ನ ಕರ್ತವ್ಯ. ಹಿರಿಯೂರಿನ ಪ್ರತಿಯೊಬ್ಬ ರೈತನ ಜಮೀನಿಗೆ ನೀರು ತಲುಪುವವರೆಗೂ ನನ್ನ ಪ್ರಯತ್ನ ಮತ್ತು ಹೋರಾಟ ನಿರಂತರವಾಗಿರುತ್ತದೆ” ಎಂದು ಸುಹಾಸ್ ಸುಧಾಕರ್ ತಿಳಿಸಿದ್ದಾರೆ.
ಈ ಹೇಳಿಕೆ ಹಿರಿಯೂರು ತಾಲೂಕಿನ ರೈತರಲ್ಲಿ ಹೊಸ ಭರವಸೆ ಮೂಡಿಸಿದ್ದು, ಜವನಗೊಂಡನಹಳ್ಳಿ ಹಾಗೂ ಐಮಂಗಲ ಹೋಬಳಿ ಸೇರಿದಂತೆ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಗ್ರಾಮಗಳ ಜನರು ಕಾಮಗಾರಿಗಳು ಶೀಘ್ರ ಪೂರ್ಣಗೊಂಡು ಕೆರೆಗಳು ತುಂಬುವ ದಿನಕ್ಕಾಗಿ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.
.













