ವರದಿ :- ಅರುಣ್ ಕುಮಾರ್. ಎಸ್ (ದೊಡ್ಡ ಉಳ್ಳಾರ್ತಿ)
ಚಳ್ಳಕೆರೆ, ಜೂನ್ 2 :- ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೇ ತಿಂಗಳಿನ ಕಾರ್ಯದರ್ಶಿಗಳ ಪ್ರಗತಿಪರಿಶೀಲನಾ ಸಭೆಯು ಚಳ್ಳಕೆರೆಯ ನಂದಿನಿ ಉಪ ಕಚೇರಿಯ ಕುರಿಯನ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಇತ್ತೀಚೆಗೆ ನಿಧನರಾದ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿ, ಶ್ರದ್ಧಾಂಜಲಿ ಅರ್ಪಿಸಲಾಯಿತು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿ.ಸಿ. ಸಂಜೀವಮೂರ್ತಿ.ಹಾಲು ಉತ್ಪಾದಕರ ಸಹಕಾರ ಸಂಘಗಳು ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿದ್ದು, ರೈತರು ಹಾಗೂ ಹೈನುಗಾರರ ಅಭಿವೃದ್ಧಿಗೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಪ್ರತಿಯೊಂದು ಸಂಘದ ಕಾರ್ಯದರ್ಶಿಗಳು ಪಾರದರ್ಶಕ ಆಡಳಿತ, ಸದಸ್ಯರ ವಿಶ್ವಾಸ ಹಾಗೂ ಗುಣಮಟ್ಟದ ಸೇವೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹಾಲು ಸಂಗ್ರಹಣೆಯ ಪ್ರಮಾಣ ಹೆಚ್ಚಿಸುವುದರ ಜೊತೆಗೆ ಗುಣಮಟ್ಟ ಕಾಪಾಡುವತ್ತ ವಿಶೇಷ ಗಮನ ಹರಿಸಬೇಕು. ಸರ್ಕಾರ ಹಾಗೂ ಶಿಮುಲ್ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಪ್ರತಿಯೊಬ್ಬ ಹೈನುಗಾರ ರೈತನಿಗೂ ತಲುಪಿಸುವ ಜವಾಬ್ದಾರಿ ಕಾರ್ಯದರ್ಶಿಗಳ ಮೇಲಿದೆ ಎಂದು ತಿಳಿಸಿದರು.
ಹಾಲು ಉತ್ಪಾದನೆ ಹೆಚ್ಚಳ, ಪಶುಗಳ ಆರೋಗ್ಯ ರಕ್ಷಣೆ, ಕೃತಕ ಗರ್ಭಧಾರಣೆ, ಮೇವು ಅಭಿವೃದ್ಧಿ ಹಾಗೂ ರೈತರಿಗೆ ಅಗತ್ಯ ಮಾಹಿತಿಯನ್ನು ಸಕಾಲದಲ್ಲಿ ಒದಗಿಸುವ ಮೂಲಕ ಸಂಘಗಳ ಪ್ರಗತಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳು ಆರ್ಥಿಕವಾಗಿ ಸದೃಢವಾಗುವ ಮೂಲಕ ರೈತರ ಜೀವನಮಟ್ಟ ಸುಧಾರಣೆಗೆ ಪ್ರಮುಖ ಪಾತ್ರವಹಿಸುತ್ತಿದ್ದು, ಸಂಘಗಳ ಕಾರ್ಯಚಟುವಟಿಕೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಬೇಕಿದೆ. ಕಾರ್ಯದರ್ಶಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಸಂಘಗಳನ್ನು ಮಾದರಿ ಸಂಸ್ಥೆಗಳನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ವಿವಿಧ ಸಂಘಗಳ ಕಾರ್ಯನಿರ್ವಹಣೆ, ಹಾಲು ಸಂಗ್ರಹಣೆಯ ಪ್ರಗತಿ, ಸದಸ್ಯರ ನೋಂದಣಿ, ಆರ್ಥಿಕ ಸ್ಥಿತಿ ಹಾಗೂ ಮುಂದಿನ ದಿನಗಳ ಕಾರ್ಯಯೋಜನೆ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು. ಚಳ್ಳಕೆರೆ ವಿಭಾಗಾಧಿಕಾರಿ ಎಂ. ಪುಟ್ಟರಾಜು ಹಾಗೂ ಮಾರ್ಗ ವಿಸ್ತರಣಾಧಿಕಾರಿ ನಯಾಜ್ ಬೇಗ್ ಅವರು ಕಾರ್ಯದರ್ಶಿಗಳಿಗೆ ಕಂಪ್ಯೂಟರ್ ತರಬೇತಿ ನೀಡುವುದರ ಜೊತೆಗೆ ವಿವಿಧ ಸಂಘಗಳ ಕಾರ್ಯನಿರ್ವಹಣೆಯ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.ಚಳ್ಳಕೆರೆ ಮತ್ತು ಮೊಳಕಾಲ್ಮೂರು ಕ್ಷೇತ್ರಗಳಿಗೆ ಹೊಸದಾಗಿ ನೇಮಕಗೊಂಡಿರುವ ಪಶುವೈದ್ಯಾಧಿಕಾರಿ ಡಾ. ಪ್ರದೀಪ್ ಅವರು ಸಭೆಯಲ್ಲಿ ಭಾಗವಹಿಸಿ ಹಾಲು ಉತ್ಪಾದಕರಿಗೆ ಪಶುಸಂಗೋಪನೆ ಹಾಗೂ ಆರೋಗ್ಯ ಸೇವೆಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮಾಲೋಚಕ ಭರತ್, ಕಂಪ್ಯೂಟರ್ ಆಪರೇಟರ್ ಅಭಿಷೇಕ್, ಸುಧೀಂದ್ರ ಸೇರಿದಂತೆ ಕಚೇರಿ ಸಿಬ್ಬಂದಿ ವರ್ಗದವರು .
ಸಭೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತಾತ್ಮಕ ಕಾರ್ಯಕ್ಷಮತೆ ಹೆಚ್ಚಿಸುವುದು, ಡಿಜಿಟಲ್ ವ್ಯವಸ್ಥೆಗಳ ಸಮರ್ಪಕ ಬಳಕೆ ಹಾಗೂ ಸದಸ್ಯರಿಗೆ ಉತ್ತಮ ಸೇವೆ ಒದಗಿಸುವ ಕುರಿತು ಚರ್ಚೆ ನಡೆಸಲಾಯಿತು.












